Last Updated:
ಬ್ರಿಸ್ಬೇನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಸೀಸ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಇದಕ್ಕೂ ಮೊದಲು, ಆಸ್ಟ್ರೇಲಿಯಾ ವಿರುದ್ಧ ಇದೇ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ ಇದೇ ರೀತಿಯಲ್ಲಿ ಗೆದ್ದುಕೊಂಡಿತು.
ಭಾರತ ಎ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ (Australia A Women vs India A Women) ನೆಲದಲ್ಲಿ ಸಂಚಲನ ಸೃಷ್ಟಿಸಿದೆ. ಅವರು ಮೂರು ಪಂದ್ಯಗಳ ಏಕದಿನ ಸರಣಿಯನ್ನು (ODI Series) ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಿಂದ ಗೆದ್ದು ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಸರಣಿಯ ಮೊದಲು ಟಿ20 ಸರಣಿಯಲ್ಲಿ ಭಾರತ ತಂಡ ಎದುರಿಸಿದ ಕ್ಲೀನ್ ಸ್ವೀಪ್ (0-3) ಮುಖಭಂಗಕ್ಕೆ ಒಳಗಾಗಿತ್ತು. ಆದರೆ ಏಕದಿನ ಸರಣಿಯಲ್ಲಿ ಅತಿಥೇಯ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದೆ.
ಇಂದು (ಆಗಸ್ಟ್ 15) ಬ್ರಿಸ್ಬೇನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಸೀಸ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಇದಕ್ಕೂ ಮೊದಲು, ಆಸ್ಟ್ರೇಲಿಯಾ ವಿರುದ್ಧ ಇದೇ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ ಇದೇ ರೀತಿಯಲ್ಲಿ ಗೆದ್ದುಕೊಂಡಿತು.
266 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 193 ರನ್‌ಗೆ 7 ವಿಕೆಟ್ ಕಳೆದುಕೊಂಡು ಸೋಲುವ ಸ್ಥತಿಯಲ್ಲಿತ್ತು. ಆದರೆ ತನುಜಾ ಕನ್ವರ್ (50 ರನ್) ಮತ್ತು ಪ್ರೇಮಾ ರಾವತ್ (32 ರನ್, ಔಟಾಗದೆ) ಅವರ ಶ್ರೇಷ್ಠ ಹೋರಾಟದಿಂದ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಯಸ್ತಿಕಾ ಭಾಟಿಯಾ ( 71 ಎಸೆತಗಳಲ್ಲಿ,9 ಬೌಂಡರಿ ಸಹಿತ 66 ರನ್) ಮತ್ತು ನಾಯಕಿ ರಾಧಾ ಯಾದವ್ ( 78 ಎಸೆತಗಳಲ್ಲಿ 5ಬೌಂಡರಿ, 1 ಸಿಕ್ಸರ್ ಸಹಿತ 60 ರನ್) ಅರ್ಧಶತಕ ಗಳಿಸಿ ಆರಂಭದಲ್ಲಿ ತಂಡದ ಚೇಸಿಂಗ್ಗೆ ಬಲ ನೀಡಿದ್ದರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ತನುಜಾ ಪ್ರೇಮಾ ರಾವತ್ ಜೊತೆಗೂಡಿ 8ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ತನುಜಾ 57 ಎಸೆತಗಳಲ್ಲಿ 3 ಬೌಂಡರಿ ಸಹಿತ 50 ರನ್ಗಳಿಸಿ ಔಟ್ ಆದರು. ಪ್ರೇಮಾ 33 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 33 ರನ್ಗಳಿಸಿ ಕೇವಲ 1 ಎಸೆತ ಇರುವಂತೆ ಭಾರತಕ್ಕೆ ಗೆಲುವು ತಂಡುಕೊಂಡರು.
ಕೊನೆಯ ಓವರ್ನಲ್ಲಿ ಭಾರತಕ್ಕೆ ಗೆಲ್ಲಲು 5 ರನ್‌ಗಳ ಅಗತ್ಯವಿತ್ತು. ಪ್ರೇಮ ರಾವತ್ ಬೌಂಡರಿ ಹಾಗೂ ಸಿಂಗಲ್ ಪಡೆದು ಭಾರತಕ್ಕೆ 2 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು. ಆಸ್ಟ್ರೇಲಿಯಾ ಪರ ಜಾರ್ಜಿಯಾ, ಯಾಮಿ ಎಡ್ಗರ್ ಮತ್ತು ಹೇವರ್ಡ್ ತಲಾ 2 ವಿಕೆಟ್ ಪಡೆದರೆ, ಕಿಮ್ ಗಾರ್ತ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಎರಡನೇ ಏಕದಿನ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ಸ್ಟಾರ್ ಬ್ಯಾಟರ್ ಅಲಿಸಾ ಹೀಲಿ ( 87 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 91) ಮತ್ತು ಕಿಮ್ ಗಾರ್ತ್ ( 45 ಎಸೆತಗಳಲ್ಲಿ ಅಜೇಯ 41) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 265 ರನ್ ಗಳಿಸಿತು.
ಈ ಸರಣಿಯ ಔಪಚಾರಿಕವಾಗಿರುವ ಮೂರನೇ ಏಕದಿನ ಪಂದ್ಯ ಆಗಸ್ಟ್ 17 ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ನಂತರ ಭಾರತವು ಆಸೀಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನು ಸಹ ಆಡಲಿದೆ. ಈ ಪಂದ್ಯ ಆಗಸ್ಟ್ 21 ರಂದು ಪ್ರಾರಂಭವಾಗಲಿದೆ.
August 15, 2025 5:59 PM IST