ಟಾಸ್ ಸೋತ ನಂತರ ಮಾತನಾಡಿದ ಭಾರತ ತಂಡದ ನಾಯಕ ಶುಭ್ಮನ್ ಗಿಲ್, “ನಾವು ಕೂಡ ಮೊದಲು ಬೌಲಿಂಗ್ ಮಾಡಲು ಇಷ್ಟಪಟ್ಟಿದ್ದೆವು, ಆದರೆ ಈಗ ಬ್ಯಾಟಿಂಗ್ ಮಾಡುವ ಅವಕಾಶವಿದೆ. ಪಿಚ್ ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು, ಆದರೆ ನಂತರ ಬ್ಯಾಟಿಂಗ್‌ಗೆ ಸಹಾಯಕವಾಗಬಹುದು. ನಾಲ್ಕನೇ ಟೆಸ್ಟ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ, ಈಗ ಸರಣಿಯನ್ನು ಸಮಬಲಗೊಳಿಸಲು ಗೆಲುವಿನ ಗುರಿಯಿದೆ” ಎಂದರು.
ಭಾರತ ತಂಡದಲ್ಲಿ 4 ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಗಿಲ್ ಬಹಿರಂಗಪಡಿಸಿದ್ದಾರೆ. ಬುಮ್ರಾ ವಿಶ್ರಾಂತಿ ಪಡೆದರೆ, ಗಾಯದ ಕಾರಣ ಪಂತ್ ಹೊರಬಿದ್ದಿದ್ದಾರೆ. ಶಾರ್ದೂಲ್ ಠಾಕೂರ್ ಹಾಗೂ ಅನ್ಶುಲ್ ಕಾಂಬೋಜ್ ಕೂಡ ಈ ಪಂದ್ಯದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ. ಇವರಿಬ್ಬರು 4ನೇ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.
ಪಂತ್ ಜಾಗಕ್ಕೆ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ತಂಡ ಸೇರಿಕೊಂಡರೆ, ಶಾರ್ದೂಲ್ ಠಾಕೂರ್ ಬದಲಿಗೆ ಕರುಣ್ ನಾಯರ್ ಸೇರಿಕೊಂಡಿದ್ದಾರೆ. ಕಾಂಬೋಜ್ ಹಾಗೂ ಬುಮ್ರಾ ಬದಲಿಗೆ ಆಕಾಶ್ ದೀಪ್ ಹಾಗೂ ಪ್ರಸಿಧ್ ಕೃಷ್ಣ ತಂಡ ಸೇರಿಕೊಂಡಿದ್ದಾರೆ.
ಇಂಗ್ಲೆಂಡ್ ನಾಯಕ ಒಲಿ ಪೋಪ್ ಮಾತಾನಾಡಿ: “ನಾವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದ್ದೇವೆ. ಪಿಚ್‌ನಲ್ಲಿ ಸ್ವಲ್ಪ ಒದ್ದೆಯಿದೆ, ಮತ್ತು ಮೋಡ ಕವಿದಿರುವುದರಿಂದ ಬೌಲರ್‌ಗಳಿಗೆ ಸಹಾಯವಾಗಬಹುದು. ಈ ಸರಣಿಯು ತುಂಬಾ ಸ್ಪರ್ಧಾತ್ಮಕವಾಗಿದೆ, ಮತ್ತು ಈ ಪಂದ್ಯವು ಒಂದು ರೋಮಾಂಚಕ ಕದನವಾಗಿರಲಿದೆ.” ಎಂದರು.
ಇಂಗ್ಲೆಂಡ್ ತಂಡದಲ್ಲೂ ಸಹಾ 4 ಬದಲಾವಣೆ ಮಾಡಿಕೊಂಡಿದೆ. ಆಲ್ರೌಂಡರ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಬದಲಿಗೆ ಜಾಕೋಬ್ ಬೆಥೆಲ್, ಹಾಗೂ ಬೌಲರ್ಗಳಾದ ಜೋಫ್ರಾ ಆರ್ಚರ್, ಬೆನ್ ಕಾರ್ಸ್ ಹಾಗೂ ಲಿಯಾಮ್ ಡಾಸೆನ್ ಬದಲಿಗೆ ಜೇಮಿ ಓವರ್ಟನ್, ಜೋಶ್ ಟಂಗ್ ಹಾಗೂ ಗಸ್ ಆಟ್ಕಿನ್ಸನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ 1936 ರಿಂದ 15 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಕ್ರೀಡಾಂಗಣದಲ್ಲಿ ಭಾರತ ಕೇವಲ 2 ಗೆಲುವು ಸಾಧಿಸಿದರೆ, 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದ 7 ಪಂದ್ಯಗಳು ಡ್ರಾ ನಲ್ಲಿ ಅಂತ್ಯವಾಗಿದೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೂಡ ಇದೇ ಮೈದಾನದಲ್ಲಿ ನಡೆದಿತ್ತು. ಆ ಪಂದ್ಯದಲ್ಲೂ ಭಾರತ ಸೋಲು ಕಂಡಿತ್ತು.
ಮೊದಲ ಗೆಲುವು (1971): 1971 ರಲ್ಲಿ ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡವು ಓವಲ್‌ನಲ್ಲಿ ತನ್ನ ಮೊದಲ ಟೆಸ್ಟ್ ಗೆಲುವನ್ನು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ನ 355 ರನ್‌ಗಳಿಸಿದರೆ, ಇದಕ್ಕೆ ಉತ್ತರವಾಗಿ ಭಾರತ 284 ರನ್ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ್ನು ಬಿಎಸ್ ಚಂದ್ರಶೇಖರ್ 6/38 ರನ್‌ಗೆ ಕಟ್ಟಿಹಾಕಿದರು. ಭಾರತವು 173 ರನ್‌ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ತಲುಪಿ, ಇಂಗ್ಲೆಂಡ್‌ನಲ್ಲಿ ತನ್ನ ಮೊದಲ ಟೆಸ್ಟ್ ಸರಣಿಯನ್ನು (1-0) ಗೆದ್ದಿತು. ಈ ಗೆಲುವಿನಲ್ಲಿ ದಿಲೀಪ್ ಸರ್ದೇಸಾಯಿ (54) ಮತ್ತು ಗುಂಡಪ್ಪ ವಿಶ್ವನಾಥ್ (33) ಗಳ ಮಹತ್ವದ ಕೊಡುಗೆಯಿತ್ತು.
ಎರಡನೇ ಗೆಲುವು (2021): ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತವು 2021 ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 157 ರನ್‌ಗಳಿಂದ ಗೆದ್ದಿತು. ರೋಹಿತ್ ಶರ್ಮಾ (127 ರನ್) ಮೊದಲ ಸಾಗರೋತ್ತರ ಶತಕವನ್ನು ಗಳಿಸಿದ್ದರು ಮತ್ತು ಶಾರ್ದೂಲ್ ಠಾಕೂರ್ರ ಎರಡು ಅರ್ಧಶತಕಗಳು ಹಾಗೂ 4 ವಿಕೆಟ್‌ಗಳು ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದವು.
ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್(ವಿಕೀ), ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ (ಪ್ಲೇಯಿಂಗ್ XI): ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್ (ವಿಕೀ), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್, ಜೋಶ್ ಟಂಗ್
July 31, 2025 3:24 PM IST