Last Updated:
ಪರ್ತ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿದೆ.
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ (ODI series) ಭಾರೀ ಕುತೂಹಲ ಮೂಡಿಸಿದೆ. ಉಭಯ ತಂಡಗಳ ಮೊದಲ ಏಕದಿನ ಪಂದ್ಯ (One-day match) ನಾಳೆ ಅಂದರೆ ಅಕ್ಟೋಬರ್ 19 ರಂದು ಪರ್ತ್ (Perth)ನಲ್ಲಿ ಬೆಳಿಗ್ಗೆ 9:00 ಗಂಟೆಗೆ ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಆಟಗಾರರನ್ನು ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಆಟ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೊದಲ ಏಕದಿನ ಪಂದ್ಯದ ಸಮಯದಲ್ಲಿ ಮಳೆ (Rain)ಯು ಹಾನಿಯನ್ನುಂಟುಮಾಡುತ್ತದೆಯೇ ಎಂಬ ಚರ್ಚೆ ಶುರುವಾಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಳು ತಿಂಗಳ ವಿರಾಮದ ನಂತರ ಟೀಮ್ ಇಂಡಿಯಾಕ್ಕೆ ಮರಳಲಿದ್ದಾರೆ. ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್‌ನಲ್ಲಿ ಟೀಮ್ ಇಂಡಿಯಾ ಪರ ಈ ಇಬ್ಬರೂ ದಿಗ್ಗಜರು ಆಡಿದ್ದರು. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ ಪರ್ತ್‌ನಲ್ಲಿ ಅಕ್ಟೋಬರ್ 19 ರಂದು ಮಳೆ ಆಗುವ ಸಾಧ್ಯತೆಯಿದೆ.
ಪರ್ತ್ ಹವಾಮಾನದ ಬಗ್ಗೆ ಒಂದು ಪ್ರಮುಖ ಮಾಹಿತಿ ಇದ್ದಕ್ಕಿದ್ದಂತೆ ಹೊರಬಿದ್ದಿದೆ. ಪರ್ತ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿದೆ. ಭಾನುವಾರ ಪರ್ತ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ.63 ರಷ್ಟು ಇದೆ. ಅಕ್ಯೂವೆದರ್ ಪ್ರಕಾರ, ಭಾನುವಾರ ಬೆಳಿಗ್ಗೆ 11:30 ಗಂಟೆಗೆ ಪಂದ್ಯ ಪ್ರಾರಂಭವಾಗುವ ಮೊದಲು ಪರ್ತ್‌ನಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ.35 ಕ್ಕಿಂತ ಹೆಚ್ಚಿದೆ.
ಪರ್ತ್ ಪಂದ್ಯದ ಸಮಯದಲ್ಲಿ ಮಳೆಯಿಂದ ಆಗಾಗ್ಗೆ ಅಡಚಣೆಗಳು ಉಂಟಾಗುವ ನಿರೀಕ್ಷೆಯಿದೆ. ಇದು ಅಭಿಮಾನಿಗಳು ಮತ್ತು ಆಟಗಾರರಿಬ್ಬರಿಗೂ ನಿರಾಶೆಯನ್ನು ಹೆಚ್ಚಿಸಬಹುದು. ಮಳೆಯಿಂದಾಗಿ ಟಾಸ್ ನಿರ್ಣಾಯಕವಾಗಿರುತ್ತದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವ ಸಾಧ್ಯತೆಯಿದೆ. ಪರ್ತ್ ಪಿಚ್ ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗುತ್ತದೆ. ಪರ್ತ್ ಪಿಚ್‌ನ ವೇಗ, ಬೌನ್ಸ್ ಮತ್ತು ಸ್ವಿಂಗ್ ಬ್ಯಾಟರ್ಸ್ಗೆ ರನ್ ಗಳಿಸಲು ಸವಾಲಾಗಬಹುದು. ಹೀಗಾಗಿ ಈ ಪಿಚ್ನಲ್ಲಿ ಬೌಲರ್ಸ್ ಮೇಲುಗೈ ಸಾಧಿಸುಬಹುದು.
ಆಪ್ಟಸ್ ಕ್ರೀಡಾಂಗಣದಲ್ಲಿ ಕೇವಲ ಮೂರು ಏಕದಿನ ಪಂದ್ಯಗಳು ನಡೆದಿದ್ದು, ಎರಡನೇ ಬಾರಿ ಬ್ಯಾಟಿಂಗ್ ಮಾಡುವ ತಂಡಗಳು ಎರಡರಲ್ಲಿ ಗೆದ್ದಿವೆ. ಈ ಪಿಚ್ ಅನ್ನು ವೇಗದ ಬೌಲರ್‌ಗಳ ಸ್ವರ್ಗವೆಂದು ಕರೆಯಲಾಗುತ್ತದೆ. ಮೊದಲ ಇನ್ನಿಂಗ್ಸ್ನ ಗರಿಷ್ಠ ಸ್ಕೋರ್ 183 ರನ್ ಆಗಿದ್ದರೆ, ಚೇಸಿಂಗ್ನಲ್ಲಿ ಗರಿಷ್ಠ ಗುರಿ 153 ರನ್ ಆಗಿದೆ. ಆದ್ದರಿಂದ, ಆಪ್ಟಸ್ ಕ್ರೀಡಾಂಗಣದಲ್ಲಿ ಬಿಗ್ ಶಾಟ್ ಆಡಲು ಪ್ರಯತ್ನಿಸುವ ಮೊದಲು ಬ್ಯಾಟರ್ಸ್ ಪಿಚ್‌ನ ವೇಗ ಮತ್ತು ಬೌನ್ಸ್‌ಗೆ ಹೊಂದಿಕೊಳ್ಳಬೇಕಾಗುತ್ತದೆ.
October 18, 2025 4:50 PM IST