Last Updated:
ಏಪ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಫೈನಲ್ ಪಂದ್ಯದ ವಿಜೇತ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು ಗೊತ್ತೇ?
ಏಷ್ಯಾಕಪ್ ಟೂರ್ನಿಯ 41 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಉಭಯ ತಂಡಗಳ ಆಟಗಾರರು ಕೂಡ ಫೈನಲ್ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ಏಷ್ಯಾಕಪ್ 2025 ರಲ್ಲಿ ಈಗಾಗಲೇ ಎರಡು ಬಾರಿ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಭಾರತ ಸೋಲಿಸಿದೆ. ಲೀಗ್ ಹಂತದಲ್ಲಿ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತವು ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ 18 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ನಂತರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮತ್ತೊಮ್ಮೆ ಆರು ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ಟೀಮ್ ಇಂಡಿಯಾ ಪರ ಆರಂಭಿಕ ಯಂಗ್ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 39 ಎಸೆತಗಳಲ್ಲಿ 74 ರನ್ ಗಳಿಸಿ ಅಬ್ಬರಿಸಿದ್ದರು.
ಇದೀಗ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಲು ಟೀಮ್ ಇಂಡಿಯಾ ದೊಡ್ಡ ರಣತಂತ್ರ ರೂಪಿಸಿದೆ. ಇನ್ನೊಂದೆಡೆ ಹ್ಯಾಟ್ರಿಕ್ ಸೋಲಿನಿಂದ ತಪ್ಪಸಿಕೊಳ್ಳಲು ಪಾಕಿಸ್ತಾನ ಚಿಂತಿಸುತ್ತಿದೆ. ಇದರ ನಡುವೆ ಏಷ್ಯಾಕಪ್ ವಿಜೇತ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು? ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳು ಕಾಡುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಏಷ್ಯಾಕಪ್ 2025 ಟೂರ್ನಿಯ ವಿಜೇತ ತಂಡಕ್ಕೆ ಸಿಗುವ ನಗದು ಬಹುಮಾನದ ಮೊತ್ತದಲ್ಲಿ ಹೆಚ್ಚಳ ಕಂಡುಬಂದಿದೆ. ವಿಜೇತ ತಂಡವು 300,000 ಅಮೆರಿಕನ್ ಡಾಲರ್ (ಸುಮಾರು ₹2.6 ಕೋಟಿ) ಪಡೆಯಲಿದೆ ಎಂದು ವರದಿಗಳಾಗಿವೆ. ರನ್ನರ್ ಅಪ್ ತಂಡವು 150,000 ಅಮೆರಿಕನ್ ಡಾಲರ್ ಪಡೆಯುವ ನಿರೀಕ್ಷೆಯಿದೆ. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧಿಕೃತ ಘೋಷಣೆಯನ್ನು ಮಾಡಿಲ್ಲ. ವರಿದಗಳ ಪ್ರಕಾರ, ಏಷ್ಯಾಕಪ್ 2025 ಟೂರ್ನಿಯ ವಿಜೇತ ತಂಡಕ್ಕೆ ಸಿಗುವ ನಗದು ಬಹುಮಾನದ ಮೊತ್ತದಲ್ಲಿ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ.
ಏಷ್ಯಾಕಪ್ ಕೊನೆಯ ಆವೃತ್ತಿ 2023 ರಲ್ಲಿ ನಡೆದಿತ್ತು. ಈ ಆವೃತ್ತಿಯನ್ನ ಏಕದಿನ ಮಾದರಿಯಲ್ಲಿ ಆಡಲಾಗಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ ಸೋಲಿಸಿ ಚಾಂಪಿಯನ್ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 15.2 ಓವರ್‌ಗಳಲ್ಲಿ ಕೇವಲ 50 ರನ್‌ಗಳಿಗೆ ಸರ್ವಪತನ ಆಗಿತ್ತು. ಸುಲಭ ಗುರಿ ಬೆನ್ನಟ್ಟಿದ ಭಾರತ 6.1 ಓವರ್‌ಗಳಲ್ಲಿ 10 ವಿಕೆಟ್‌ಗಳು ಕೈಯಲ್ಲಿರುವಾಗಲೇ ಪ್ರಶಸ್ತಿ ವಶಪಡಿಸಿಕೊಂಡಿತ್ತು. ಈ ಸಂದರ್ಭದಲ್ಲಿ ವಿಜೇತ ಭಾರತ ತಂಡಕ್ಕೆ 1.25 ಕೋಟಿ ರೂಗಳನ್ನು ನಗದು ಬಹುಮಾನವಾಗಿ ನೀಡಲಾಗಿತ್ತು. ಈ ಬಾರಿ 50% ಕ್ಕೂ ಹೆಚ್ಚು ನಗದು ಬಹುಮಾನ ಹೆಚ್ಚಳವಾಗಿರುವುದು ಪ್ರಮುಖವಾಗಿದೆ.
ವಿಜೇತ ತಂಡದ ನಗದು ಬಹುಮಾನಗಳ ಜೊತೆಗೆ, ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಸೇರಿದಂತೆ ಆಟಗಾರರಿಗೆ ವೈಯಕ್ತಿಕ ಗೌರವಗಳು ಸಹ ಇರಲಿವೆ. 2023 ರಲ್ಲಿ, ಕುಲದೀಪ್ ಯಾದವ್ ಅತ್ಯುತ್ತಮ ಬೌಲಿಂಗ್‌ಗಾಗಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಅವರಿಗೆ ಸುಮಾರು 12 ಲಕ್ಷ ರೂ. ನಗದು ಬಹುಮಾನ ಸಿಕ್ಕಿತ್ತು. ಅದರಂತೆ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧದ ತಮ್ಮ ವೃತ್ತಿ ಜೀವನದ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದರು. ಸಿರಾಜ್ ಕೇವಲ 21 ರನ್ ಗಳಿಗೆ 6 ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಜೊತೆಗೆ 4 ಲಕ್ಷ ರೂ. ನಗದು ಬಹುಮಾನವನ್ನು ಪಡೆದಿದ್ದರು. ಈ ವರ್ಷ, ಅತ್ಯುತ್ತಮ ಪ್ರದರ್ಶನ ನೀಡುವವರು ಸುಮಾರು 12.5 ಲಕ್ಷ ರೂ. ಗಳಿಸುವ ನಿರೀಕ್ಷೆಯಿದೆ.
September 28, 2025 5:24 PM IST