Last Updated:
ಗಗ್ಗರ ಎನ್ನೋದು ದೈವಗಳ ಆಭರಣಗಳ ಒಂದು ಭಾಗವಾಗಿದ್ದು, ದೈವಗಳ ನರ್ತಕರು ಮಾತ್ರವೇ ಇದನ್ನು ಧರಿಸಬೇಕು ಎನ್ನುವ ನಿಯಮವಿದೆ.
ದಕ್ಷಿಣಕನ್ನಡ: ತುಳುನಾಡಿನಲ್ಲಿ(Tulunadu) ದೈವಾರಾಧನೆ ಅತ್ಯಂತ ಮಹತ್ವವಿದ್ದು, ತುಳುನಾಡಿನ ಎಲ್ಲಾ ಜಾತಿ, ಪಂಗಡಗಳ ಜನರ ಮೂಲ ಮನೆಗಳಲ್ಲಿ ಒಂದಲ್ಲ ಒಂದು ದೈವಕ್ಕೆ ಆರಾಧನೆ ನಡೆದೇ ನಡೆಯುತ್ತೆ. ಈ ದೈವಗಳ ನೇಮೋತ್ಸವದ ಸಂದರ್ಭದಲ್ಲಿ 16 ಕಟ್ಟುಪಾಡುಗಳನ್ನು ಯಾವುದೇ ಚ್ಯುತಿ ಬರದಂತೆ ಪಾಲಿಸಿಕೊಂಡು ಬರಲಾಗುತ್ತದೆ. ದೈವ ನರ್ತಕ ತನ್ನ ವೇಷಭೂಷಣಗಳನ್ನು ತೊಡುವುದರಿಂದ ಹಿಡಿದು ದೈವವು ಭಕ್ತರಿಗೆ(Devotees) ಅಭಯ ನೀಡಿ ದೈವಗಳ ನೇಮೋತ್ಸವ ಮುಗಿಯುವ ತನಕ ಈ 16 ಕಟ್ಟುಪಾಡುಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತದೆ.
ಗಗ್ಗರ ಅಂದ್ರೆ ಏನು?
ಇಂಥ ಕಟ್ಟುಪಾಡುಗಳಲ್ಲಿ ಅತ್ಯಂತ ಪ್ರಮುಖವಾದುದು ದೈವಗಳು ಗಗ್ಗರ ಕಟ್ಟುವುದು. ಗಗ್ಗರ ಎನ್ನೋದು ದೈವಗಳ ಆಭರಣಗಳ ಒಂದು ಭಾಗವಾಗಿದ್ದು, ದೈವಗಳ ನರ್ತಕರು ಮಾತ್ರವೇ ಇದನ್ನು ಧರಿಸಬೇಕು ಎನ್ನುವ ನಿಯಮವಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ, ನಾಟಕಗಳಲ್ಲಿ ದೈವಗಳ ಪಾತ್ರಗಳನ್ನು ಪರಿಚಯಿಸಲಾಗುತ್ತಾದರೂ, ಆ ಪಾತ್ರಗಳನ್ನು ಮಾಡುವ ಕಲಾವಿದ ಯಾವುದೇ ಕಾರಣಕ್ಕೂ ಗಗ್ಗರವನ್ನು ಕಟ್ಟುವುದಿಲ್ಲ. ಅಷ್ಟೊಂದು ಪವಿತ್ರ ಸ್ಥಾನಮಾನ ದೈವಗಳ ಗಗ್ಗರಕ್ಕಿವೆ.
ಇದನ್ನೂ ಓದಿ: Ganapati Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾಧಿಗಳು ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡದೆ ಇರಲಾರರು!
ಗಗ್ಗರ ಕಟ್ಟಿದ ವ್ಯಕ್ತಿ ದೈವವಾಗಿ ಬದಲಾವಣೆ
ಗೆಜ್ಜೆಯಂತೆ ಶಬ್ದ ತರುವ ಈ ಗಗ್ಗರಗಳನ್ನು ತಾಮ್ರದಿಂದ ತಯಾರಿಸಲಾಗುತ್ತದೆ. ದೈವಗಳ ನೇಮೋತ್ಸವದ ಪ್ರಥಮ ಹಂತವಾಗಿ ದೈವಕ್ಕೆ ಎಣ್ಣೆ ಬೂಳ್ಯ ಕೊಡಲಾಗುತ್ತದೆ. ಆ ಬಳಿಕ ನರ್ತಕ ಆಯಾಯ ದೈವಗಳಿಗೆ ಬೇಕಾದ ರೀತಿಯಲ್ಲಿ ವೇಷ ಹಾಕಿದ ಬಳಿಕ ಈ ಗಗ್ಗರವನ್ನು ಕಟ್ಟುತ್ತಾನೆ. ಗಗ್ಗರ ಕಟ್ಟಿದ ಬಳಿಕ ಆ ವ್ಯಕ್ತಿ ದೈವವಾಗುತ್ತಾನೆ. ಆ ಬಳಿಕ ಆತನ ಎಲ್ಲಾ ನುಡಿಗಳೂ ದೈವದ ನುಡಿಗಳಾಗುತ್ತದೆ ಎನ್ನೋದು ತುಳುವರ ನಂಬಿಕೆ.
ಗಗ್ಗರಕ್ಕೆ ಎಷ್ಟು ಮಹತ್ವವಿದೆ ಎಂದರೆ ಕೆಲವು ಕಡೆಗಳಲ್ಲಿ ದೈವಗಳ ನೇಮೋತ್ಸವ ಎನ್ನುವುದರ ಬದಲು ದೈವಗಳ ಗಗ್ಗರ ಸೇವೆ ಎಂದೂ ಸಂಬೋಧಿಸಲಾಗುತ್ತದೆ. ಗಗ್ಗರ ಕಟ್ಟಿದ ಬಳಿಕ ದೈವದ ವೇಷ ಹಾಕಿರುವ ವ್ಯಕ್ತಿ ದೈವದಂತೆ ಬದಲಾಗುತ್ತಾನೆ ಮತ್ತು ಆತ ನುಡಿಯುವ ಒಂದೊಂದು ನುಡಿಗಳೂ ದೈವದ ನುಡಿಗಳೇ ಆಗುತ್ತೆ. ದೈವ ಭಕ್ತರು ಯಾವುದೇ ಕಾರಣಕ್ಕೂ ಈ ದೈವದ ನುಡಿಯನ್ನು ಮೀರಿ ಹೋಗುವುದಿಲ್ಲ. ದೈವ ನುಡಿದಂತೆ ನಡೆದ ನೂರಾರು ಘಟನೆಗಳು, ಸಾಕಷ್ಟು ಉದಾಹರಣೆಗಳು ತುಳುನಾಡಿನಲ್ಲಿವೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
October 25, 2024 10:56 AM IST