Last Updated:
ಐಸಿಸಿ ಮಹಿಳಾ ವಿಶ್ವಕಪ್ 2025 ರ ಭಾರತ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟರ್ ಮುನೀಬಾ ಅಲಿ ವಿವಾದಾತ್ಮಕ ರನೌಟ್ ಆದರು. ಈ ವೇಳೆ ಅಂಪೈರ್ ಜೊತೆ ಪಾಕ್ ನಾಯಕಿ ವಾಗ್ವಾದಕ್ಕಿಳಿದರು.
ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಐಸಿಸಿ ಮಹಿಳಾ ವಿಶ್ವಕಪ್ (Womens ODI World Cup) 2025 ರ ಪಂದ್ಯದಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಮೊದಲು ಹ್ಯಾಂಡ್‌ಶೇಕ್ (Handshake) ಬಗ್ಗೆ ಚರ್ಚೆ ನಡೆದಿತ್ತು. ನಂತರ ಟಾಸ್ ಮತ್ತು ಈಗ ಪಾಕಿಸ್ತಾನ ತಂಡದ ಬ್ಯಾಟರ್ ಔಟ್ ಆದ ಬಗ್ಗೆ ವಿವಾದ ಶುರುವಾಗಿದೆ.ಅಂಪೈರ್ ಮತ್ತು ಪಾಕಿಸ್ತಾನ ನಾಯಕಿ ಫಾತಿಮಾ ಸನಾ (Fatima Sana) ನಡುವಿನ ವಾಗ್ವಾದದಿಂದಾಗಿ ಪಂದ್ಯವನ್ನು ಹಲವಾರು ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಪಾಕಿಸ್ತಾನ ಬ್ಯಾಟರ್ ಅನ್ನು ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ (Deepti Sharma) ರನೌಟ್ ಮಾಡಿದರು. ಮುನೀಬಾ ಅಲಿ ದುರದೃಷ್ಟಕರ ರನೌಟ್ಗೆ ಬಲಿಯಾದರು.
ಪಾಕಿಸ್ತಾನದ ಚೇಸಿಂಗ್‌ನ ನಾಲ್ಕನೇ ಓವರ್‌ನ ಕೊನೆಯ ಎಸೆತವನ್ನು ಭಾರತದ ವೇಗಿ ಕ್ರಾಂತಿ ಗೌಡ್ ಎಸೆದರು. ಈ ವೇಳೆ ಮುನೀಬಾ ಅಲಿ ವಿವಾದಾತ್ಮಕ ರನೌಟಾದರು. ದೀಪ್ತಿ ಶರ್ಮಾ ಅವರ ರಾಕೆಟ್ ಥ್ರೋ ಸ್ಟಂಪ್‌ಗೆ ಚೆಂಡು ತಗುಲಿ, ಮುನೀಬಾ ಅಲಿ ರನ್ ಹೊಡೆಯದೆ ವಿಕೆಟ್ ಕಳೆದುಕೊಂಡರು.
ಪಾಕಿಸ್ತಾನದ ಚೇಸಿಂಗ್‌ನ ನಾಲ್ಕನೇ ಓವರ್‌ನಲ್ಲಿ ಮುನೀಬಾ ಅಲಿ ಬ್ಯಾಟಿಂಗ್ ಮಾಡುವಾಗ, ಟೀಮ್ ಇಂಡಿಯಾ ವೇಗಿ ಕ್ರಾಂತಿ ಗೌಡ್ ಬೌಲಿಂಗ್ ಮಾಡುತ್ತಿದ್ದರು. ಕ್ರಾಂತಿ ಅದ್ಭುತವಾಗಿ ಬೌಲಿಂಗ್ ಮಾಡಿ ಮುನೀಬಾ ಅಲಿಯನ್ನು ಕಾಡಿದರು. ಕಾಂತ್ರಿ ಓವರ್‌ನ ಕೊನೆಯ ಚೆಂಡು ಮುನೀಬಾ ಅಲಿ ಅವರ ಪ್ಯಾಡ್‌ಗೆ ಬಡಿಯಿತು. ಭಾರತ ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿತು.
