IND vs SL: ಶ್ರೀಲಂಕಾ ವಿರುದ್ಧ ಸೂಪರ್​ ಓವರ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ! ಸತತ 3ನೇ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್​ ಪ್ರವೇಶ | Asia Cup 2025: India Clinches Thrilling Win Over Sri Lanka in Super Over | ಕ್ರೀಡೆ

IND vs SL: ಶ್ರೀಲಂಕಾ ವಿರುದ್ಧ ಸೂಪರ್​ ಓವರ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ! ಸತತ 3ನೇ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್​ ಪ್ರವೇಶ | Asia Cup 2025: India Clinches Thrilling Win Over Sri Lanka in Super Over | ಕ್ರೀಡೆ

203 ರನ್​ಗಳ ಚೇಸಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಇಂದೂ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟರ್ ಕುಸಾಲ್ ಮೆಂಡಿಸ್ ಖಾತೆ ತೆರೆಯದೇ ಗೋಲ್ಡನ್ ಡಕ್ ಆದರು. ಹಾರ್ದಿಕ್ ಪಾಂಡ್ಯ ಬೌಲಿಂಗ್​​ನಲ್ಲಿ ಶುಭ್​ಮನ್ ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ನಿಸ್ಸಾಂಕ ಹಾಗೂ ಕುಶಾಲ್ ಪೆರೆರಾ ಭಾರತೀಯ ಬೌಲರ್​ಗಳನ್ನ ಬೆಂಡೆತ್ತಿದ್ದರು. ಇಬ್ಬರು 70 ಎಸೆತಗಳಲ್ಲಿ 127 ರನ್​ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ಯತ್ತಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್​ ಇಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಅಪಾಯಕಾರಿ ಜೋಡಿಯನ್ನ ಬ್ರೇಕ್ ಮಾಡಿ ಪಂದ್ಯದಲ್ಲಿ ಭಾರತ ಕಮ್​ಬ್ಯಾಕ್ ಮಾಡುವಂತೆ ಮಾಡಿದರು.

ಕುಸಾಲ್ ಪರೆರಾ 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 58 ರನ್​ಗಳಿಸಿ ಸ್ಟಂಪ್ ಔಟ್ ಆದರು. ಈ ಜೋಡಿ ಬ್ರೇಕ್ ಬಳಿಕ ಭಾರತ ಮೇಲುಗೈ ಸಾಧಿಸಿತು.  ಪೆರೆರಾ ನಂತರ ಬಂದಂತಹ ಚರಿತ್ ಅಸಲಂಕಾ 5 ರನ್​ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್​​ನಲ್ಲಿ  ಶುಭ್​ಮನ್ ಗಿಲ್​​ಗೆ ಕ್ಯಾಚ್ ನೀಡಿದರೆ, ಕಮಿಂದು ಮೆಂಡಿಸ್​  7 ಎಸೆತಗಳಲ್ಲಿ 3 ರನ್​ಗಳಿಸಿ ಅರ್ಷದೀಪ್ ಬೌಲಿಂಗ್​​ನಲ್ಲಿ ಅಕ್ಷರ್ ಪಟೇಲ್​ಗೆ ಕ್ಯಾಚ್ ನೀಡಿ ಔಟ್ ಆದರು.

ಮೊದಲ 4 ಎಸೆತಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿ ಕೇವಲ 5 ರನ್​ ಬಿಟ್ಟುಕೊಟ್ಟಿದ್ದ ರಾಣಾ ಕೊನೆಯ 2 ಎಸೆತಗಳಲ್ಲಿ  7 ರನ್​ಗಳನ್ನ ಡಿಫೆಂಡ್ ಮಾಡಲು ವಿಫಲಾರದರು.  ಶನಕ 5ನೇ ಎಸೆತದಲ್ಲಿ ಬೌಂಡರಿ ಹಾಗೂ 6ನೇ ಎಸೆತದಲ್ಲಿ 2 ರನ್​ಗಳಿಸಿ ಪಂದ್ಯವನ್ನ ಟೈ ಮಾಡಲು ಯಶಸ್ವಿಯಾದರು.

ಶ್ರೀಲಂಕಾ 20 ಓವರ್​ಗಳಲ್ಲಿ  5 ವಿಕೆಟ್ ಕಳೆದುಕೊಂಡು 202 ರನ್​ಗಳಿಸಿದರು.  ಭಾರತದ ಪರ ಹಾರ್ದಿಕ್ ಪಾಂಡ್ಯ 7ಕ್ಕೆ1(1 ಓವರ್),  ಅರ್ಷದೀಪ್ ಸಿಂಗ್ 46ಕ್ಕೆ1, ಹರ್ಷಿತ್ ರಾಣಾ 54ಕ್ಕೆ1, ಕುಲ್ದೀಪ್ ಯಾದವ್ 31ಕ್ಕೆ1, ವರುಣ್ ಚಕ್ರವರ್ತಿ 31ಕ್ಕೆ1 ವಿಕೆಟ್ ಪಡೆದರು.

