ಬುಮ್ರಾರ ಸಾಧನೆ ಮತ್ತು ಶಾಸ್ತ್ರಿಯ ಮೆಚ್ಚುಗೆ
ಎರಡನೇ ದಿನದಾಟದಲ್ಲಿ ಬುಮ್ರಾ ಜಾಕ್ ಕ್ರಾಲಿ (4), ಬೆನ್ ಡಕೆಟ್ (62), ಮತ್ತು ಜೋ ರೂಟ್ (28) ಅವರ ವಿಕೆಟ್ಗಳನ್ನು ಪಡೆದರು. ರವೀಂದ್ರ ಜಡೇಜಾ ಬೆನ್ ಡಕೆಟ್ರ ಕ್ಯಾಚ್ (15 ರನ್ನಲ್ಲಿ) ಕೈಚೆಲ್ಲಿದ್ದರಿಂದ ಬುಮ್ರಾರ ದಾಖಲೆ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಇದೇ ರೀತಿ, ದಿನದ ಕೊನೆಯ ಓವರ್ನಲ್ಲಿ ಹ್ಯಾರಿ ಬ್ರೂಕ್ರನ್ನು ಔಟ್ ಮಾಡಿದ್ದ ಬುಮ್ರಾ, ಫ್ರಂಟ್ ಫೂಟ್ ನೋ ಬಾಲ್ ಕಾರಣದಿಂದ ಆ ವಿಕೆಟ್ ಕಳೆದುಕೊಂಡರು.
ಬುಮ್ರಾ ಶ್ರೇಷ್ಠ ಬೌಲರ್
ಸ್ಕೈ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಶಾಸ್ತ್ರಿ, “ಬುಮ್ರಾ ಭಾರತದ ಶ್ರೇಷ್ಠ ವೇಗದ ಬೌಲರ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಕಪಿಲ್ ದೇವ್ ಜೊತೆ ಆಡಿದ್ದೇನೆ, ಆದರೆ ಈತ ವಿಭಿನ್ನ. ಯಾವುದೇ ವಿಕೆಟ್, ಯಾವುದೇ ಫಾರ್ಮ್ಯಾಟ್ನಲ್ಲಿ, ಯಾವುದೇ ವಿರೋಧಿ ತಂಡವನ್ನು ಈತ ಧ್ವಂಸ ಮಾಡಬಲ್ಲರು ಎಂದಿರುವ ಶಾಸ್ತ್ರಿ, ವೆಸ್ಟ್ ಇಂಡೀಸ್ನ ದಿಗ್ಗಜ ಮಾಲ್ಕಮ್ ಮಾರ್ಷಲ್ರೊಂದಿಗೆ ಬುಮ್ರಾರನ್ನು ಹೋಲಿಕೆ ಮಾಡಿದ್ದಾರೆ.
” ಮಾರ್ಷಲ್ ಬ್ಯಾಟ್ಸ್ಮನ್ರನ್ನು ರೀಡ್ ಮಾಡುವುದರಲ್ಲಿ ಮತ್ತು ತಂತ್ರ ಹೆಣೆಯುವುದರಲ್ಲಿ ಶ್ರೇಷ್ಠರಾಗಿದ್ದರು, ಬುಮ್ರಾ ಕೂಡ ಅವರಿಗಿಂತ ಕೊಂಚವೂ ಕಡಿಮೆ ಇಲ್ಲ. ಹೊಸ ಚೆಂಡಿನೊಂದಿಗೆ ಸ್ವಿಂಗ್ ಪಡೆಯುವಲ್ಲಿ ಬುಮ್ರಾ ಸುಧಾರಿಸಿದ್ದಾರೆ. ಅವರ ವಿಚಿತ್ರ ಆಕ್ಷನ್ ಮತ್ತು ತಡವಾದ ರಿಲೀಸ್ನಿಂದಾಗಿ, ಸ್ವಿಂಗ್ ಆದಾಗ ಯಾವುದೇ ಬ್ಯಾಟ್ಸ್ಮನ್ಗೆ ಅವರನ್ನು ಎದುರಿಸುವುದು ಕಷ್ಟ,” ಎಂದು ಶಾಸ್ತ್ರಿ ಹೇಳಿದರು.
