Last Updated:
ಮಂಗಳೂರು-ಕಡೂರು ಹೆದ್ದಾರಿ ಅಗಲೀಕರಣದ ಬಳಿಕ ವೇಣೂರು ವಲಯ ಅರಣ್ಯ ಇಲಾಖೆ 1200 ಗಿಡಗಳನ್ನು ನೆಟ್ಟು, 4000 ಗಿಡಗಳ ಯೋಜನೆ ರೂಪಿಸಿದೆ. ಹಸಿರು ನೆಟ್ ಸಂರಕ್ಷಣೆ ವಿಶೇಷ ಆಕರ್ಷಣೆ.
ದಕ್ಷಿಣ ಕನ್ನಡ: ಹೊಸ ರಸ್ತೆ (New Road) ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯೋದು ಸಾಮಾನ್ಯ. ಮರಗಳನ್ನು (Tree) ಕಡಿದು ರಸ್ತೆ ನಿರ್ಮಿಸಿದ ಬಳಿಕ ಮತ್ತೆ ರಸ್ತೆ ಪಕ್ಕದಲ್ಲಿ ಮರ-ಗಿಡಗಳನ್ನು ನೆಡುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ (Forest Department) ಮಾಡುತ್ತದೆ. ಕಳೆದ ಹಲವಾರು ವರ್ಷಗಳಿಂದ ಇದೇ ರೀತಿಯ ಕೆಲಸವನ್ನು ಅರಣ್ಯ ಇಲಾಖೆ ನಿರ್ವಹಿಸಿಕೊಂಡು ಬಂದಿದೆ.
ಅದೇ ಪ್ರಕಾರ ಇದೀಗ ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಈ ರಸ್ತೆಗಾಗಿ ಹಲವಾರು ಮರಗಳನ್ನು ಕಡಿಯಲಾಗಿದೆ. ರಸ್ತೆಯ ಪಕ್ಕದಲ್ಲಿದ್ದ ಮರಗಳನ್ನು ಕಡಿದ ಬಳಿಕ ಆ ಭಾಗದಲ್ಲಿ ಮತ್ತೆ ಗಿಡಗಳನ್ನು ನೆಡುವ ಪ್ರಕ್ರಿಯೆ ಆರಂಭಗೊಂಡಿದೆ. ಪೂಂಜಾಲುಕಟ್ಟೆಯಿಂದ ಗುರುವಾಯನಕೆರೆ ತನಕ ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿರುವ ಗಿಡಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿಯೂ ಗುರುತಿಸಲ್ಪಟ್ಟಿದೆ. ವೇಣೂರು ವಲಯ ಅರಣ್ಯ ಇಲಾಖೆ ವತಿಯಿಂದ ಈ ಗಿಡಗಳನ್ನು ನೆಡುವ ಕಾರ್ಯ ಆರಂಭವಾಗಿದ್ದು, ಈಗಾಗಲೇ ಸುಮಾರು 1200 ಗಿಡಗಳನ್ನು ಹೆದ್ದಾರಿಯ ಎರಡೂ ಪಕ್ಕದಲ್ಲಿ ನೆಡಲಾಗಿದೆ.
ಹೆದ್ದಾರಿಯ ಪಕ್ಕದಲ್ಲಿ ಎಲ್ಲೆಲ್ಲಿ ಖಾಲಿ ಜಾಗಗಳು ಸಿಗುತ್ತೋ ಅಲ್ಲೆಲ್ಲಾ ಈ ಗಿಡಗಳನ್ನು ನೆಡಲು ವೇಣೂರು ವಲಯ ಅರಣ್ಯ ಇಲಾಖೆ ನಿರ್ಧರಿಸಿದೆ. ಅತ್ಯಂತ ಶಿಸ್ತುಬದ್ಧವಾಗಿ ಗಿಡಗಳನ್ನು ನೆಡುವ ಜೊತೆಗೆ ಈ ಗಿಡಗಳಿಗೆ ಯಾವುದೇ ತೊಂದರೆಯಾಗದಿರಲಿ ಅನ್ನೋ ಕಾರಣಕ್ಕೆ ಗಿಡಗಳ ಸುತ್ತ ವೃತ್ತಾಕಾರದಲ್ಲಿ ಹಸಿರು ಬಣ್ಣದ ನೆಟ್ ಅನ್ನು ಸುತ್ತಿ ಸಂರಕ್ಷಿಸಲಾಗಿದೆ. ರಸ್ತೆಯುದ್ದಕ್ಕೂ ಹಸಿರಾಗಿ ಕಾಣುವ ಈ ಗಿಡಗಳು ಮತ್ತು ಭದ್ರತಾ ನೆಟ್ ಹೆದ್ದಾರಿ ಪ್ರಯಾಣಿಕರನ್ನೊಮ್ಮೆ ಅತ್ತ ಕಡೆ ತಿರುಗಿ ನೋಡುವಂತೆ ಆಕರ್ಷಿಸುತ್ತಿವೆ.
ಪೂಂಜಾಲುಕಟ್ಟೆಯಿಂದ ವೇಣೂರು, ನಾರಾವಿ, ಅಳದಂಗಡಿ, ಮೂಡಬಿದಿರೆ ತನಕದ ರಸ್ತೆ ಪಕ್ಕದಲ್ಲಿ ಈ ಗಿಡಗಳನ್ನು ನೆಡಲಾಗಿದ್ದು, ಒಟ್ಟು 4000 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗಿಡ ನೆಡುವ ಕಾರ್ಯ ಆರಂಭಗೊಂಡಿದ್ದು, ಇವುಗಳ ನಿರ್ವಹಣೆಯನ್ನೂ ಅರಣ್ಯ ಇಲಾಖೆಯೇ ನೋಡಿಕೊಳ್ಳಲಿದೆ.
ಇಲ್ಲಿರುವ ತಳಿಗಳ ವಿಧ ಹೀಗಿದೆ
ಹಲಸು, ಹೆಬ್ಬಲಸು, ಮಾವು, ಧೂಪ ಹೀಗೆ ಹಲವು ಜಾತಿಯ ಗಿಡಗಳನ್ನು ಹೆದ್ದಾರಿಯ ಎರಡೂ ಪಕ್ಕದಲ್ಲಿ ನೆಡಲಾಗಿದೆ. ರಸ್ತೆ ಪಕ್ಕದಲ್ಲಿ ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೆಲ್ಲಾ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಹೆದ್ದಾರಿಯ ಅಗಲೀಕರಣ ಕಾಮಗಾರಿಯ ಜೊತೆಗೇ ಗಿಡಗಳನ್ನು ನೆಡುವ ಕೆಲಸವೂ ಒಟ್ಟಿಗೆ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಗಿಡಗಳು ಮರಗಳಾಗಿ ರಸ್ತೆ ಪ್ರಯಾಣಿಕರಿಗೆ ತಂಪಿನ ಅನುಭವವನ್ನು ನೀಡಲಿದೆ.
Dakshina Kannada,Karnataka
October 13, 2025 6:24 PM IST