Last Updated:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಅಕಾಲಿಕ ಧಾರಾಕಾರ ಮಳೆ ಸುರಿಯಿತು.
ದಕ್ಷಿಣ ಕನ್ನಡ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಜನವರಿ 13 ರ ಮಂಗಳವಾರ ಭಾರೀ ಅಕಾಲಿಕ ಮಳೆ (Rain) ಸುರಿದಿದೆ. ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳು ಸೇರಿದಂತೆ ಕಡಬ, ನೆಟ್ಟಣ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಪಂಜ ವ್ಯಾಪ್ತಿಯಲ್ಲಿ ಗುಡುಗು (Thunder) , ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
2026 ರ ಹೊಸ ವರ್ಷದ ಆರಂಭದಲ್ಲೇ ಸುರಿದ ಈ ಅಕಾಲಿಕ ಮಳೆಯು ಈ ಭಾಗದ ಜನರನ್ನು ಸಂಕಷ್ಟಕ್ಕೆ ಈಡುಮಾಡಿತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದವು. ಸಂಜೆ ವೇಳೆ ದಿಢೀರನೆ ಅಬ್ಬರಿಸಿದ ಮಳೆರಾಯನಿಂದಾಗಿ ಕಚೇರಿಯಿಂದ ಮನೆಗೆ ಮರಳುವವರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಮಳೆಗೆ ಸಿಲುಕಿ ಹೈರಾಣಾದರು. ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಹಾಗೂ ದೇವಳದತ್ತ ತೆರಳುತ್ತಿದ್ದ ಭಕ್ತಾದಿಗಳು ಸೂಕ್ತ ಆಸರೆಯಿಲ್ಲದೆ ಪರದಾಡುವಂತಾಯಿತು. ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
‘ಮಕರ ಸಂಕ್ರಾಂತಿ’ ಹಬ್ಬವಿರುವುದರಿಂದ ಮಂಗಳವಾರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಆದರೆ ಸಂಜೆ ಸುರಿದ ಧಾರಾಕಾರ ಮಳೆಯು ವ್ಯಾಪಾರಸ್ಥರ ಮತ್ತು ಗ್ರಾಹಕರ ಉತ್ಸಾಹಕ್ಕೆ ತಣ್ಣೀರೆರಚಿತು. ಹೂವು, ಹಣ್ಣು ಹಾಗೂ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳ ಆಸರೆ ಪಡೆಯಬೇಕಾಯಿತು.
ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ ಬೆಳೆಗಾರರಲ್ಲೂ ಈ ಅಕಾಲಿಕ ಮಳೆ ಆತಂಕ ಮೂಡಿಸಿದೆ. ಒಟ್ಟಾರೆಯಾಗಿ, ಚಳಿಗಾಲದ ಸಮಯದಲ್ಲಿ ಸುರಿದ ಈ ಮಳೆ ಕಡಬ ಮತ್ತು ಸುಬ್ರಹ್ಮಣ್ಯ ಭಾಗದ ಜನರಿಗೆ ಕಿರಿಕಿರಿ ಉಂಟುಮಾಡಿದ್ದಂತೂ ಸುಳ್ಳಲ್ಲ.
Dakshina Kannada,Karnataka
Jan 14, 2026 11:18 AM IST