Last Updated:
189ರನ್ಗಳ ಗುರಿ ಬೆನ್ನಟ್ಟಿದ ಒಮಾನ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ಗಳಿಸಿ 21 ರನ್ಗಳ ರೋಚಕ ಸೋಲು ಕಂಡಿತು. ಕಳೆದ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಸೋಲು ಕಂಡಿದ್ದ ಒಮಾನ್ ಭಾರತದ ವಿರುದ್ದ ಭರ್ಜರಿ ಫೈಟ್ ನೀಡಿತು.
ಏಷ್ಯಾಕಪ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್ ಜಯದೊಂಡಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 4ಗೆ ಎಂಟ್ರಿಕೊಟ್ಟಿದೆ. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 188 ರನ್ಗಳಿಸಿತ್ತು. 189ರನ್ಗಳ ಗುರಿ ಬೆನ್ನಟ್ಟಿದ ಒಮಾನ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ಗಳಿಸಿ 21 ರನ್ಗಳ ರೋಚಕ ಸೋಲು ಕಂಡಿತು. ಕಳೆದ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಸೋಲು ಕಂಡಿದ್ದ ಒಮಾನ್ ಭಾರತದ ವಿರುದ್ದ ಭರ್ಜರಿ ಫೈಟ್ ನೀಡಿತು. ಭಾರತ ಈ ಪಂದ್ಯ ಗೆದ್ದರೂ ಇಂದಿನ ಬೌಲಿಂಗ್ ತೀರಾ ಕಳಪೆಯಾಗಿತ್ತು. ಏಷ್ಯಾಕಪ್ನಲ್ಲಿ ಒಮಾನ್ ತಂಡವನ್ನ ಆಲೌಟ್ ಮಾಡದ ಏಕೈಕ ತಂಡವಾಯಿತು.
189 ರನ್ಗಳ ಗುರಿ ಬೆನ್ನಟ್ಟಿದ ಒಮಾನ್ ತಂಡ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 56 ರನ್ಗಳ ಜೊತೆಯಾಟ ನೀಡಿತು. ನಾಯಕ ಜಿತೇಂದರ್ ಸಿಂಗ್ 33 ಎಸೆತಗಳಲ್ಲಿ 5 ಬೌಂಡರಿ ಸಹಿತ 32 ರನ್ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಜಿತೇಂದರ್ ವಿಕೆಟ್ ಉಳಿಸಿಕೊಳ್ಳುವ ಯತ್ನದಲ್ಲಿ ಹೆಚ್ಚು ಎಸೆತಗಳನ್ನ ವ್ಯರ್ಥ ಮಾಡಿದರು. ಆದರೆ 2ನೇ ವಿಕೆಟ್ಗೆ ಒಂದಾದ ಅಮೀರ್ ಕಲೀಮ್ ಹಾಗೂ ಹಮ್ಮದ್ ಮಿರ್ಜಾ ಆ ತಪ್ಪು ಮಾಡಲಿಲ್ಲ. ಇವರಿಬ್ಬರು 2ನೇ ವಿಕೆಟ್ ಜೊತೆಯಾಟದಲ್ಲಿ 55 ಎಸೆತಗಳಲ್ಲಿ 3 ರನ್ಗಳ ಬೃಹತ್ ಜೊತೆಯಾಟ ನೀಡಿ ಭಾರತೀಯ ಬೌಲರ್ಗಳನ್ನ ಕಾಡಿದರು.
