Last Updated:
ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ಕೆಎಲ್ ರಾಹುಲ್ ಟೆಸ್ಟ್ಗಳಲ್ಲಿ ಹೆಚ್ಚಿನ ಶತಕಗಳನ್ನು ಗಳಿಸುತ್ತಾರೆ ಎಂದು ನಿರೀಕ್ಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 375 ರನ್ ಗಳಿಸಿರುವ ರಾಹುಲ್, ಪ್ರಶಂಸಿಸಲ್ಪಟ್ಟಿದ್ದಾರೆ.
ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಟೆಸ್ಟ್ ಸ್ವರೂಪದಲ್ಲಿ ಹೆಚ್ಚಿನ ಶತಕಗಳನ್ನು ಗಳಿಸುತ್ತಾರೆ ಎಂದು ನಿರೀಕ್ಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ (WTC) ಭಾರತ ಪರ ಬ್ಯಾಟಿಂಗ್ನಲ್ಲಿ ಗಮನಾರ್ಹ ಕೊಡುಗೆ ನೀಡಿದವರಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ಒಬ್ಬರು. ಮೂರು ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 375 ರನ್ ಗಳಿಸಿರುವ ರಾಹುಲ್, ಸರಣಿಯಲ್ಲಿ ಇದುವರೆಗಿನ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ರಾಹುಲ್ ಅವರ ಇತ್ತೀಚಿನ ಪ್ರದರ್ಶನ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಂದ ಪ್ರಶಂಸೆಗೆ ಪಾತ್ರವಾಗಿವೆ. ಐಸಿಸಿ ರಿವ್ಯೂನ ಇತ್ತೀಚಿನ ಆವೃತ್ತಿಯಲ್ಲಿ ಮಾತನಾಡಿದ ಶಾಸ್ತ್ರಿ, ಅನುಭವಿ ಓಪನರ್ ಅವರ ಉತ್ತಮ ಫಾರ್ಮ್ ಅನ್ನ ಶ್ಲಾಘಿಸಿದ್ದಾರೆ. ” ರಾಹುಲ್ ಸಾಮರ್ಥ್ಯವನ್ನು ಕಡೆಗಣಿಸಿ ಆತ ಪ್ರತಿಭಾನ್ವಿತ ಆಟಗಾರನಲ್ಲ ಎಂದು ಹೇಳುವ ಒಬ್ಬ ವ್ಯಕ್ತಿಯೂ ಜಗತ್ತಿನಲ್ಲಿ ಇಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಶಾಸ್ತ್ರಿ ಕನ್ನಡಿಗನ್ನ ಪ್ರಶಂಸಿಸಿದ್ದಾರೆ.
“ಹಿಂದೆ ಇಷ್ಟು ಪ್ರತಿಭೆ ಇದ್ದರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಜನರು ಸಿಟ್ಟಿಗೆದಿದ್ದರು. ಆದರೆ ಈ ಸರಣಿಯಲ್ಲಿ ರಾಹುಲ್ ಅವರ ಅತ್ಯುತ್ತಮ ಪ್ರದರ್ಶನವನ್ನು ನೀವು ನೋಡುತ್ತಿದ್ದೀರಿ” ಎಂದು ಶಾಸ್ತ್ರಿ ಹೇಳಿದರು. ಈ ಫಾರ್ಮ್ ಸಾಧಿಸಲು ರಾಹುಲ್ ತಾಂತ್ರಿಕ ಬದಲಾವಣೆ ಮಾಡಿದ್ದಾರೆ ಎಂದು ಶಾಸ್ತ್ರಿ ಹೇಳಿದರು. “ಅವರು ತಮ್ಮ ಮುಂಭಾಗದ ಪಾದ, ನಿಲುವು ಮತ್ತು ಡಿಫೆನ್ಸ್ನಲ್ಲಿ ಸ್ವಲ್ಪ ಬದಲಾಯಿಸಿರುವುದನ್ನು ನಾನು ಗಮನಿಸಿದ್ದೇನೆ. ಇದರಿಂದ ಅವರ ಬ್ಯಾಟಿಂಗ್ ಹೆಚ್ಚು ಸ್ವತಂತ್ರವಾಗಿದೆ, ಮತ್ತು ಚೆಂಡನ್ನು ಮಿಡ್-ವಿಕೆಟ್ ಕಡೆಗೆ ಹೊಡೆಯುವಾಗಲೂ ಬ್ಯಾಟ್ನ ಪೂರ್ಣ ಮುಖವನ್ನು ಬಳಸುತ್ತಿದ್ದಾರೆ. ಇದರಿಂದ ಅವರು ಎಲ್ಬಿಡಬ್ಲ್ಯೂ ಅಥವಾ ಬೌಲ್ಡ್ ಆಗುವ ಸಾಧ್ಯತೆ ಕಡಿಮೆಯಾಗಿದೆ ಎಂದು ರಾಹುಲ್ ಬದಲಾವಣೆ ಬಗ್ಗೆ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಅವರ ಇತ್ತೀಚಿನ ಪ್ರದರ್ಶನವು ಇಂಗ್ಲೆಂಡ್ನಲ್ಲಿ ಭಾರತ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕ (ನಾಲ್ಕು) ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (ಆರು) ನಂತರ ಜಂಟಿ ಎರಡನೇ ಸ್ಥಾನ ಪಡೆದಿದೆ. 33 ನೇ ವಯಸ್ಸಿನಲ್ಲಿ, ಅನುಭವಿ ಆಟಗಾರ ರೆಡ್-ಬಾಲ್ ಕ್ರಿಕೆಟ್ನಲ್ಲಿ ಉತ್ತುಂಗದಲ್ಲಿದ್ದಾರೆ, ಇದು ಬ್ಯಾಟಿಂಗ್ನಲ್ಲಿ ದೀರ್ಘಾವಧಿಯ ಪ್ರಾಬಲ್ಯದ ಆರಂಭವಾಗಬಹುದು. ಮುಂದಿನ ಮೂರು-ನಾಲ್ಕು ವರ್ಷಗಳ ಸಂಪೂರ್ಣ ಲಾಭವನ್ನು ಅವರು ಪಡೆದುಕೊಳ್ಳಬೇಕು” ಎಂದು ಶಾಸ್ತ್ರಿ ಕಿವಿಮಾತು ಹೇಳಿದ್ದಾರೆ.
“ಅವರು ಭಾರತದಲ್ಲಿಯೂ ಸಾಕಷ್ಟು ಕ್ರಿಕೆಟ್ ಆಡುತ್ತಿರುವುದರಿಂದ ಅವರು ಬಹಳಷ್ಟು ಶತಕಗಳನ್ನು ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ರಾಹುಲ್ ಪ್ರಸ್ತುತ 35.3 ಸರಾಸರಿಯಲ್ಲಿ 3632 ರನ್ ಗಳಿಸಿದ್ದಾರೆ, ಇದರಲ್ಲಿ 10 ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23, 2025 ರಿಂದ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಆರಂಭವಾಗಲಿದೆ. ರಾಹುಲ್ರ ಈ ಫಾರ್ಮ್ ತಂಡಕ್ಕೆ ಈ ಪಂದ್ಯದಲ್ಲಿ ದೊಡ್ಡ ಗೆಲುವಿನ ಭರವಸೆಯನ್ನು ನೀಡುತ್ತಿದೆ.
July 19, 2025 7:30 PM IST
IND vs ENG: ಆತ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ, ಮುಂದಿನ ನಾಲ್ಕೈದು ವರ್ಷ ಶತಕಗಳ ಸುರಿಮಳೆ ಗ್ಯಾರಂಟಿ! ಸ್ಟಾರ್ ಓಪನರ್ ಬಗ್ಗೆ ರವಿಶಾಸ್ತ್ರಿ ಭವಿಷ್ಯ