Last Updated:
ಏಷ್ಯಾಕಪ್ 2025 ರ ಪ್ರಶಸ್ತಿ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ವಿರುದ್ಧ ಕಿಡಿಕಾರಿದ್ದಾರೆ.
ಭಾನುವಾರ ನಡೆದ ಹೈವೋಲ್ಟೇಜ್ ಏಷ್ಯಾಕಪ್ 2025 ರ ಫೈನಲ್ (Asia Cup Final 2025) ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ 9ನೇ ಏಷ್ಯಾಕಪ್ (Asia Cup) ಅನ್ನು ಮುಡಿಗೇರಿಸಿಕೊಂಡಿತು. ಉಭಯ ತಂಡಗಳ ಆಟಗಾರರ ನಡುವೆ ನಡೆದ ಕೆಲವು ಘರ್ಷಣೆಗಳು ಕ್ರಿಕೆಟ್ (Cricket)ಅಭಿಮಾನಿಗಳು ಹುಚ್ಚೆದು ಕುಣಿಯುವಂತೆ ಮಾಡಿದವು. ಇದೇ ಮೊದಲ ಬಾರಿಗೆ ಒಂದೇ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ (India vs Pakistan) ಮೂರು ಬಾರಿ ಸೋಲಿಸಿ ಇತಿಹಾಸ ಸೃಷ್ಟಿಸಿತು.
ಫೈನಲ್ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ವೇದಿಕೆಯ ಮೇಲೆ ಟ್ರೋಫಿ ಹಿಡಿದು ಭಾರತ ತಂಡಕ್ಕಾಗಿ ಕಾಯುತ್ತಿದ್ದರು. ಆದರೆ ಇತ್ತ, ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಆರಾಮವಾಗಿ ಕುಳಿತು, ತಮ್ಮ ಪಾಡಿಗೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದರು. ಹೀಗಾಗಿ ಏಷ್ಯಾಕಪ್ ಟ್ರೋಫಿ ಜೊತೆಗೆ ಮೊಹ್ಸಿನ್ ನಖ್ವಿ ಮೈದಾನದ ಹೊರ ನಡೆದರು. ಇದು ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿತ್ತು.
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮಾತ್ರ ಏಷ್ಯಾಕಪ್ ಗೆಲುವಿನ ಬಳಿಕ ತಮ್ಮ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದು, ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಆದರಲ್ಲೂ ಟ್ರೋಫಿ ತೆಗೆದುಕೊಂಡು ಹೊರ ನಡೆದ ಮೊಹ್ಸಿನ್ ನಖ್ವಿ ಕೆನ್ನೆ ಪರೋಕ್ಷವಾಗಿ ಸೂರ್ಯಕುಮಾರ್ ಯಾದವ್ ಬಾರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ವಿರುದ್ಧದ ಸತತ 3 ಗೆಲುವು ಅತ್ಯುತ್ತಮವಾಗಿತ್ತು. ನಮ್ಮ ಹುಡುಗರಿಂದ ಅದ್ಭುತ ಪ್ರದರ್ಶನ ಬಂದಿದೆ. ಅವರಿಂದ ನಾನು ನಿರೀಕ್ಷಿಸಿದ್ದನ್ನು ಅವರು ನೀಡಿದರು. ನಾವು ಕುಳಿತಿರುವ ತಂಡದ ಕೋಣೆಯಲ್ಲಿ ಅವರೊಂದಿಗೆ ನಡೆಸಿದ ಎಲ್ಲಾ ಮಾತುಕತೆಗಳು ಕೆಲಸ ಮಾಡಿವೆ. ಹೀಗಾಗಿ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಎಲ್ಲಾ ಸ್ಪರ್ಧೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿ ಬಗ್ಗೆ ಮತ್ತೆ ಮತ್ತೆ ಮಾತನಾಡುವುದರಿಂದ ಅದರ ನಿಜವಾದ ಸಾರ ಕುಸಿಯುತ್ತದೆ. ಆದರೆ ಟೂರ್ನಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಒತ್ತಡದ ಸಂದರ್ಭಗಳನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ನೊಂದಿಗೆ ಉತ್ತಮವಾಗಿ ನಿಭಾಯಿಸಿದ್ದೇವೆ. ಅದಕ್ಕಾಗಿಯೇ ನಾವು ಏಷ್ಯಾಕಪ್ ಅನ್ನು ಗೆದ್ದಿದ್ದೇವೆ ಎಂದಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯಗಳನ್ನು ಗೆಲ್ಲುವುದು ಮತ್ತು ಉತ್ತಮ ಕ್ರಿಕೆಟ್ ಆಡುವುದು ನಮ್ಮ ಮುಖ್ಯ ಗಮನವಾಗಿತ್ತು. ಟ್ರೋಫಿ ಬಂದಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯ ವಿಷಯವೆಂದರೆ ನನ್ನ ದೇಶ ಸಂತೋಷವಾಗಿದೆ. ಈ ಗೆಲುವಿನ ಸಂಭ್ರಮಾಚರಣೆಯನ್ನು ನಾವು ಮಾಡುತ್ತಿದ್ದೇವೆ. ನಾವು ಏಷ್ಯಾ ಕಪ್ ಚಾಂಪಿಯನ್‌ಗಳು ಎಂಬ ಬೋರ್ಡ್ ನಮ್ಮ ಹೆಸರಿನಲ್ಲಿದೆ. ನಿಮಗೆ ಇನ್ನೇನು ಬೇಕು? ಎಂದು ಹೇಳುವ ಮೂಲಕ ಸೂರ್ಯಕುಮಾರ್ ಪಾಕಿಸ್ತಾನಕ್ಕೆ ಟಕ್ಕರ್ ಕೊಟ್ಟಿದ್ದಾರೆ.
ಏಷ್ಯಾಕಪ್ 2025 ಟೂರ್ನಿಯಲ್ಲಿ ಸತತ ಮೂರು ವಾರಾಂತ್ಯಗಳಲ್ಲಿ ಪಾಕಿಸ್ತಾನವನ್ನು ಭಾರತವು ಸೋಲಿಸಿತು. ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಐದು ವಿಕೆಟ್‌ಗಳ ಗೆಲುವಿನೊಂದಿಗೆ ಭಾರತ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲು ಪಾಕಿಸ್ತಾನವನ್ನು ಭಾರತ ಗುಂಪು ಹಂತದಲ್ಲಿ (ಏಳು ವಿಕೆಟ್‌ಗಳಿಂದ), ನಂತರ ಸೂಪರ್ 4 ರ ಮುಖಾಮುಖಿಯಲ್ಲಿ (ಆರು ವಿಕೆಟ್‌ಗಳಿಂದ) ಮತ್ತು ಕೊನೆಯದಾಗಿ ಫೈನಲ್‌ನಲ್ಲಿ ಮಣ್ಣು ಮುಕ್ಕಿಸಿತು.
September 29, 2025 6:09 PM IST