ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅಜೇಯವಾಗಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಮ್ ಇಂಡಿಯಾ ಸೋಲಿಸಿತ್ತು. ಅಂದು ಭಾರತ ತಂಡವನ್ನು ಚಾಂಪಿಯನ್ ಮಾಡಿದ ಐವರು ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಆಟಗಾರನಾಗಿ ಮಾತ್ರ ತಂಡದಲ್ಲಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಹೊಸ ಏಕದಿನ ಉಪನಾಯಕರನ್ನಾಗಿ ನೇಮಿಸಲಾಗಿದೆ.
ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಿಂದ ಕೈ ಬಿಡಲಾಗಿತ್ತು. ಈಗ ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಆಗಿದ್ದಾರೆ. ಆದರೆ ವರುಣ್ ಚಕ್ರವರ್ತಿ ಜೊತೆಗೆ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಲಾಯಿತು. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.
ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಹೊರಗಿಡುವುದು ನಿರೀಕ್ಷಿಸಲಾಗಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಜಡೇಜಾ ಅವರ ಆಲ್‌ರೌಂಡ್ ಪ್ರದರ್ಶನದ ನಂತರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದು ಅಚ್ಚರಿ ಮೂಡಿಸಿದೆ.
ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಧ್ರುವ್ ಜುರೆಲ್ ಮತ್ತು ಪ್ರಸಿದ್ಧ್ ಕೃಷ್ಣ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳಿಗೆ ಭಾರತದ ಏಕದಿನ ತಂಡಕ್ಕೆ ಮರಳಿದ್ದಾರೆ. ನಿತೀಶ್ ರೆಡ್ಡಿಗೆ ಇದು ಅವರ ಮೊದಲ ಏಕದಿನ ಸರಣಿಯಾಗಿದ್ದು, ಪಂತ್ ಅನುಪಸ್ಥಿತಿಯಲ್ಲಿ ಧ್ರುವ್ ಜುರೆಲ್ ಎರಡನೇ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ.
ಮೊಹಮ್ಮದ್ ಸಿರಾಜ್ ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಭಾರತ ಏಕದಿನ ತಂಡಕ್ಕೆ ಮರಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಂಡದಿಂದ ಕೈಬಿಡಲಾಯಿತು. ಇದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಜೈಸ್ವಾಲ್ ಆಸ್ಟ್ರೇಲಿಯಾದಲ್ಲಿ ಭಾರತದ ಬ್ಯಾಕಪ್ ಓಪನರ್ ಆಗಿದ್ದಾರೆ. ಪ್ರಸಿದ್ಧ್ ಕೃಷ್ಣ, ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಮತ್ತು ಹರ್ಷಿತ್ ರಾಣಾ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ವಿಜೇತ ತಂಡದಲ್ಲಿದ್ದರು. ಈ 10 ಆಟಗಾರರು ಭಾರತ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಏಕದಿನ ತಂಡ : ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
October 04, 2025 7:04 PM IST