IND vs AUS: ಮಿಂಚಿದ ಹರ್ಷಿತ್ ರಾಣಾ, ಆಸ್ಟ್ರೇಲಿಯಾ ತಂಡವನ್ನ 236ಕ್ಕೆ ನಿಯಂತ್ರಿಸಿದ ಟೀಮ್ ಇಂಡಿಯಾ | Rana’s 4-Wicket Haul Helps India Limit Australia to 236 in Sydney ODI | ಕ್ರೀಡೆ

IND vs AUS: ಮಿಂಚಿದ ಹರ್ಷಿತ್ ರಾಣಾ, ಆಸ್ಟ್ರೇಲಿಯಾ ತಂಡವನ್ನ 236ಕ್ಕೆ ನಿಯಂತ್ರಿಸಿದ ಟೀಮ್ ಇಂಡಿಯಾ | Rana’s 4-Wicket Haul Helps India Limit Australia to 236 in Sydney ODI | ಕ್ರೀಡೆ
ಆಸ್ಟ್ರೇಲಿಯಾ ಉತ್ತಮ ಆರಂಭ

ಆಸ್ಟ್ರೇಲಿಯಾ ತಂಡ ಮೊದಲ ವಿಕೆಟ್​ಗೆ 9.2 ಓವರ್​ಗಳಲ್ಲಿ 61 ರನ್ಗಳ ಜೊತೆಯಾಟ ನಡೆಸಿತು. ಆದರೆ ಈ ವಿಕೆಟ್ ಬ್ರೇಕ್ ಆದ ನಂತರ ಆಸ್ಟ್ರೇಲಿಯಾದಿಂದ ಉತ್ತಮ ಜೊತೆಯಾಟ ಬರಲಿಲ್ಲ. ಹೆಡ್​ 25 ಎಸೆತಗಳಲ್ಲಿ 29 ರನ್​ಗಳಿಸಿ ಸಿರಾಜ್​ ಬೌಲಿಂಗ್​​ನಲ್ಲಿ ಪ್ರಸಿಧ್ ಕೃಷ್ಣಗೆ ಕ್ಯಾಚ್ ನೀಡಿದರು. ನಂತರ ಮಿಚೆಲ್ ಮಾರ್ಷ್​ 50 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 41 ರನ್​ಗಳಿಸಿ ಔಟ್ ಆದರು.

ಮಧ್ಯಮ ಕ್ರಮಾಂಕ ಧೂಳೀಪಟ ಮಾಡಿದ ಭಾರತ

ಕಳೆದ ಪಂದ್ಯದಲ್ಲಿ 74 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮ್ಯಾಥ್ಯೂ ಶಾರ್ಟ್ ಇಂದು 41 ಎಸೆತಗಳಲ್ಲಿ ಕೇವಲ 30 ರನ್​ಗಳಿಸಿ  ಸಿರಾಜ್​ಗೆ ಎರಡನೇ ಬಲಿಯಾದರು. ಈ ಹಂತದಲ್ಲಿ ಒಂದಾದ ಒಂದಾದ ರೆನ್​ಶಾ ಹಾಗೂ ಅಲೆಕ್ಸ್ ಕ್ಯಾರಿ 59 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಕ್ಯಾರಿ 24 ರನ್​ಗಳಿಸಿ ಹರ್ಷಿತ್ ರಾಣಾ ಬೌಲಿಂಗ್​​ನಲ್ಲಿ ಶ್ರೇಯಸ್ ಅಯ್ಯರ್​ಗೆ ಕ್ಯಾಚ್ ನೀಡಿ ಔಟ್ ಆದರು.

ಅಲೆಕ್ಸ್ ಕ್ಯಾರಿ ವಿಕೆಟ್ ಬೀಳುತ್ತಿದ್ದಂತೆ ಆಸ್ಟ್ರೇಲಿಯಾ ಪತನ ಶುರುವಾಯಿತು. ಮಿಚೆಲ್ ಓವೆನ್ 1 ರನ್, ಮಿಚೆಲ್ ಸ್ಟಾರ್ಕ್ 2,  ನೇಥನ್ ಎಲ್ಲಿಸ್  16, ಜೋಶ್ ಹೇಜಲ್​ವುಡ್ 0 ರನ್​ಗೆ ವಿಕೆಟ್ ಒಪ್ಪಿಸಿದರು.

ಮಿಂಚಿದ ಹರ್ಷಿತ್ ರಾಣಾ

ಭಾರತ ತಂಡದ ಪರ ಹರ್ಷಿತ್ ರಾಣಾ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. 8.4 ಓವರ್​ಗಳಲ್ಲಿ 39 ರನ್​ ನೀಡಿ 4 ವಿಕೆಟ್ ಪಡೆದರೆ, ಸುಂದರ್ 44 ರನ್ ನೀಡಿ 2 ವಿಕೆಟ್ ಪಡೆದರು. ಪ್ರಸಿಧ್ ಕೃಷ್ಣ 51ಕ್ಕೆ1, ಮೊಹಮ್ಮದ್ ಸಿರಾಜ್ 24ಕ್ಕೆ1, ಅಕ್ಷರ್ ಪಟೇಲ್ 18ಕ್ಕೆ1, ಕುಲ್ದೀಪ್ ಯಾದವ್ 50ಕ್ಕೆ1 ವಿಕೆಟ್ ಪಡೆದ ಆಸ್ಟ್ರೇಲಿಯಾ ತಂಡವನ್ನ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು.

ಆಸ್ಟ್ರೇಲಿಯಾ ಈ ಮೈದಾನದಲ್ಲಿ ಭಾರತದ ವಿರುದ್ಧ ಆಡಿದ್ದ ಕೊನೆಯ 2 ಪಂದ್ಯಗಳಲ್ಲಿ ಕ್ರಮವಾಗಿ 389 ಮತ್ತು 374 ರನ್​ಗಳಿಸಿತ್ತು. ಆದರೆ ಇಂದು ಕನಿಷ್ಠ 250 ರನ್​ಗಳಿಸಲು ವಿಫಲವಾಯಿತು. ಹಿಂದಿನ ಎರಡೂ ಪಂದ್ಯಗಳಲ್ಲೂ ಭಾರತ ಸೋಲು ಕಂಡಿತ್ತು. 2016ರ ಪ್ರವಾಸದಲ್ಲಿ ಭಾರತ ಈ ಮೈದಾನದಲ್ಲಿ 331 ರನ್​ಗಳ ಬೃಹತ್ ಗುರಿಯನ್ನ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿತ್ತು. ಆ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

 ಎರಡು ತಂಡಗಳ ಪ್ಲೇಯಿಂಗ್ XI

ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಮ್ಯಾಥ್ಯೂ ಶಾರ್ಟ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕೊನೊಲಿದ, ಮಿಚೆಲ್ ಓವನ್, ನೇಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೇಜಲ್‌ವುಡ್