ವಿಕೆಟ್ ಕೀಪರ್ ರಿಚಾ ಘೋಷ್ ರಿವ್ಯೂ ತೆಗೆದುಕೊಳ್ಳದಂತೆ ನಾಯಕಿ ಹರ್ಮನ್‌ಪ್ರೀತ್ ಕೌರ್ ತಿಳಿಸಿದರು. ಅದರಂತೆ ನಾಯಕಿ ಹರ್ಮನ್‌ಪ್ರೀತ್ ಕೌರ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಇತ್ತ ಟೀಮ್ ಇಂಡಿಯಾದ ಆಟಗಾರ್ತಿಯರಿಬ್ಬರೂ ರಿವ್ಯೂ ಬಗ್ಗೆ ಚರ್ಚಿಸುತ್ತಿದ್ದಂತೆ, ದೀಪ್ತಿ ಶರ್ಮಾ ಸ್ಟ್ರೈಕರ್‌ನ ತುದಿಗೆ ಚೆಂಡನ್ನು ಎಸೆದರು. ಈ ಸಂದರ್ಭದಲ್ಲಿ ಚೆಂಡು ಸ್ಟಂಪ್‌ಗೆ ತಗುಲಿದಾಗ ಮುನೀಬಾ ಅವರ ಬ್ಯಾಟ್ ಗಾಳಿಯಲ್ಲಿದ್ದ ಕಾರಣ ಅಂಪೈರ್ ಔಟ್ ನೀಡಿದರು.
ಆರಂಭದಲ್ಲಿ, ಮೂರನೇ ಅಂಪೈರ್ ನಾಟ್ ಔಟ್ ಎಂದು ಸ್ಕ್ರೀನ್ ಮೇಲೆ ತೋರಿಸಿದರು. ಏಕೆಂದರೆ ಮುನೀಬಾ ತನ್ನ ಬ್ಯಾಟ್ ಅನ್ನು ಲೈನ್ ಒಳಗೆ ಎಳೆದುಕೊಂಡು ಹೋದಂತೆ ತೋರುತ್ತಿತ್ತು.ಆದರೆ, ಅಂಪೈರ್ ಮತ್ತೊಮ್ಮೆ ಪರಿಶೀಲನೆ ನಡೆಸಲು ನಿರ್ಧರಿಸಿದರು. ಈ ವೇಳೆ ಚೆಂಡು ಸ್ಟಂಪ್‌ಗೆ ತಾಗಿದಾಗ ಬ್ಯಾಟ್ ನೆಲಕ್ಕೆ ಮುಟ್ಟಿರಲಿಲ್ಲ. ಹೀಗಾಗಿ ಮೂರನೇ ಅಂಪೈರ್ ಔಟ್ ಎಂದು ನಿರ್ಧಾರ ನೀಡಿದರು. ಮುನೀಬಾ 12 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು.
ಮುನೀಬಾ ರನ್ ಔಟ್ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಪಾಕಿಸ್ತಾನ ನಾಯಕಿ ಫಾತಿಮಾ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಪರಿಣಾಮ ಪಂದ್ಯವನ್ನು ಬಹಳ ಹೊತ್ತು ಸ್ಥಗಿತಗೊಳಿಸಲಾಯಿತು. ಹರ್ಮನ್‌ಪ್ರೀತ್ ಕೌರ್ ಕೂಡ ಅಂಪೈರ್ ಜೊತೆ ಮಾತನಾಡುತ್ತಿರುವುದು ಕಂಡುಬಂದಿತು. ಆದಾಗ್ಯೂ, ಮುನೀಬಾ ಅವರನ್ನು ಅಂತಿಮವಾಗಿ ಔಟ್ ಎಂದು ಮೈದಾನದಿಂದ ಹೊರ ಕಳುಹಿಸಲಾಯಿತು. ಇದರೊಂದಿಗೆ ಪಾಕಿಸ್ತಾನ ಕೇವಲ 6 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.
October 05, 2025 10:39 PM IST