ಜುಲೈ 29, 2025ರಂದು, ಭಾರತ ತಂಡವು ಓವಲ್ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಅಭ್ಯಾಸ ಸೆಷನ್‌ಗೆ ತೆರಳಿತು. ಈ ಸಂದರ್ಭದಲ್ಲಿ, ಗೌತಮ್ ಗಂಭೀರ್ ಮತ್ತು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಪಿಚ್‌ನ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಸ್ಕ್ವೇರ್‌ಗೆ ತೆರಳಿದರು. ಆದರೆ, ಓವಲ್‌ನ ಮುಖ್ಯ ಕ್ಯುರೇಟರ್ ಲೀ ಫೋರ್ಟಿಸ್, ಭಾರತ ತಂಡದ ಆಟಗಾರರು ಮತ್ತು ಸಿಬ್ಬಂದಿಗಳು ಸ್ಕ್ವೇರ್‌ನಲ್ಲಿ ತಿರುಗಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅವರು ಭಾರತ ತಂಡವನ್ನು 2.5 ಮೀಟರ್ ದೂರದಲ್ಲಿ ಇರಬೇಕೆಂದು ಸೂಚಿಸಿದರು ಮತ್ತು ಸಿಬ್ಬಂದಿಗಳು ಐಸ್ ಬಾಕ್ಸ್‌ನ್ನು ಮೈದಾನಕ್ಕೆ ತೆಗೆದುಕೊಂಡು ಹೋಗದಂತೆ ತಡೆದರು. ಇದರಿಂದ ಕೋಪಗೊಂಡ ಗಂಭೀರ್, ಫೋರ್ಟಿಸ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿದರು.
ಪಿಚ್‌ನಲ್ಲಿ ಟರ್ಫ್‌ನ ಅತಿಯಾದ ಬಳಕೆಯನ್ನು ಗಂಭೀರ್ ವಿರೋಧಿಸಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಗಂಭೀರ್ ಫೋರ್ಟಿಸ್ ಅವರನ್ನು ಸಂಪರ್ಕಿಸಿದಾಗ, ಅವರು ಸರಿಯಾದ ಉತ್ತರ ನೀಡಿಲ್ಲ. ಇದರಿಂದ ಕೋಪಗೊಂಡ ಗಂಭೀರ್, ತಮ್ಮದೇ ಆದ ಶೈಲಿಯಲ್ಲಿ ಫೋರ್ಟಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ಹಂತದಲ್ಲಿ ಗಂಭೀರ್ ವಿರುದ್ಧ ದೂರು ದಾಖಲಿಸುವುದಾಗಿ ಫೋರ್ಟಿಸ್ ಬೆದರಿಕೆ ಹಾಕಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದೆ.
ದೂರು ನೀಡುವುದಾಗಿ ಬೆದರಿಕೆ ಹಾಕಿದ ಫೋರ್ಟಿಸ್‌ಗೆ ತಕ್ಕ ಉತ್ತರ ನೀಡಿದ ಗಂಭೀರ, “ ನೀವು ಕೇವಲ ಒಬ್ಬ ಗ್ರೌಂಡ್ಸ್‌ಮನ್ ಆಗಿದ್ದೀರಿ, ನಮಗೆ ಏನು ಮಾಡಬೇಕೆಂದು ಹೇಳುವ ಹಕ್ಕು ನಿಮಗಿಲ್ಲ” ಎಂದು ತಿರುಗೇಟು ನೀಡಿದರು. ಜೊತೆಗೆ, “ನೀವು ಯಾರಿಗೆ ಬೇಕಾದರೂ ರಿಪೋರ್ಟ್ ಮಾಡಿ, ಆದರೆ ನಮಗೆ ಏನು ಮಾಡಬೇಕೆಂದು ಹೇಳಬೇಡಿ” ಎಂದು ಕಿಡಿಕಾರಿದರು. ಈ ವಾಗ್ವಾದದಲ್ಲಿ ಗಂಭೀರ್ ಕೆಲವು ಅಶ್ಲೀಲ ಪದಗಳನ್ನೂ ಬಳಸಿದರು ಎಂದು ವರದಿಯಾಗಿದೆ. ಫೋರ್ಟಿಸ್, ಗಂಭೀರ್‌ರ ಈ ವರ್ತನೆಯನ್ನು ICC ಮ್ಯಾಚ್ ರೆಫರಿಗೆ ವರದಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ತಿಕ್ಕಾಟವು ತೀವ್ರಗೊಂಡಾಗ, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಧ್ಯಸ್ಥಿಕೆ ವಹಿಸಿ, ಫೋರ್ಟಿಸ್‌ನನ್ನು ದೂರಕ್ಕೆ ಕರೆದೊಯ್ದು ಚರ್ಚೆ ನಡೆಸಿದರು. ಆದರೂ, ಗಂಭೀರ್ ದೂರದಿಂದಲೇ ಫೋರ್ಟಿಸ್‌ಗೆ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಲೇ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಘಟನೆಗೆ ಮುಖ್ಯ ಕಾರಣವೆಂದರೆ, ಭಾರತ ತಂಡದ ಆಟಗಾರರು ಮತ್ತು ಸಿಬ್ಬಂದಿಗಳು ಅಭ್ಯಾಸದ ಸಮಯದಲ್ಲಿ ಮೈದಾನದ ಕೇಂದ್ರ ಸ್ಕ್ವೇರ್‌ನಲ್ಲಿ ತಿರುಗಾಡುತ್ತಿದ್ದು ಮತ್ತು ಕಿಟ್ ಬ್ಯಾಗ್‌ಗಳನ್ನು ಎಳೆದುಕೊಂಡು ಹೋಗಿದ್ದು ಫೋರ್ಟಿಸ್‌ಗೆ ಆಕ್ಷೇಪಕ್ಕೆ ಕಾರಣವಾಯಿತು. ಇದರ ಜೊತೆಗೆ, ಪಿಚ್‌ನಲ್ಲಿ ಹುಲ್ಲಿನ ಪ್ರಮಾಣದ ಬಗ್ಗೆ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಫೋರ್ಟಿಸ್, ಓವಲ್‌ನಲ್ಲಿ ಈ ಋತುವಿನಲ್ಲಿ ಇನ್ನೂ ಹಲವು ಪಂದ್ಯಗಳು ಆಡಲಿರುವುದರಿಂದ, ಪಿಚ್‌ಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ವಾದಿಸಿದರು.
