Last Updated:
ಆಸ್ಟ್ರೇಲಿಯಾ ಪ್ರವಾಸವನ್ನ ಸೋಲಿನೊಂದಿಗೆ ಆರಂಭಿಸಿರುವ ಭಾರತ, ಸರಣಿ ಗೆಲುವು ಪಡೆಯಲು 2ನೇ ಪಂದ್ಯ ಗೆಲ್ಲಲೇಬೇಕಿದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಕಂಡು ಬಂದ ವೈಫಲ್ಯವನ್ನ ಸರಿಪಡಿಸಿಕೊಂಡು ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರಿಗಿದೆ.
ಭಾರತ ತಂಡವು (Team India) ಭಾನುವಾರ ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳಿಂದ ಸೋತು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಇದೀಗ ಗುರುವಾರ (ಅಕ್ಟೋಬರ್ 23) ಅಡಿಲೇಡ್ ಓವಲ್ನಲ್ಲಿ ಆಸ್ಟ್ರೇಲಿಯಾ (India vs Australia) ವಿರುದ್ಧ ಎರಡನೇ ಏಕದಿನ ಪಂದ್ಯ ಆಡಲಿದೆ. ಮಳೆಯಿಂದಾಗಿ 26 ಓವರ್ಗೆ ಸಂಕ್ಷಿಪ್ತಗೊಂಡ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟರ್ಗಳು ಕೇವಲ 136 ರನ್ ಸಿಡಿಸಿದ್ದರು. ಡಿಎಲ್ಎಸ್ (ಡಕ್ವರ್ತ್-ಲೂಯಿಸ್-ಸ್ಟರ್ನ್) ಪದ್ಧತಿಯ ಪ್ರಕಾರ ಸರಿಹೊಂದಿಸಿದ ಗುರಿ 131ಕ್ಕೆ ಇಳಿಸಲಾಗಿತ್ತು. ಆದರೆ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಅದನ್ನು ಸುಲಭವಾಗಿ ತಲುಪಿ ಗೆಲುವು ದಾಖಲಿಸಿತು. ಇದೀಗ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡಕ್ಕೆ 2ನೇ ಪಂದ್ಯ ಸರಣಿ ಗೆಲ್ಲಲು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು, ಶತಾಯಗತಾಯ ಗೆಲ್ಲಲೇಬೇಕಿದೆ.
2ನೇ ಪಂದ್ಯದಲ್ಲಿ ಭಾರತೀಯ ಫ್ಯಾನ್ಗಳು ತಂಡದಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (0 ರನ್) ಮತ್ತು ರೋಹಿತ್ ಶರ್ಮಾ (8ರನ್) ಉತ್ತಮ ಆಟ ಪ್ರದರ್ಶಿಸಲು ವಿಫಲರಾಗಿದ್ದರು. ಆದರೂ, ಇಬ್ಬರೂ ಆಟಗಾರರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಳಿದ್ದಾರೆ. ರೋಹಿತ್ ಅವರು ಮೊದಲ ಸ್ಥಾನದಲ್ಲಿ (ಓಪನರ್) ಮತ್ತು ಕೊಹ್ಲಿ ಅವರು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ತಂಡ ನಿರ್ವಹಣೆಯು ಇಬ್ಬರಿಗೂ ಅವಕಾಶ ನೀಡಿ, ಭವಿಷ್ಯದಲ್ಲಿ ಉತ್ತಮ ಪ್ರದರ್ಶನಕ್ಕೆ ಒತ್ತು ನೀಡುವ ಉದ್ದೇಶವನ್ನು ಹೊಂದಿದೆ.
ಆದರೆ ಬೌಲಿಂಗ್ ವಿಭಾಗದಲ್ಲಿ ಒಂದು ಅಥವಾ ಎರಡು ಬದಲಾವಣೆಗಳು ಸಂಭವಿಸಬಹುದು ಎಂದು ಸುದ್ದಿಗಳು ಕೇಳಿಬರುತ್ತಿವೆ.ಮೊದಲ ಪಂದ್ಯಕ್ಕೆ ಭಾರತ ಮ್ಯಾನೇಜ್ಮೆಂಟ್ ಕುಲ್ದೀಪ್ ಯಾದವ್ ಅವರನ್ನು ಹೊರಗಿಟ್ಟಿತ್ತು. ಅವರನ್ನ ತಂಡದಿಂದ ಹೊರಗಿಟ್ಟದ್ದಕ್ಕೆ ಮ್ಯಾನೇಜ್ಮೆಂಟ್ ವಿರುದ್ಧ ಅಶ್ವಿನ್ ಸೇರಿ ಹಲವು ಮಾಜಿ ಆಟಗಾರರು ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕಾನ್ಪುರದ 20 ವರ್ಷದ ಸ್ಪಿನ್ ಬೌಲರ್ ಕುಲ್ದೀಪ್ ಅವರು ಎರಡನೇ ಪಂದ್ಯಕ್ಕೆ ಮರಳುವ ಸಾಧ್ಯತೆಯಿದೆ. ಇದಕ್ಕಾಗಿ ಯಾರನ್ನು ಹೊರಗಿಡಲಾಗುತ್ತದೆ ಎಂಬುದು ಆಸಕ್ತಿಯ ವಿಷಯ.
