ನಿಮ್ಮ ಗೃಹ ಸಾಲಕ್ಕೆ ಆಗಾಗ ಸ್ವಲ್ಪ ಹೆಚ್ಚುವರಿ ಹಣವನ್ನು (ಮುಂಗಡ ಪಾವತಿ) ಕಟ್ಟುವುದು ಸಾಲವನ್ನು ಬೇಗನೆ ತೀರಿಸಲು ಇರುವ ಅತ್ಯುತ್ತಮ ಮಾರ್ಗ. ವಿಶೇಷವಾಗಿ, ಸಾಲದ ಆರಂಭಿಕ ವರ್ಷಗಳಲ್ಲಿ ನೀವು ಮುಂಗಡ ಪಾವತಿ ಮಾಡಿದಾಗ, ಅದು ನೇರವಾಗಿ ನಿಮ್ಮ ಬಾಕಿ ಇರುವ ಅಸಲು ಮೊತ್ತವನ್ನು ಕಡಿಮೆ ಮಾಡುತ್ತದೆ. ಅಸಲು ಕಡಿಮೆಯಾದಷ್ಟು, ನೀವು ಮುಂದಿನ ವರ್ಷಗಳಲ್ಲಿ ಕಟ್ಟಬೇಕಾದ ಬಡ್ಡಿಯ ಹೊರೆಯೂ ಕಡಿಮೆಯಾಗುತ್ತದೆ. ಇದು ಸಾಲದ ಅವಧಿಯನ್ನು ಕಡಿಮೆ ಮಾಡಲು ಮತ್ತು ಬಡ್ಡಿಯನ್ನು ಉಳಿಸಲು ಇರುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.
ನೀವು ಮುಂಗಡ ಪಾವತಿ ಮಾಡಿದಾಗ, ಬ್ಯಾಂಕ್ ನಿಮಗೆ ಎರಡು ಆಯ್ಕೆಗಳನ್ನು ನೀಡಬಹುದು: ನಿಮ್ಮ ಮಾಸಿಕ EMI ಮೊತ್ತವನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ನಿಮ್ಮ ಸಾಲದ ಅವಧಿಯನ್ನು ಕಡಿಮೆ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ, ಯಾವಾಗಲೂ ಸಾಲದ ಅವಧಿಯನ್ನು ಕಡಿಮೆ ಮಾಡುವ ಆಯ್ಕೆಯನ್ನೇ ಆರಿಸಿಕೊಳ್ಳಿ.
EMI ಕಡಿಮೆ ಮಾಡಿಕೊಂಡರೆ, ನಿಮಗೆ ತಾತ್ಕಾಲಿಕವಾಗಿ ಮಾಸಿಕ ಹೊರೆ ಕಡಿಮೆಯಾದಂತೆ ಅನಿಸಬಹುದು, ಆದರೆ ನೀವು ಹೆಚ್ಚು ಕಾಲ ಬಡ್ಡಿ ಕಟ್ಟುತ್ತಲೇ ಇರಬೇಕಾಗುತ್ತದೆ. ಬದಲಾಗಿ, ಸಾಲದ ಅವಧಿಯನ್ನು ಕಡಿಮೆ ಮಾಡಿಕೊಂಡರೆ, ಒಟ್ಟಾರೆ ಸಾಲದ ಅವಧಿ ಕಡಿಮೆಯಾಗಿ, ನೀವು ಕಟ್ಟುವ ಒಟ್ಟು ಬಡ್ಡಿಯ ಮೊತ್ತದಲ್ಲಿ ಭಾರಿ ಉಳಿತಾಯವಾಗುತ್ತದೆ.
ನಿಮ್ಮ ಬ್ಯಾಂಕ್ ಹೊಸ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದ್ದರೆ, ಅದೇ ದರವನ್ನು ನಿಮಗೂ ನೀಡುವಂತೆ ಕೇಳಲು ಹಿಂಜರಿಯಬೇಡಿ. ನೀವು ಈ ಹಿಂದೆ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದ್ದರೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಕಡಿಮೆ ಬಡ್ಡಿ ದರವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಸಣ್ಣ ಬಡ್ಡಿ ದರ ಕಡಿತ, ಉದಾಹರಣೆಗೆ 7.8% ರಿಂದ 7.75% ಕ್ಕೆ ಇಳಿದರೂ, ದೀರ್ಘಾವಧಿಯಲ್ಲಿ ನಿಮ್ಮ ಲಕ್ಷಾಂತರ ರೂಪಾಯಿ ಬಡ್ಡಿಯನ್ನು ಉಳಿಸಬಹುದು.
ನಿಮಗೆ ವಾರ್ಷಿಕ ಬೋನಸ್ ಸಿಕ್ಕಾಗ ಅಥವಾ ನಿಮ್ಮ ಸಂಬಳ ಹೆಚ್ಚಾದಾಗ, ಆ ಹೆಚ್ಚುವರಿ ಹಣವನ್ನು ಬಳಸಿ ನಿಮ್ಮ EMI ಮೊತ್ತವನ್ನು ಸ್ವಲ್ಪ ಹೆಚ್ಚಿಸಿಕೊಳ್ಳಿ.‘ ಉದಾಹರಣೆಗೆ, ನಿಮ್ಮ EMI 25,000 ರೂ. ಇದ್ದರೆ, ಅದನ್ನು 27,000 ರೂ. ಗೆ ಹೆಚ್ಚಿಸುವುದು ನಿಮ್ಮ ಅಸಲು ಮೊತ್ತವನ್ನು ವೇಗವಾಗಿ ಕಡಿಮೆ ಮಾಡುತ್ತದೆ.
ಈ ವಿಧಾನವು ನಿಮ್ಮ ಒಟ್ಟು ಬಡ್ಡಿಯ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಸಾಲದ ಅವಧಿಯನ್ನು ಕಡಿಮೆ ಮಾಡಿ, ಬೇಗನೆ ಸಾಲಮುಕ್ತರಾಗಲು ಸಹಾಯ ಮಾಡುತ್ತದೆ.
ನೀವು ಸ್ಥಿರ ಬಡ್ಡಿ ದರ ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಫ್ಲೋಟಿಂಗ್ ಬಡ್ಡಿ ದರಗಳು ಕಡಿಮೆಯಿದ್ದರೆ, ಫ್ಲೋಟಿಂಗ್ ದರಕ್ಕೆ ಬದಲಾಗುವುದನ್ನು ಪರಿಗಣಿಸಿ. ಸ್ಥಿರ ಬಡ್ಡಿ ದರಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ. ಫ್ಲೋಟಿಂಗ್ ದರಗಳು ಮಾರುಕಟ್ಟೆಯ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತವೆ.
ಪ್ರಸ್ತುತದಂತೆ ಬಡ್ಡಿ ದರಗಳು ಸ್ಥಿರವಾಗಿದ್ದಾಗ ಅಥವಾ ಇಳಿಯುತ್ತಿರುವಾಗ, ಫ್ಲೋಟಿಂಗ್ ದರಕ್ಕೆ ಬದಲಾಗುವುದರಿಂದ ನಿಮ್ಮ ಮಾಸಿಕ ಪಾವತಿಗಳು ಕಡಿಮೆಯಾಗಬಹುದು.
August 11, 2025 11:09 PM IST