Last Updated:
IND vs PAK: ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನ ಆಟಗಾರರಿಗೆ ಶೇಕ್ಹ್ಯಾಂಡ್ ನೀಡಿಲ್ಲ. ಇದಕ್ಕೆ ಪಾಕಿಸ್ತಾನ ಆಟಗಾರರಿಗೆ ಅವಮಾನವಾಗಿದೆ ಅಂತ ಪಾಕ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಸುದ್ದಿಯಾಗುತ್ತಿದೆ.
ಏಷ್ಯಾ ಕಪ್ 2025 (Asia Cup) ರ ಬಹುನಿರೀಕ್ಷಿತ ಗ್ರೂಪ್ ಎ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ (IND vs PAK) ವಿರುದ್ಧ 7 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಆದರೆ, ಪಂದ್ಯ ಮುಗಿದ ನಂತರ ನಡೆದ ಘಟನೆಯೊಂದು ಈಗ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಗೆಲುವಿನ ಸಂಭ್ರಮಕ್ಕಿಂತ ಹೆಚ್ಚಾಗಿ, ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನ ಆಟಗಾರರಿಗೆ ಶೇಕ್ಹ್ಯಾಂಡ್ ನೀಡಿಲ್ಲ. ಇದಕ್ಕೆ ಪಾಕಿಸ್ತಾನ ಆಟಗಾರರಿಗೆ ಅವಮಾನವಾಗಿದೆ ಅಂತ ಪಾಕ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಸುದ್ದಿಯಾಗುತ್ತಿದೆ.
ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗೆಲುವಿನ ಸಿಕ್ಸರ್ ಬಾರಿಸುತ್ತಿದ್ದಂತೆ, ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕದೇ ಸೌನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ಹೋದರು. ಇದು ಕೇವಲ ಆಟದ ಮೈದಾನಕ್ಕೆ ಸೀಮಿತವಾಗದೆ, ಈಗ ಅಧಿಕೃತ ದೂರಿನ ಹಂತಕ್ಕೂ ತಲುಪಿದೆ.
ಪಾಕ್ ತಂಡದ ಮ್ಯಾನೇಜರ್ ನವೀದ್ ಅಕ್ರಮ್ ಚೀಮಾ, ತಕ್ಷಣವೇ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ಗೆ ಲಿಖಿತ ದೂರು ಸಲ್ಲಿಸಿದ್ದಾರೆ. “ಭಾರತೀಯ ಕ್ರಿಕೆಟ್ ತಂಡದ ಈ ನಡವಳಿಕೆಯು ಕ್ರೀಡಾ ಸ್ಫೂರ್ತಿಗೆ ಸಂಪೂರ್ಣ ವಿರುದ್ಧವಾಗಿದೆ” ಎಂದು ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈ ಸುದ್ದಿಯನ್ನು ಹಿಂದೂಸ್ತಾನ್ ಟೈಮ್ಸ್ ಕೂಡ ದೃಢಪಡಿಸಿದೆ.
ಈ ಪಂದ್ಯಕ್ಕೂ ಮುನ್ನವೇ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವರ್ಷದ ಆರಂಭದಲ್ಲಿ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ್’ ನಡೆಸಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಈ ಘಟನೆಗಳ ಹಿನ್ನೆಲೆಯಲ್ಲಿ, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು ಎಂಬ ಕೂಗು ಭಾರತದಲ್ಲಿ ಜೋರಾಗಿತ್ತು. ಇದೇ ಭಾವನೆ ಮೈದಾನದಲ್ಲೂ ಪ್ರತಿಫಲಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಂದ್ಯದ ನಂತರ ನಡೆಯುವ ಸಂದರ್ಶನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಗೈರಾಗುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದರು. ಸಂಜಯ್ ಮಂಜ್ರೇಕರ್ ನಡೆಸಿಕೊಡಬೇಕಿದ್ದ ಈ ಕಾರ್ಯಕ್ರಮವನ್ನು ಅವರು ಬಹಿಷ್ಕರಿಸಿದರು. “ಭಾರತ ತಂಡದ ಅಗೌರವದ ವರ್ತನೆಯನ್ನು ವಿರೋಧಿಸಿ ಸಲ್ಮಾನ್ ಅಲಿ ಆಘಾ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿದರು” ಎಂದು ಪಿಸಿಬಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಟಾಸ್ ಹಾಕುವಾ್ಲ್ಲಿಲೇ ಇದರ ಮುನ್ಸೂಚನೆ ಸಿಕ್ಕಿತ್ತು. ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು, ಪಾಕ್ ನಾಯಕ ಸಲ್ಮಾನ್ ಆಘಾಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಕೈ ಕುಲುಕದಂತೆ ಸೂಚಿಸಿದ್ದರು ಎನ್ನಲಾಗಿದೆ.
ಪಂದ್ಯದ ನಂತರ ಹ್ಯಾಂಡ್ಶೇಕ್ ಅಗತ್ಯ ಎಂದು ಕ್ರಿಕೆಟ್ನ ಯಾವುದೇ ನಿಯಮ ಪುಸ್ತಕದಲ್ಲಿ ಬರೆಯಲಾಗಿಲ್ಲ. ಹ್ಯಾಂಡ್ಶೇಕ್ ನಿಯಮವಲ್ಲ ಆದರೆ ಅದನ್ನು ಕ್ರಿಕೆಟ್ನ ಉತ್ಸಾಹದ ಭಾಗವೆಂದು ಪರಿಗಣಿಸಲಾಗುತ್ತದೆ. ಬಹುತೇಕ ಪ್ರತಿಯೊಂದು ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಭೇಟಿಯಾಗಲು ಇದೇ ಕಾರಣ.
ಕೈಕುಲುಕುವ ನಿಯಮವಿಲ್ಲದಿದ್ದಾಗ, ತಂಡದ ಮೇಲೆ ದಂಡ ವಿಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಆದರೆ ಎದುರಾಳಿ ತಂಡ ಅಥವಾ ಆಟಗಾರನೊಂದಿಗೆ ಕೈಕುಲುಕಲು ಉದ್ದೇಶಪೂರ್ವಕವಾಗಿ ನಿರಾಕರಿಸಿದರೆ, ಅದನ್ನು ಆಟದ ಉತ್ಸಾಹಕ್ಕೆ ವಿರುದ್ಧವೆಂದು ಪರಿಗಣಿಸಬಹುದು.
ಈ ಒಂದು ‘ಹ್ಯಾಂಡ್ಶೇಕ್’ ವಿವಾದ ಏಷ್ಯಾ ಕಪ್ನ ರೋಚಕತೆಯನ್ನೇ ಬದಿಗೊತ್ತಿ, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
September 15, 2025 11:36 AM IST