Last Updated:
ಏಷ್ಯಾ ಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14 ರಂದು ಪರಸ್ಪರ ಮುಖಾಮುಖಿಯಾಗಲಿವೆ. ಈ ನಡುವೆ ಬಿಸಿಸಿಐ ನಡೆಯ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕಿಡಿಕಾರಿದ್ದಾರೆ.
ಏಷ್ಯಾ ಕಪ್-2025ರ (Asia Cup) ಬಗ್ಗೆ ಇದ್ದಂತಹ ಎಲ್ಲ ಗೊಂದಲಗಳು ನಿವಾರಣೆಯಾಗಿದೆ. ಈ ಬಾರಿ ಟಿ-20 ಮಾದರಿಯಲ್ಲಿ ನಡೆಯಲಿರುವ ಟೂರ್ನಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಶನಿವಾರ ಬಿಡುಗಡೆ ಮಾಡಿದೆ. ಈ ಮೆಗಾ ಟೂರ್ನಿ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ಪಂದ್ಯ ಸೆಪ್ಟೆಂಬರ್ 14 ರಂದು ಪರಸ್ಪರ ಮುಖಾಮುಖಿಯಾಗಲಿವೆ. ಈ ನಡುವೆ ಬಿಸಿಸಿಐ ನಡೆಯ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕಿಡಿಕಾರಿದ್ದಾರೆ.
ಮುಂಬರುವ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡುವುದು ಭಾರತಕ್ಕೆ ಹೇಗೆ ಸರಿ ಅನಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ. ಅದಕ್ಕೆ ಕಾರಣ ಕಳೆದ ವಾರ ನಡೆದ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL) ಪಂದ್ಯದಿಂದ ಭಾರತ ಹಿಂದೆ ಸರಿದಿರುವುದು. ಭಾರತ ದೇಶಭಕ್ತಿಯನ್ನು ತಮಗೆ ಬೇಕಾದಂತೆ ಬಳಸುತ್ತಿದೆ ಎಂದು ಕನೇರಿಯಾ ಆರೋಪಿಸಿದ್ದಾರೆ.
ಏಷ್ಯಾಕಪ್ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ಗ್ರೂಪ್ ಹಂತದ ಪಂದ್ಯ ಸೆಪ್ಟೆಂಬರ್ 14 ರಂದು ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ.
Indian players boycotted WCL and called it national duty. But now Asia Cup vs Pakistan is just fine? If cricket with Pakistan is okay, then WCL should’ve been too. Stop using patriotism when it suits you. Let sport be sport — not propaganda.
— Danish Kaneria (@DanishKaneria61) July 26, 2025
“ಭಾರತೀಯ ಆಟಗಾರರು ಪಾಕಿಸ್ತಾನ ವಿರುದ್ಧದ ಡಬ್ಲ್ಯೂಸಿಎಲ್ ಅನ್ನು ಬಹಿಷ್ಕರಿಸಿ ಅದನ್ನು ರಾಷ್ಟ್ರೀಯ ಕರ್ತವ್ಯ ಎಂದು ಕರೆದರು. ಆದರೆ ಈಗ ಏಷ್ಯಾ ಕಪ್ vs ಪಾಕಿಸ್ತಾನ ಸರಿಯೇ? ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದು ಸರಿಯಾಗಿದ್ದರೆ, ಡಬ್ಲ್ಯೂಸಿಎಲ್ ಕೂಡ ಸರಿಯಾಗಿರಬೇಕಿತ್ತು. ನಿಮಗೆ ಸೂಕ್ತವಾದಾಗ ದೇಶಭಕ್ತಿಯನ್ನು ಬಳಸುವುದನ್ನು ನಿಲ್ಲಿಸಿ. ಕ್ರೀಡೆ ಪ್ರಚಾರವಲ್ಲ, ಕ್ರೀಡೆಯಾಗಿರಲಿ ” ಎಂದು ಕನೇರಿಯಾ ಶನಿವಾರ ಎಕ್ಸ್ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
ಬಿಸಿಸಿಐ ಏಷ್ಯಾಕಪ್ನ ಆತಿಥೇಯ ಸಂಸ್ಥೆಯಾಗಿದೆ, ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಾಚೆಗಿನ ಉದ್ವಿಗ್ನತೆ ಇರುವುದರಿಂದ 2027 ರವರೆಗೆ ತಟಸ್ಥ ಸ್ಥಳಗಳಲ್ಲಿ ಮಾತ್ರ ಸ್ಪರ್ಧಿಸಲು ಒಪ್ಪಿಕೊಂಡಿರುವುದರಿಂದ ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಸಲಾಗುತ್ತಿದೆ. ಪ್ರಸಾರಕರೊಂದಿಗಿನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಪ್ಪಂದದ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿವೆ ಮತ್ತು ಸೂಪರ್ 4 ಹಂತದಲ್ಲಿ ಪರಸ್ಪರ ಮತ್ತೊಂದು ಸುತ್ತಿನಲ್ಲೂ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಫೈನಲ್ ತಲುಪಿದರೆ ಮೂರನೇ ಬಾರಿ ಒಂದೇ ಟೂರ್ನಿಯಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಈ ನಡುವೆ, ಜುಲೈ 20 ರಂದು ಭಾನುವಾರ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಹಣಾಹಣಿಯಲ್ಲಿ ಭಾರತ ಚಾಂಪಿಯನ್ಸ್ ಪಾಕಿಸ್ತಾನ ಚಾಂಪಿಯನ್ಸ್ ಅನ್ನು ಎದುರಿಸಲು ಸಜ್ಜಾಗಿತ್ತು. ಆದ್ರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಸಮಸ್ಯೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಆದ್ರೆ, ಈಗ ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿರುವ ಕುರಿತು ಡ್ಯಾನಿಷ್ ಕನೇರಿಯಾ ಕಿಡಿಕಾರಿದ್ದಾರೆ.
July 27, 2025 4:15 PM IST
IND vs PAK: ಭಾರತ ದೇಶಭಕ್ತಿಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ! ಬಿಸಿಸಿಐ ವಿರುದ್ಧ ಕಿಡಿಕಾರಿದ ಪಾಕಿಸ್ತಾನದ ಹಿಂದೂ ಕ್ರಿಕೆಟಿಗ