ಇಂಗ್ಲೆಂಡ್ ನಾಯಕ ನಿರ್ಧಾರಕ್ಕೆ ಟೀಕೆ
ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ವಿಕೆಟ್ ಬ್ಯಾಟಿಂಗ್ ಸ್ನೇಹಿ ಎಂದು ತಿಳಿದಿದ್ದರೂ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರವನ್ನು ಕ್ರಿಕೆಟ್ ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ಅಥರ್ಟನ್ ” ಸಾಮಾನ್ಯ ಜ್ಞಾನವಿರುವ ಯಾವುದೇ ಕ್ರಿಕೆಟ್ ಆಟಗಾರ ಇಂತಹ ಪಿಚ್‌ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದ. ಇಲ್ಲಿ ಬಿಸಿಲು ಜಾಸ್ತಿಯಿದೆ, ತಾಪಮಾನ 30 ಡಿಗ್ರಿಗಿಂತ ಹೆಚ್ಚಿದೆ. ಆದರೆ ಕಳೆದ ಆರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ ತಂಡ ಗೆದ್ದಿದೆ ಎಂಬ ಅಂಕಿ-ಅಂಶವನ್ನಷ್ಟೇ ನಂಬಿದ ಸ್ಟೋಕ್ಸ್ ತಪ್ಪು ಮಾಡಿದರು. ಆದರೂ, ಇಂಗ್ಲೆಂಡ್ ದೊಡ್ಡ ಗುರಿಯನ್ನು ಬೆನ್ನಟ್ಟಬಲ್ಲದು ಎಂಬ ವಿಶ್ವಾಸವಿದೆ,” ಎಂದು ಹೇಳಿದರು.
ಮತ್ತೊಬ್ಬ ಮಾಜಿ ನಾಯಕ ಅಲಸ್ಟೈರ್ ಕುಕ್ “ಡ್ರೈ ಪಿಚ್, ತೀವ್ರ ಬಿಸಿಲು, ಸ್ವಿಂಗ್‌ಗೆ ಅನುಕೂಲವಿಲ್ಲದ ಹವಾಮಾನ, ಮತ್ತು ಅನಾನುಭವಿ ಬೌಲರ್‌ಗಳಿರುವಾಗ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ತಪ್ಪಾಯಿತು. ಇಂಗ್ಲೆಂಡ್ ಈಗ ತಮ್ಮ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಿದೆ,” ಎಂದರು.
ದಿಗ್ಭ್ರಮೆಗೊಂಡೆ ಎಂದ ವಾನ್
ಇಂಗ್ಲೆಂಡ್ ನಾಯಕನಾಗಿ ನಾಲ್ಕು ಪಂದ್ಯಗಳನ್ನು ಆಡಿದ್ದು ಸೇರಿದಂತೆ, 51 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮೈಕಲ್ ವಾನ್ ಟಾಸ್ ಸಮಯದಲ್ಲಿ ಸ್ಟೋಕ್ಸ್ ತೆಗೆದುಕೊಂಡ ನಿರ್ಧಾರದಿಂದ ದಿಗ್ಭ್ರಮೆಗೊಂಡಿದ್ದಾಗಿ ಎಂದು ಹೇಳಿದ್ದಾರೆ. ” ನಾನು ಲೀಡ್ಸ್‌ನಲ್ಲಿ ಒಲ್ಟ್ ಸ್ಟೂಡೆಂಟ್, ಸೂರ್ಯ ಬೆಳಗುತ್ತಿರುವಾಗ,ಉಷ್ಣ ಹವಾಮಾನ ಇರುವ ಸಂದರ್ಭದಲ್ಲಿ, ಯಾರೇ ಆದರೂ ಬ್ಯಾಟ್ ಮಾಡಲು ಬಯಸುತ್ತಾರೆ. ಆದರೆ ಸ್ಟೋಕ್ಸ್ ಬೌಲಿಂಗ್ ಮಾಡುವುದಾಗಿ ಹೇಳಿದಾಗ ನಾನು ದಿಗ್ಭ್ರಮೆಗೊಂಡೆ. ನೀವು ಆ ಕ್ಷಣದ ಮೇಲೆ ನಿಮ್ಮ ನಿರ್ಧಾರಗಳನ್ನು ಆರಿಸಿಕೊಳ್ಳಬೇಕು, ವರ್ಷಗಳ ಹಿಂದೆ ಇಲ್ಲಿ ಏನಾಗಿದೆ ಏಂಬ ದಾಖಲೆಗಳನ್ನ ನಿರ್ಣಾಯಕವಾಗಿ ತೆಗೆದುಕೊಳ್ಳಬಾರದು ಎಂದು ಟೀಕಿಸಿದ್ದಾರೆ.