ಒಂದು ಹಂತದಲ್ಲಿ ಭಾರತ ತಂಡಕ್ಕೆ ಆಘಾತಕಾರಿ ಸೋಲುಣಿಸಬಹುದೇನೋ ಎನ್ನುವ ರೀತಿಯಲ್ಲಿ ಈ ಜೋಡಿ ಬ್ಯಾಟಿಂಗ್ ಮಾಡಿತು. ಹರ್ಷಿತ್ ರಾಣಾ ಈ ಅಪಾಯಕಾರಿ ಜೋಡಿಯನ್ನ ಬೇರ್ಪಡಿಸಿದರು. 46 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 64 ರನ್ಗಳಿಸಿದ್ದ ಕಲೀಮ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಹಾರ್ದಿಕ್ ಪಾಂಡ್ಯ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಈ ಜೋಡಿ ಬೇರ್ಪಡುತ್ತಿದ್ದಂತೆ ಒಮಾನ್ ಗೆಲುವಿನ ಹೋರಾಟವೂ ಅಂತ್ಯವಾಯಿತು. ನಂತರದ ಓವರ್ನಲ್ಲೇ ಮಿರ್ಜಾ ಕೂಡ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಸತತ 2 ಬೌಂಡರಿ ಸಿಡಿಸಿ ನಂತರ ಅದೇ ಓವರ್ನಲ್ಲಿ ಅರ್ಶದೀಪ್ಗೆ ಕ್ಯಾಚ್ ನೀಡಿ ಔಟ್ ಆದರು. ಮಿರ್ಜಾ 33 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ಗಳ ಸಹಿತ 51 ರನ್ಗಳಿಸಿದರು. ವಿಕೆಟ್ ಕೀಪರ್ ವಿನಾಯಕ್ ಶುಕ್ಲಾ 1 ರನ್ಗೆ ಔಟ್ ಆದರು. ಜಿತೆನ್ ರಾಮನಂದಿ 5 ಎಸೆತಗಳಲ್ಲಿ ಅಜೇಯ 12 ರನ್ಗಳಿಸಿದರು. ಒಮಾನ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ಗಳಿಸಿ 21 ರನ್ಗಳ ಸೋಲು ಕಂಡಿತು.
ಭಾರತದ ಪರ ಹಾರ್ದಿಕ್ ಪಾಂಡ್ಯ 26ಕ್ಕೆ1, ಹರ್ಷಿತ್ ರಾಣಾ 3 ಓವರ್ಗಳಲ್ಲಿ 25 ರನ್ ನೀಡಿ 1 ವಿಕೆಟ್, ಅರ್ಶದೀಪ್ ಸಿಂಗ್ 37 ರನ್ ನೀಡಿ 1 ವಿಕೆಟ್, ಕುಲ್ದೀಪ್ ಯಾದವ್ 23ಕ್ಕೆ1 ವಿಕೆಟ್ ಪಡೆದರು. ಬುಮ್ರಾ ಬದಲು ಕಣಕ್ಕಿಳಿದಿದ್ದ ಅರ್ಶದೀಪ್ ಸಿಂಗ್ ದುಬಾರಿಯಾದದ್ದು ಸೂಪರ್ 4ಗೂ ಮುಂಚೆ ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಚಿಂತಿಸುವಂತೆ ಮಾಡಿದೆ. ದುಬೆ ಕೂಡ 3 ಓವರ್ಗಳಲ್ಲಿ 31 ರನ್ ಬಿಟ್ಟುಕೊಟ್ಟರು.
ಇದಕ್ಕೂ ಮುನ್ನ ಟಾಸ್ ಗೆದ್ದು ಏಷ್ಯಾಕಪ್ನಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಈ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಒಮಾನ್ ಬೌಲರ್ಗಳು ಭಾರತೀಯ ಬ್ಯಾಟರ್ಗಳ ಅಹಂ ಅಡಗಿಸಿದರು. ಸಂಜು ಸ್ಯಾಮ್ಸನ್ 56 ರನ್ಗಳಿಸಿದರೆ, ಅಭಿಷೇಕ್ ಶರ್ಮಾ 38 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಕ್ಷರ್ ಪಟೇಲ್ 26, ತಿಲಕ್ ವರ್ಮಾ 29 ರನ್ಗಳಿಸಿದರು. ಹಾರ್ದಿಕ್ ಪಾಂಡ್ಯ 1, ಶುಭ್ಮನ್ ಗಿಲ್ 5, ಶಿವಂ ದುಬೆ 5 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ಗೆ ಇಳಿಯದೇ ಅಚ್ಚರಿ ಮೂಡಿಸಿದರು. ಒಂದು ವೇಳೆ ಅವರು ದುಬೆ ಔಟ್ ಆದ ಬಳಿಕ ಬ್ಯಾಟಿಂಗ್ಗೆ ಆಗಮಿಸಿದ್ದರೆ ತಂಡ 200 ರ ಗಡಿ ದಾಟುವ ಅವಕಾಶ ಸಿಗುತ್ತಿತ್ತು.
September 20, 2025 12:07 AM IST