Last Updated:
ಮಂಗಳೂರು ದಯಾನಂದ ಅವರು ಬೆಂಗ್ರೆ ಶಾಲಾ ಮಕ್ಕಳಿಗೆ ಚಾರ್ಕೋಲ್ ಆರ್ಟ್ ಕಲಿಸಿ, ಅವರ ಚಿತ್ರಗಳನ್ನು ಮಾರಾಟ ಮಾಡಿ 35000 ರೂ. ಸಂಗ್ರಹಿಸಿ ಶಾಲೆಗೆ ಇನ್ವರ್ಟರ್ ಕೊಡುಗೆಯಾಗಿ ನೀಡಿದರು.
ಮಂಗಳೂರು: ಕಲಾವಿದನೊಬ್ಬನಲ್ಲಿ (Artist) ಮಾನವೀಯ ಗುಣವಿದ್ದಲ್ಲಿ ಆತ ನಿಜವಾಗಿಯೂ ಶ್ರೇಷ್ಠ ಕಲಾವಿದ ಎನಿಸಿಕೊಳ್ಳುತ್ತಾನೆ. ಈ ಮಾತಿಗೆ ಮಂಗಳೂರಿನ (Mangaluru) ದಯಾನಂದ ಎಂಬ ಈ ಕಲಾ ಶಿಕ್ಷಕ ಅಪ್ಪಟ ಉದಾಹರಣೆ. ಇವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರ್ಕೋಲ್ ಆರ್ಟ್ (Art) ಕಲಿಸಿಕೊಟ್ಟಿದ್ದಲ್ಲದೆ ಆ ಚಿತ್ರಗಳನ್ನು ಮಾರಾಟ (Sale) ಮಾಡಿ ಶಾಲೆಗೊಂದು ಇನ್ವರ್ಟರ್ ಕೊಡುಗೆಯಾಗಿ ಕೊಟ್ಟಿದ್ದಾರೆ.
ಮಂಗಳೂರಿನ ಕೊಟ್ಟಾರ ನಿವಾಸಿ 76 ವರ್ಷದ ಹಿರಿಯ ಕಲಾವಿದ ದಯಾನಂದ ಅವರು, ಆಧ್ಯಾತ್ಮಗುರು ರವಿಶಂಕರ ಗುರೂಜಿ ಭಕ್ತರು. ಅವರಿಗೊಮ್ಮೆ ತಾವು ಬಿಡಿಸಿರುವ ಚಿತ್ರಗಳನ್ನು ತೋರಿಸಿದ್ದರು. ಆಗ ರವಿಶಂಕರ್ ಗುರೂಜಿಯವರು “ಹಳ್ಳಿಯ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಿ ಕೊಡು”ವಂತೆ ಸಲಹೆ ನೀಡಿದರು. ಈ ಸಂದೇಶವೇ ಅವರ ಈ ಕಾರ್ಯಕ್ಕೆ ಪ್ರೇರಣಾದಾಯಕ.
2022ರಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಸ್ಯಾಂಡ್ಸ್ ಪಿಟ್, ಬೆಂಗ್ರೆಯ ವಿದ್ಯಾರ್ಥಿಗಳ ಚುರುಕುತನ ಗಮನಿಸಿದ್ದಾರೆ. ತಕ್ಷಣ ಶಾಲೆಯ ಮುಖ್ಯ ಶಿಕ್ಷಕಿ ಉಮಾಲಕ್ಷ್ಮಿಯವರನ್ನು ಭೇಟಿಯಾಗಿ ವಿದ್ಯಾರ್ಥಿಗಳಿಗೆ ತಾವು ಚಿತ್ರಕಲೆಯನ್ನು ಕಲಿಸಿಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಖ್ಯ ಶಿಕ್ಷಕಿಯಿಂದ ಒಪ್ಪಿಗೆ ಸಿಕ್ಕಿದೆ. ಈ ಶಾಲೆ ನಗರದೊಳಗಡೆ ಇದ್ದರೂ, ಅದಿರುವ ಊರು ಬೆಂಗ್ರೆಗೆ ಬೋಟ್ ಅನ್ನೇ ಆಶ್ರಯಿಸಬೇಕು. ಈ ಮಕ್ಕಳಿಗೆ ಅವರು ಚಾರ್ಕೋಲ್ ಆರ್ಟ್ ಕಲಿಸಲು ಆರಂಭಿಸಿದರು. ಚಾರ್ಕೋಲ್ ಹಿಡಿದ ಮಕ್ಕಳು, ತಮ್ಮೊಳಗಿನ ಕಲಾವಿದನನ್ನು ಕಂಡುಕೊಂಡರು.
ಈ ನಡುವೆ ವಿದ್ಯುತ್ ಕಡಿತಗೊಂಡಾಗ ಶಾಲೆಯಲ್ಲಿ ಇನ್ವರ್ಟರ್ ಸೌಲಭ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆಗುವ ಸಮಸ್ಯೆ ತಪ್ಪಿಸಲು ಶಾಲೆಗೊಂದು ಇನ್ವರ್ಟರ್ ಕೊಡುವ ಯೋಜನೆ ಹಾಕಿಕೊಂಡರು. ಆಗ ಬಂದ ಯೋಚನೆ ಮಕ್ಕಳಿಂದಲೇ ಸಿದ್ಧಗೊಂಡ ಚಾರ್ಕೋಲ್ ಚಿತ್ರಗಳನ್ನು ಪ್ರದರ್ಶನ–ಮಾರಾಟ.
ಭಾರೀ ಮೊತ್ತಕ್ಕೆ ಸೇಲ್ ಕಂಡ ಪೇಂಟಿಂಗ್ಗಳು
ಅದರಂತೆ ಮಂಗಳೂರಿನಲ್ಲಿ ನಡೆದ ಕಲಾಪರ್ಬದಲ್ಲಿ ಸಂಸ್ಕಾರ ಭಾರತೀ ಮಂಗಳೂರು ಪ್ರಾಂತದ ಸಹಕಾರದೊಂದಿಗೆ ದಯಾನಂದ್, ಬೆಂಗ್ರೆ ಶಾಲೆಯ ವಿದ್ಯಾರ್ಥಿಗಳ ಮಳಿಗೆ ತೆರೆದು ಕಲಾಕೃತಿಯನ್ನು ಮಾರಾಟ ಮಾಡಿದರು. 60 ಚಿತ್ರಕಲೆಯಲ್ಲಿ 50 ಚಿತ್ರಗಳು ಮಾರಾಟಗೊಂಡು ಅದರಲ್ಲಿ 35 ಸಾವಿರ ರೂ. ಸಂಗ್ರಹವಾಯಿತು. ಇದನ್ನು ಶಾಲೆಗೆ ಇನ್ವರ್ಟರ್ ಖರೀದಿಗೆ ಮೀಸಲಾಗಿಟ್ಟಿದ್ದಾರೆ. ಈ ಮೂಲಕ ಹಿರಿಯ ಕಲಾವಿದ ದಯಾನಂದ ಅವರು ಎಲ್ಲರಿಗೂ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ.
Dakshina Kannada,Karnataka