ಭಾರತಕ್ಕೆ ಗೆಲ್ಲುವ ಅವಲಾಶ
ಶಾಸ್ತ್ರಿ ಪ್ರಕಾರ, ಭಾರತ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶವಿದೆ. “ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಇನ್ನೂ 75-80 ರನ್ಗಳನ್ನು ಸೇರಿಸಬಹುದಿತ್ತು ಆಗಲಿಲ್ಲ ಎಂಬ ನಿರಾಸೆ ಇದೆ, ಆದರೆ ದಿನದ ಕೊನೆಯಲ್ಲಿ ಜೋ ರೂಟ್ರ ವಿಕೆಟ್ ಪಡೆದಿದ್ದು ಒಳ್ಳೆಯದಾಯಿತು. ಮೂರನೇ ದಿನದ ಮೊದಲ ಗಂಟೆಯಲ್ಲಿ ಬುಮ್ರಾ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರೆ, ಭಾರತ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಬಹುದು,” ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಪಂದ್ಯದ ಪರಿಸ್ಥಿತಿ
ಭಾರತದ ಮೊದಲ ಇನ್ನಿಂಗ್ಸ್: ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ಗೆ ಆಲ್ಔಟ್ ಆಗಿದೆ. ಯಶಸ್ವಿ ಜೈಸ್ವಾಲ್ (101), ಶುಭ್ಮನ್ ಗಿಲ್ (147), ಮತ್ತು ರಿಷಭ್ ಪಂತ್ (134) ಶತಕಗಳನ್ನು ಬಾರಿಸಿ ತಂಡಕ್ಕೆ ಬಲಿಷ್ಠ ಆಧಾರ ನೀಡಿದರು. ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಮತ್ತು ಜೋಶ್ ಟಂಗ್ ತಲಾ ನಾಲ್ಕು ವಿಕೆಟ್ಗಳನ್ನು ಪಡೆದರು.
ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್: ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 49 ಓವರ್ಗಳಲ್ಲಿ 3 ವಿಕೆಟ್ಗೆ 209 ರನ್ ಗಳಿಸಿತು. ಒಲಿವರ್ ಪೋಪ್ ಶತಕ (100*, 131 ಎಸೆತ, 13 ಬೌಂಡರಿ) ಗಳಿಸಿ ಕ್ರೀಸ್ನಲ್ಲಿ ಉಳಿದಿದ್ದಾರೆ, ಜೊತೆಗೆ ಬೆನ್ ಡಕೆಟ್ 62 ರನ್ (94 ಎಸೆತ, 9 ಬೌಂಡರಿ) ಗಳಿಸಿದರು. ಬುಮ್ರಾ ಮೂರು ವಿಕೆಟ್ಗಳನ್ನು ಪಡೆದು ಮಿಂಚಿದರು.
ಬುಮ್ರಾರ ದಾಖಲೆಗಳು
SENA ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ಯಾವುದೇ ಏಷ್ಯಾದ ಬೌಲರ್ಗಿಂತ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು (147) ಬುಮ್ರಾ ಪಡೆದಿದ್ದಾರೆ. ಇಂಗ್ಲೆಂಡ್ನಲ್ಲಿ 10 ಟೆಸ್ಟ್ಗಳಲ್ಲಿ 39 ವಿಕೆಟ್ಗಳನ್ನು, ಆಸ್ಟ್ರೇಲಿಯಾದಲ್ಲಿ 12 ಟೆಸ್ಟ್ಗಳಲ್ಲಿ 64 ವಿಕೆಟ್ಗಳನ್ನು, ದಕ್ಷಿಣ ಆಫ್ರಿಕಾದಲ್ಲಿ 8 ಟೆಸ್ಟ್ಗಳಲ್ಲಿ 38 ವಿಕೆಟ್ಗಳನ್ನು, ಮತ್ತು ನ್ಯೂಜಿಲೆಂಡ್ನಲ್ಲಿ 2 ಟೆಸ್ಟ್ಗಳಲ್ಲಿ 6 ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಟೆಸ್ಟ್ ಪಂದ್ಯದಲ್ಲಿ ಬುಮ್ರಾರ ಪ್ರದರ್ಶನ ಮತ್ತು ಶಾಸ್ತ್ರಿಯ ಹೊಗಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವನ್ನು ಒಡಮೂಡಿದೆ. ಮುಂದಿನ ದಿನಗಳಲ್ಲಿ ಬುಮ್ರಾ ತಂಡಕ್ಕೆ ಗೆಲುವಿನ ಆಸರೆಯಾಗುವರೇ ಎಂಬುದು ಕಾದುನೋಡಬೇಕು.
June 22, 2025 6:32 PM IST