Last Updated:
ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತನ್ನ ತಂಡವನ್ನು ಸೋಮವಾರ ಪ್ರಕಟಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಗೆಲ್ಲಲು ಕಾರಣವಾಗಿದ್ದ ನಾಯಕ ಟೆಂಬಾ ಬವುಮಾ ಮರಳಿದಿದ್ದಾರೆ.
ಭಾರತ ತಂಡ (Team India) ಪ್ರಸ್ತುತ ಆಸ್ಟ್ರೇಲಿಯಾ (Australia) ಪ್ರವಾಸದಲ್ಲಿದೆ. ಇದರ ನಡುವೆ ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ (Test) ಸರಣಿಗೆ ದಕ್ಷಿಣ ಆಫ್ರಿಕಾ (South Africa) ತನ್ನ ತಂಡವನ್ನು ಸೋಮವಾರ ಪ್ರಕಟಿಸಿದೆ. ನಾಯಕ ಟೆಂಬಾ ಬವುಮಾ (Temba Bavuma) ಮರಳಿದ್ದು, ಈ ಸರಣಿಯಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ (India vs South Africa) ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದಿಂದಾಗಿ ಬವುಮಾ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಐಡೆನ್ ಮಾರ್ಕ್ರಾಮ್ (Aiden Markram) ನಾಯಕತ್ವದಲ್ಲಿ ದಕ್ಷಿಣ ಅಫ್ರಿಕಾ ಸರಣಿಯನ್ನು 1-1 ರಲ್ಲಿ ಡ್ರಾ ಮಾಡಿಕೊಂಡಿತ್ತು. ಇತ್ತ ಆತಿಥೇಯ ವೆಸ್ಟ್ ಇಂಡೀಸ್ (West Indies) ವಿರುದ್ಧ ಭಾರತ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಹೀಗಾಗಿ ಉಭಯ ತಂಡಗಳ ಟೆಸ್ಟ್ ಸರಣಿ ಭಾರೀ ಕುತೂಹಲ ಮೂಡಿಸಿದೆ.
ಟೆಂಬಾ ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಹರಿಣಗಳ ಪಡೆ ಸೋಲಿಸಿತು. ಇದರೊಂದಿಗೆ ಚೊಚ್ಚಲ ಐಸಿಸಿ ಟ್ರೋಫಿಯನ್ನು ಹರಿಣಗಳ ಪಡೆ ಎತ್ತಿ ಹಿಡಿದಿತ್ತು.
ಬವುಮಾ ಎಡಗಾಲಿನ ಸ್ನಾಯುವಿನ ಸೆಳೆತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿದ್ದಾರೆ. ಇದರಿಂದಾಗಿ ಪಾಕಿಸ್ತಾನ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಡೇವಿಡ್ ಬೆಡಿಂಗ್ಹ್ಯಾಮ್ ಬದಲಿಗೆ ಬವುಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬವುಮಾ ಆಡಲು ಸಾಧ್ಯವಾಗಲಿಲ್ಲ. ಈ ಸರಣಿಯಲ್ಲಿ ಭಾಗವಹಿಸಿದ ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಪಂದ್ಯದ ಅಭ್ಯಾಸದ ಕೊರತೆಯನ್ನು ಸರಿದೂಗಿಸಲು, ನವೆಂಬರ್ 2 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಎ ನಡುವಿನ ನಾಲ್ಕು ದಿನಗಳ ಪಂದ್ಯದಲ್ಲಿ ಟೆಂಬಾ ಬವುಮಾ ಆಡಬಹುದು. ಈ ಪಂದ್ಯದಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಟೀಮ್ ಇಂಡಿಯಾ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಮರಳಲಿದ್ದಾರೆ.
ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್ ಇರುವುದರಿಂದ ದಕ್ಷಿಣ ಆಫ್ರಿಕಾ ತನ್ನ ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದೆ. ಮೂವರು ಪ್ರಮುಖ ಸ್ಪಿನ್ನರ್‌ಗಳಾದ ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಸೆನುರನ್ ಮುತ್ತುಸಾಮಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧ ಈ ಮೂವರು ಸ್ಪಿನ್ನರ್ಸ್ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಸ್ಪಿನ್ನರ್ಸ್ ತವರಿನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ಗೆ ಕಾಟ ನೀಡಬಹುದು. ಕಾಗಿಸೊ ರಬಾಡ, ಆಲ್‌ರೌಂಡರ್ ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್ ಮತ್ತು ವಿಯಾನ್ ಮುಲ್ಡರ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಟೆಂಬಾ ಬವುಮಾ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡವು ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಅವರು 10 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಒಂಬತ್ತು ಪಂದ್ಯಗಳನ್ನು ಗೆದ್ದಿದ್ದರೆ, ಕೇವಲ ಒಂದು ಪಂದ್ಯ ಮಾತ್ರ ಡ್ರಾದಲ್ಲಿ ಕೊನೆಗೊಂಡಿದೆ. ಆದ್ದರಿಂದ, ದಕ್ಷಿಣ ಆಫ್ರಿಕಾ ಗೆಲುವಿನ ಓಟಕ್ಕೆ ಭಾರತ ಬ್ರೇಕ್ ಆಗುವುದು ಕಷ್ಟಕರವಾಗಿರಬಹುದು. ಬವುಮಾ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಅವರಿಗೆ ಒಂದು ಪರೀಕ್ಷೆಯಾಗಲಿದೆ. ಏಕೆಂದರೆ ಟೀಮ್ ಇಂಡಿಯಾ ತವರಿನ ನೆಲದಲ್ಲಿ ಬಲಿಷ್ಠವಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯು ನವೆಂಬರ್ 14 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯ ನವೆಂಬರ್ 22 ರಿಂದ ಗುವಾಹಟಿಯಲ್ಲಿ ನಡೆಯಲಿದೆ. ಈ ತಿಂಗಳ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಪೂರ್ಣವಾಗಿ ತಿರುಗುವ ಪಿಚ್‌ಗಳನ್ನು ಆಯ್ಕೆ ಮಾಡದ ಕಾರಣ ಭಾರತ ಯಾವ ರೀತಿಯ ಪಿಚ್‌ಗಳನ್ನು ಸಿದ್ಧಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಏಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್, ಡೆವಾಲ್ಡ್ ಬ್ರೂವಿಸ್, ಜುಬೈರ್ ಹಮ್ಜಾ, ಟೋನಿ ಡಿ ಜೊರ್ಜಿ, ಕಾರ್ಬಿನ್ ಬಾಷ್, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಸಿಮ್ತು, ಕೇಶವ್ ಸಿಮ್ತುಸಂ, ಕೇಶವ್ ಸಿಮ್ಥುಸಮ್
October 27, 2025 5:07 PM IST