ಇಂಗ್ಲೆಂಡ್‌ನ ಇತರೆ ತಪ್ಪುಗಳು
ಯಶಸ್ವಿ ಜೈಸ್ವಾಲ್‌ಗೆ ಜೀವದಾನ: 45 ರನ್‌ನಲ್ಲಿದ್ದಾಗ ಕಾರ್ ಎಸೆದ ಯಾರ್ಕರ್‌ನಿಂದ ಜೈಸ್ವಾಲ್ LBW ಆಗಬಹುದಿತ್ತು. ಆದರೆ, ಅದು ‘ನೋ ಬಾಲ್’ ಆಗಿತ್ತು. ರಿಪ್ಲೇನಲ್ಲಿ ಚೆಂಡು ಮೊದಲು ಪ್ಯಾಡ್‌ಗೆ ತಾಗಿತ್ತು ಎಂದು ತೋರಿತು, ಆದರೆ ನೋ ಬಾಲ್‌ನಿಂದಾಗಿ ಜೈಸ್ವಾಲ್ ಔಟಾಗಲಿಲ್ಲ.
ಗಿಲ್‌ಗೆ ರನ್‌ಔಟ್ ಮಿಸ್: ಗಿಲ್ 1 ರನ್‌ನಲ್ಲಿದ್ದಾಗ ಕಾರ್ಸ್ ಬೌಲಿಂಗ್‌ನಲ್ಲಿ ಸಿಂಗಲ್ ಓಡಲು ಯತ್ನಿಸಿದರು. ಆದರೆ, ಒಲ್ಲಿ ಪೋಪ್ ಎಸೆದ ತ್ರೋ ವಿಕೆಟ್‌ಗೆ ತಾಗದ ಕಾರಣ ಗಿಲ್ ರನ್‌ಔಟ್‌ನಿಂದ ತಪ್ಪಿಸಿಕೊಂಡರು. ಈ ಎಸೆತ ಓವರ್‌ತ್ರೋ ಆಗಿ ಬೌಂಡರಿಗೆ ಹೋಗಿ 4 ರನ್ ಸೇರಿತು.
ಪೆನಾಲ್ಟಿ ರನ್‌ಗಳು: ಚಹಾ ವಿರಾಮದ ಮೊದಲು ಸ್ಟೋಕ್ಸ್ ಎಸೆದ ಓವರ್‌ನಲ್ಲಿ ಸ್ಲಿಪ್ ಫೀಲ್ಡರ್ ಜೋ ರೂಟ್ ಚೆಂಡನ್ನು ತಡೆಯಲು ಯತ್ನಿಸಿ ತಪ್ಪಿದರು. ಚೆಂಡು ವಿಕೆಟ್ ಕೀಪರ್‌ನ ಹೆಲ್ಮೆಟ್‌ಗೆ ತಾಗಿ ಭಾರತಕ್ಕೆ 5 ಪೆನಾಲ್ಟಿ ರನ್ ಸಿಕ್ಕಿತು. ಇದೇ ಓವರ್‌ನಲ್ಲಿ ಅಂಪೈರ್ ತಪ್ಪು ಲೆಕ್ಕಾಚಾರ ಮಾಡಿದ ಕಾರಣ ಸ್ಟೋಕ್ಸ್ 7 ಬಾಲ್‌ಗಳನ್ನು ಎಸೆಯಬೇಕಾಯಿತು.
ಭಾರತದ ಇನ್ನಿಂಗ್ಸ್ ಹೈಲೈಟ್ಸ್
ಭಾರತ ಪರ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 158 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಿತ 101 ರನ್ಗಳಿಸಿದರೆ, ನಾಯಕ ಶುಭ್ಮನ್ ಗಿಲ್ 227 ಎಸೆತಗಳಲ್ಲಿ 19 ಬೌಂಡರಿ, 147 ಹಾಗೂ ರಿಷಭ್ ಪಂತ್ 178 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ಸಹಿತ 134 ರನ್ಗಳಿಸಿ ಮಿಂಚಿದರು.
June 21, 2025 8:31 PM IST
IND vs ENG: ಸ್ಟೋಕ್ಸ್ ಮಾಡಿದ ಆ ತಪ್ಪಿನಿಂದ ಇಂಗ್ಲೆಂಡ್ಗೆ ಭಾರೀ ಹಿನ್ನಡೆ! ಇಂಗ್ಲೆಂಡ್ ನಾಯಕನನ್ನ ಟೀಕಿಸಿದ ಮಾಜಿ ಕ್ಯಾಪ್ಟನ್ಸ್