Last Updated:
ಮೂಕಾಂಬಿಕಾ ಕಲ್ಚರಲ್ ಅಕಾಡಮಿಯಲ್ಲಿ ನವರಾತ್ರಿಯ ಅಷ್ಟಮಿಯಂದು ಭರತನಾಟ್ಯ ಕಲಾವಿದರು ಭಕ್ತಿಯಿಂದ ಗೆಜ್ಜೆಪೂಜೆ ನೆರವೇರಿಸಿ, ಗುರುಗಳ ಆಶೀರ್ವಾದ ಪಡೆದು ನೃತ್ಯ ಆರಂಭಿಸುತ್ತಾರೆ.
ದಕ್ಷಿಣ ಕನ್ನಡ: ನವರಾತ್ರಿ (Navaratri) ಉತ್ಸವದ ಸಂದರ್ಭದಲ್ಲಿ ದೇವಿಯ ಆರಾಧನೆಯು ಎಲ್ಲೆಡೆ ನಡೆಯುತ್ತೆ. ಎಲ್ಲಾ ದೇವಿ ದೇವಸ್ಥಾನಗಳಲ್ಲಿ (Temples) ಒಂಬತ್ತು ದಿನಗಳ ಕಾಲ ದೇವಿಯ (Devi) ಆರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಗುತ್ತದೆ. ಅದೇ ಪ್ರಕಾರ ಸರಸ್ವತಿ ಆರಾಧಕರಾದ ಕಲಾಕಾರರು ತಮ್ಮದೇ ಆದ ರೀತಿಯಲ್ಲಿ ದೇವಿಯ ಆರಾಧನೆ ಮಾಡುತ್ತಾರೆ. ಅದರಲ್ಲು ಭರತನಾಟ್ಯ ಕಲಾವಿದರು ಸರಸ್ವತಿ, ನಟರಾಜನ ಮುಂದೆ ತಮ್ಮ ಗೆಜ್ಜೆಗಳನ್ನು ಇಟ್ಟು ಗೆಜ್ಜೆಪೂಜೆ (Gejje Puja) ಮಾಡೋದೂ ನವರಾತ್ರಿಯ ವಿಶೇಷತೆಗಳಲ್ಲಿ ಒಂದಾಗಿದೆ.
ಕಳೆದ ಮೂವತ್ತು ವರ್ಷಗಳಿಂದ ಭರತನಾಟ್ಯ ಕಲೆಯ ಮೂಲಕ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಪ್ರತೀ ನವರಾತ್ರಿಯಂದು ಗೆಜ್ಜೆಪೂಜೆಯನ್ನು ಅತ್ಯಂತ ಭಕ್ತಭಾವದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಭರತನಾಟ್ಯ ಕಲಾವಿದರು ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯಂದು ಭರತನಾಟ್ಯ ಕಲಾವಿದರೆಲ್ಲಾ ಸೇರಿ ಈ ಗೆಜ್ಜೆಪೂಜೆ ನೆರವೇರಿಸಲಾಗುತ್ತದೆ.
ತಮ್ಮ ತಮ್ಮ ಗೆಜ್ಜೆಗಳನ್ನು ದೇವರ ಮುಂದೆ ಇರಿಸಿ, ಅವುಗಳಿಗೆ ಪೂಜೆ ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆದು, ಗೆಜ್ಜೆಗಳನ್ನು ಕಟ್ಟಿ ನೃತ್ಯ ಮಾಡೋದು ಈ ಗೆಜ್ಜೆಪೂಜೆಯ ವಿಶೇಷತೆಯಾಗಿದೆ. ಗೆಜ್ಜೆ ಅನ್ನೋದು ಭರತನಾಟ್ಯ ಕಲಾವಿದರಿಗೆ ದೇವರ ಸಮಾನವಾಗಿದ್ದು, ಇದೇ ಕಾರಣಕ್ಕೆ ಗೆಜ್ಜೆಗೆ ಭರತನಾಟ್ಯದಲ್ಲಿ ಅತ್ಯಂತ ಮಹತ್ವವನ್ನೂ ನೀಡಲಾಗುತ್ತದೆ.
ನಟರಾಜ, ಸರಸ್ವತಿ ಮತ್ತು ಕಲೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಇಟ್ಟು ಅವುಗಳಿಗೆ ಮೊದಲು ಪೂಜೆ ನೆರವೇರಿಸಲಾಗುತ್ತದೆ. ಆ ಬಳಿಕ ಗೆಜ್ಜೆ ಪೂಜೆ ನೆರವೇರಿಸಿ, ಗುರುಗಳಿಗೆ ಗುರು ದಕ್ಷಿಣೆಯನ್ನೂ ನೀಡಲಾಗುತ್ತದೆ. ಗುರುವಿನ ಆಶೀರ್ವಾದವನ್ನು ಪಡೆದ ಬಳಿಕ ಗೆಜ್ಜೆಗಳನ್ನು ಕಣ್ಣಿಗೆ ಒತ್ತಿಕೊಂಡು ಬಳಿಕ ಗೆಜ್ಜೆ ಕಟ್ಟಿ ನೃತ್ಯ ಆರಂಭಿಸಲಾಗುತ್ತದೆ. ಕಳೆದ ಮೂವತ್ತು ವರ್ಷಗಳಿಂದ ಭರತನಾಟ್ಯ ಕಲೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಮೂಕಾಂಬಿಕಾ ಕಲ್ಚರಲ್ ಆಕಾಡಮಿಯಲ್ಲಿ ಭರತನಾಟ್ಯ ಕಲಿತ ನೂರಾರು ಸಂಖ್ಯೆಯ ಶಿಷ್ಯಯಂದಿರು ಗುರುಗಳ ಆಶೀರ್ವಾದವನ್ನು ಪಡೆಯಲೂ ಇದೇ ದಿನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.
Dakshina Kannada,Karnataka
October 02, 2025 11:45 AM IST