ಸೀತಾಂಶು ಕೊಟಕ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು. “ ನಾವು ಪಿಚ್‌ನ ಸ್ಥಿತಿಯನ್ನು ಪರಿಶೀಲಿಸಲು ಹೋದಾಗ, 2.5 ಮೀಟರ್ ದೂರದಲ್ಲಿ ಇರಬೇಕೆಂದು ಹೇಳಲಾಯಿತು. ನಾವು ರಬ್ಬರ್ ಸ್ಪೈಕ್‌ಗಳೊಂದಿಗೆ ಜಾಗರ್‌ಗಳನ್ನು ಧರಿಸಿದ್ದೆವು, ಇದರಿಂದ ಪಿಚ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದೆವು. ಆದರೆ, ಕ್ಯುರೇಟರ್ ನಮ್ಮ ಸಿಬ್ಬಂದಿಗಳ ಮೇಲೆ ಐಸ್ ಬಾಕ್ಸ್ ತೆಗೆದುಕೊಂಡು ಹೋಗದಂತೆ ಕೂಗಿದರು. ಇದು ಗಂಭೀರ್‌ಗೆ ಕೋಪ ತರಿಸಿತು. ಓವಲ್‌ನ ಕ್ಯುರೇಟರ್‌ನೊಂದಿಗೆ ಕೆಲಸ ಮಾಡುವುದು ಸುಲಭವಲ್ಲ ಎಂದು ಎಲ್ಲರಿಗೂ ತಿಳಿದಿದೆ,” ಎಂದು ಕೊಟಕ್ ಹೇಳಿದರು.
ಕೊಟಕ್ ಮಾತನಾಡುತ್ತಾ, “ ಪಿಚ್ ಒಂದು ಪುರಾತನ ವಸ್ತುವಲ್ಲ, ಅದನ್ನು ಮುಟ್ಟಿದರೆ ಒಡೆಯುವುದಿಲ್ಲ. ಕ್ಯುರೇಟರ್‌ಗೆ ತನ್ನ ಮೈದಾನವನ್ನು ರಕ್ಷಿಸಿಕೊಳ್ಳುವ ಕಾಳಜಿ ಇರಬಹುದು, ಆದರೆ ಒಂದು ದಿನದಲ್ಲಿ ಹುಲ್ಲು ಎಷ್ಟು ಬೆಳೆಯುತ್ತದೆ ಎಂದು ಯೋಚಿಸಿ?” ಎಂದು ವಿಮರ್ಶಿಸಿದರು.
ಈ ಬಗ್ಗೆ ಲೀ ಫೋರ್ಟಿಸ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಘಟನೆಯನ್ನು ತಗ್ಗಿಸಲು ಯತ್ನಿಸಿದರು. “ ಇದೊಂದು ದೊಡ್ಡ ಪಂದ್ಯವಾಗಿದೆ. ಗಂಭೀರ್‌ನೊಂದಿಗೆ ಸಂತೋಷವಾಗಿರುವುದು ನನ್ನ ಕೆಲಸವಲ್ಲ. ಇಂದಿನವರೆಗೆ ನಾನು ಅವರನ್ನು ಭೇಟಿಯಾಗಿರಲಿಲ್ಲ. ನೀವು ಇಂದು ಬೆಳಿಗ್ಗೆ ಅವರ ವರ್ತನೆಯನ್ನು ನೋಡಿದ್ದೀರಿ,” ಎಂದು ಫೋರ್ಟಿಸ್ ಹೇಳಿದರು. ಗಂಭೀರ್ ಏಕೆ ತೀವ್ರವಾಗಿ ಪ್ರತಿಕ್ರಿಯಿಸಿದರು ಎಂದು ಕೇಳಿದಾಗ, “ಅದನ್ನು ಅವರನ್ನೇ ಕೇಳಿ. ನಮಗೆ ಯಾವುದೇ ಸಿಕ್ರೇಟ್ ವಿಷಯವಿಲ್ಲ,” ಎಂದು ಉತ್ತರಿಸಿದರು. ಆದರೆ, ಪತ್ರಕರ್ತರು ಮತ್ತೆ ಮತ್ತೆ ಪ್ರಶ್ನಿಸಿದಾಗ, ಫೋರ್ಟಿಸ್ ಸಂದರ್ಶನವನ್ನು ಕಡಿತಗೊಳಿಸಿ ತೆರಳಿದರು.
July 29, 2025 11:26 PM IST