Last Updated:
ತಮಿಳುನಾಡಿನ ಇಸ್ಮಾಯಿಲ್ ಮಾನಸಿಕ ಅಸ್ವಸ್ಥನಾಗಿ ಮಂಗಳೂರು ಸೇರಿ ವೈಟ್‌ಡೌಸ್ ಸಂಸ್ಥೆ ಮಾಲಕಿ ಕೊರಿನ್ ರಸ್ಕಿನ್ ಆಶ್ರಯದಿಂದ ಗುಣಮುಖನಾಗಿ ಕುಟುಂಬದೊಂದಿಗೆ ಮತ್ತೆ ಸೇರಿದ್ದಾನೆ.
ಮಂಗಳೂರು: ಹೇಳಿಕೊಳ್ಳಲು ಈತನಿಗೆ ಎರಡೆರಡು ಮದುವೆ (Marriage)ಯಾಗಿದೆ. ಆದರೆ ಕುಡಿತದ ಚಟದಿಂದ ಇಬ್ಬರೂ ಪತ್ನಿಯರೂ ತೊರೆದಿದ್ದರು. ಬಳಿಕ ಮಾನಸಿಕ ಅಸ್ವಸ್ಥ (Mentally Ill) ನಾದ. ಹೇಗೋ ತಮಿಳುನಾಡಿನಿಂದ ಮಂಗಳೂರು (Mangaluru) ಸೇರಿದ. ಬೀದಿಯಲ್ಲಿ ಬಿದ್ದಿದ್ದ ಈತನಿಗೆ ವೈಟ್‌ಡೌಸ್ ಸಂಸ್ಥೆ ಆಶ್ರಯ ನೀಡಿತು. ಒಂದು ವರ್ಷ ಮನೆಯಿಂದ (House) ಬೇರ್ಪಟ್ಟ ಈತ ಇದೀಗ ಮತ್ತೆ ಕುಟುಂಬದೊಂದಿಗೆ ಸೇರಿದ್ದಾನೆ.
ಹೀಗೆ ಹನಿಗಣ್ಣಾಗಿ ಮನೆಯವರೊಂದಿಗೆ ಜೊತೆಯಾದ ಈತನ ಹೆಸರು ಇಸ್ಮಾಯಿಲ್. ತಮಿಳುನಾಡಿನ ತಿರುನಲ್ವೇಲಿಯ ಆಳ್ವಾರ್ ಕುರುಚಿ ಈತನ ಊರು. ಮಾನಸಿಕ ಅಸ್ವಸ್ಥನಾಗಿದ್ದ ಈತನಿಗೆ ಮನೆಮಂದಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖನಾಗಿರಲಿಲ್ಲ. ಆದ್ದರಿಂದ ಕಳೆದ ವರ್ಷ ರಾಮೇಶ್ವರದ ಏರ್ವಾಡಿ ದರ್ಗಾಕ್ಕೆ ಕರೆದೊಯ್ದು ಧಾರ್ಮಿಕ ರೀತಿಯಲ್ಲಿ ಸರಿಪಡಿಸುವ ಯತ್ನದಲ್ಲಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡ ಇಸ್ಮಾಯಿಲ್ ಮಂಗಳೂರು ಸೇರಿದ್ದನು.
2024 ಅಕ್ಟೋಬರ್ 12ರಂದು ಈತ ಮಂಗಳೂರಿನಲ್ಲಿ ವೈಟ್‌ಡೌಸ್ ಸಂಸ್ಥೆಯ ಮಾಲಕಿ ಕೊರಿನ್ ರಸ್ಕಿನ್ ಅವರಿಗೆ ಸಿಕ್ಕಿದ್ದಾನೆ. ಅವರು ತಮ್ಮ ಸಂಸ್ಥೆಯಲ್ಲಿ ಆತನಿಗೆ ಆಶ್ರಯ ನೀಡಿ ಚಿಕಿತ್ಸೆ ನೀಡಿದ್ದರು. ಮೊದಲು ತೀರಾ ಆಕ್ರಮಣಕಾರಿ ವರ್ತನೆ ತೋರಿ, ಒಂಟಿಯಾಗಿಯೇ ಇರಲು ಬಯಸುತ್ತಿದ್ದ ಇಸ್ಮಾಯಿಲ್ ಚಿಕಿತ್ಸೆಯಿಂದ ಗುಣಮುಖನಾಗಿ ತನ್ನ ಊರಿನ ಹೆಸರು ತಿಳಿಸಿದ್ದನು. ಅದರಂತೆ ಅಲ್ಲಿನ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ವೈಟ್‌ಡೌಸ್ ಆತನ ಕುಟುಂಬದವರನ್ನು ಪತ್ತೆ ಹಚ್ಚಿದ್ದಾರೆ.
ಕೊನೆಗೂ ಕುಟುಂಬವನ್ನು ಕೂಡಿಕೊಂಡ ಇಸ್ಮಾಯಿಲ್
ಒಂದು ವರ್ಷದಿಂದ ಹುಡುಕಿದರೂ ಇಸ್ಮಾಯಿಲ್ ಸಿಗದ ಕಾರಣ ಕುಟುಂಬ ದುಃಖಿತಗೊಂಡಿತ್ತು. ಆದರೆ ಆತ ಇರುವ ವಿಚಾರ ತಿಳಿದೊಡನೆ ಮಂಗಳೂರಿಗೆ ಹುಡುಕಿಕೊಂಡು ಬಂದಿದೆ. ಸಹೋದರಿ, ಅಳಿಯ ಮತ್ತು ಕುಟುಂಬ ಸದಸ್ಯೆಯನ್ನು ಕಂಡೊಡನೆ ಮಾತೇ ಹೊರಡದೆ ಗದ್ಗದಿತನಾಗಿ ಕಣ್ಣೀರನ್ನೇ ಸುರಿಸಿದ್ದಾನೆ. ತನಗೆ ಆಶ್ರಯ ನೀಡಿದ ಕೊರಿನ್ ರಸ್ಕಿನ್ ಅವರ ಪಾದಮುಟ್ಟಿ ನಮಸ್ಕರಿಸಿ ತನ್ನ ಮನೆಯವರೊಂದಿಗೆ ಊರಿಗೆ ಹೋಗಿದ್ದಾನೆ ಇಸ್ಮಾಯಿಲ್. ಈತನ ಮುಂದಿನ ಜೀವನ ಸುಖಕರವಾಗಿರಲಿ. ಜೊತೆಗೆ ವೈಟ್‌ಡೌಸ್ ಸಂಸ್ಥೆಯಿಂದ ಇನ್ನಷ್ಟು ಇಂತಹ ಮಾನವೀಯ ಕಾರ್ಯ ನಡೆಯಲಿ ಎಂಬುದೇ ನಮ್ಮ ಆಶಯ.
Mangalore,Dakshina Kannada,Karnataka
September 03, 2025 1:56 PM IST