ಪ್ರಸ್ತುತ ತಂಡದ ಸಂಯೋಜನೆ ಗಮಿಸಿದರೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಹೊರಗಿಡುವುದು ಸಹಜ ಆಯ್ಕೆಯಂತಿದೆ. ಏಕೆಂದರೆ ನಿತೀಶ್ ಕುಮಾರ್ ರೆಡ್ಡಿ ವೇಗದ ಆಲ್ರೌಂಡರ್ ಹಾಗೂ ಬ್ಯಾಟಿಂಗ್ನಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯವಿದೆ. ಇನ್ನು ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಕುಲ್ದೀಪ್ ತಂಡಕ್ಕೆ ಸೇರಬೇಕಾದರೆ ವಾಷಿಂಗ್ಟನ್ ಜಾಗ ಮಾಡಿಕೊಡಬೇಕಾಗುತ್ತದೆ. ಕುಲ್ದೀಪ್ ಅವರ ಮರಳುಗೈ ಭಾರತದ ಸ್ಪಿನ್ ದಾಳಿಯನ್ನು ಬಲಪಡಿಸುತ್ತದೆ ಎಂದು ತಜ್ಞರು ಭಾವಿಸುತ್ತಾರೆ.
ಮತ್ತೊಂದು ಬದಲಾವಣೆ ಎಂದರೆ, ದೆಹಲಿಯ ಪೇಸರ್ ಹರ್ಷಿತ್ ರಾಣಾ. ಮೊದಲ ಏಕದಿನದಲ್ಲಿ ಬ್ಯಾಟ್ ಮತ್ತು ಬಾಲ್ ಎರಡೂದರಲ್ಲೂ ವಿಫಲರಾದ ಅವರು ಭಾರತೀಯ ಫ್ಯಾನ್ಗಳು ಮತ್ತು ತಜ್ಞರಿಂದ ತೀಕ್ಷ್ಣ ಟೀಕೆಗೆ ಗುರಿಯಾಗಿದ್ದಾರೆ. ಅವರ ಬದಲಿಗೆ ಕರ್ನಾಟಕದ ಪ್ರಸಿಧ್ ಕೃಷ್ಣ ಅವರನ್ನು ಆಯ್ಕೆಮಾಡಬಹುದು. 29 ವರ್ಷದ ಕೃಷ್ಣ ಅವರು ಭಾರತಕ್ಕಾಗಿ 12 ಏಕದಿನ ಪಂದ್ಯಗಳನ್ನು ಆಡಿದ್ದು, 29 ವಿಕೆಟ್ ಪಡೆದಿದ್ದಾರೆ. 2025ರ ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ವಿಕೆಟ್ಗಳನ್ನು ಗಳಿಸಿದ ಅವರು, ಆಗಸ್ಟ್ 4ರಂದು ಓವಲ್ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧದ 6 ರನ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೃಷ್ಣ ಸೇರ್ಪಡೆ ಭಾರತದ ಪೇಸ್ ದಾಳಿಯನ್ನು ತೀಕ್ಷ್ಣಗೊಳಿಸಬಹುದು ಎನ್ನಲಾಗುತ್ತಿದೆ.
ಭಾರತದ ಏಕದಿನ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಧುರ್ವ್ ಜುರೆಲ್ ಕೂಡ ಸೇರಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಇಂಜುರಿ ಸಮಸ್ಯೆ ಇಲ್ಲದಿರುವುದರಿಂದ, ಅವರು ಅಡಿಲೇಡ್ ಪಂದ್ಯದಲ್ಲಿ ಆಟವಾಡುವ ಸಾಧ್ಯತೆ ಕಡಿಮೆ.
ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯರ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ.
October 20, 2025 7:34 PM IST