ನಾಟಕೀಯವಾಗಿದ್ದ ಸೂಪರ್ ಓವರ್​

ಸೂಪರ್ ಓವರ್​ ಆರಂಭಿಸಿದ ಶ್ರೀಲಂಕಾ ಅರ್ಷದೀಪ್ ಸಿಂಗ್ ಎಸೆದ ಮೊದಲ ಎಸೆತದಲ್ಲೇ ಕುಸಾಲ್ ಪೆರೆರಾ ದೊಡ್ಡ ಎಸೆತಕ್ಕೆ ಕೈಹಾಕಿ ರಿಂಕು ಸಿಂಗ್​ಗೆ ಕ್ಯಾಚ್ ನೀಡಿದರು. 2ನೇ ಎಸೆತದಲ್ಲಿ ಕಮಿಂಡು ಮೆಂಡಿಸ್ ಸಿಂಗಲ್ ತೆಗೆದುಕೊಂಡರೆ, 3ನೇ ಎಸೆತದಲ್ಲಿ ಡಾಟ್ ಮಾಡಿ ನಂತರ ವೈಡ್ ಎಸೆದರು. ಮೊದಲ ಮೂರು ಎಸೆತಗಳಲ್ಲಿ 2 ರನ್​ ಬಿಟ್ಟುಕೊಟ್ಟ ಅರ್ಷದೀಪ್ 4ನೇ ಎಸೆತದಲ್ಲಿ ಡಾಟ್ ಮಾಡಿದರು. ಆದರೆ ಶನಕ ಬಾಲ್ ಗುರುತಿಸುವಲ್ಲಿ ವಿಫಲರಾದರು. ಚೆಂಡು ನೇರವಾಗಿ ಸಂಜು ಸ್ಯಾಮ್ಸನ್ ಕೈ ಸೇರಿತು. ಬೈ ರನ್​ಗಾಗಿ ಓಡುವಾಗ ಸಂಜು ಸ್ಟಂಪ್​ಗೆ ಅಪ್ಪಳಿಸಿದರು. ರನ್​ ಔಟ್ ಆದರೂ, ಇತ್ತ ಅರ್ಷದೀಪ್​ ಕ್ಯಾಚ್​ಗಾಗಿ ಮನವಿ ಮಾಡಿ ಎಡವಟ್ಟು ಮಾಡಿಕೊಂಡರು.

ಅಂಪೈರ್ ತಕ್ಷಣ ಕ್ಯಾಚ್ ಔಟ್ ಎಂದು ತೀರ್ಪು ನೀಡಿದರು. ತಕ್ಷಣವೇ ಶನಕ ರಿವ್ಯೂವ್ ತೆಗೆದುಕೊಂಡರು. ರಿಪ್ಲೇನಲ್ಲಿ ಚೆಂಡು ಬ್ಯಾಟ್​ಗೆ ತಾಗಿರಲಿಲ್ಲ. ಹಾಗಾಗಿ ಬಾಲ್ ಡೆಡ್ ಎಂದು ಘೋಷಿಸಿಲಾಯಿತು. ಹಾಗಾಗಿ ರನ್ಔಟ್ ವಾಪಸ್ ತೆಗೆದುಕೊಂಡು, ಮತ್ತೆ ಶನಕಾಗೆ ಬ್ಯಾಟ್​ ಮಾಡಲು ಅವಕಾಶ ನೀಡಲಾಯಿತು. ಆದರೆ ಈ ಅವಕಾಶವನ್ನ ಶನಕ ಉಪಯೋಗಿಸಿಕೊಳ್ಳಲು ವಿಫಲರಾದರು. 5ನೇ ಎಸೆತದಲ್ಲಿ ಜೀತೇಶ್​ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೂ 1 ಎಸೆತ ಇರುವಂತೆ ಶ್ರೀಲಂಕಾ ಸೂಪರ್ ಓವರ್​ನಲ್ಲಿ ಆಲ್​ಔಟ್ ಆಗಿ ಕೇವಲ 3 ರನ್​ ಗುರಿ ನೀಡಿತು.

ಹಸರಂಗ ಎಸೆದ ಸೂಪರ್ ಓವರ್​ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ 3 ರನ್​ ತೆಗೆದು ಭಾರತಕ್ಕೆ ಗೆಲುವು ತಂದುಕೊಟ್ಟರು.

ಅಬ್ಬರಿಸಿದ್ದ ಅಭಿಷೇಕ್ ಶರ್ಮಾ

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್​ಗಳಿಸಿತ್ತು. ಗೋಲ್ಡನ್ ಫಾರ್ಮ್​ನಲ್ಲಿರುವ ಅಭಿಷೇಕ್ ಶರ್ಮಾ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ಗಳ ಸಹಿತ 61, ತಿಲಕ್ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ,  1 ಸಿಕ್ಸರ್ ಸಹಿತ ಅಜೇಯ 49 ರನ್​ ಸಂಜು ಸ್ಯಾಮ್ಸನ್ 23 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 39 ರನ್ ಹಾಗೂ ಅಕ್ಷರ್ ಪಟೇಲ್ 15 ಎಸೆತಗಳಲ್ಲಿ ತಲಾ 1 ಬೌಂಡರಿ, 1ಸಿಕ್ಸರ್ ಸಹಿತ ಅಜೇಯ 21 ರನ್​ಗಳಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದ್ದರು. ಇನ್ನು ಗಿಲ್ (4), ಹಾರ್ದಿಕ್ ಪಾಂಡ್ಯ 2, ನಾಯಕ ಸೂರ್ಯಕುಮಾರ್ ಯಾದವ್ ಕೇವಲ 12 ರನ್​ಗಳಿಗೆ  ವಿಕೆಟ್ ಒಪ್ಪಿಸಿದ ನಿರಾಶೆ ಮೂಡಿಸಿದರು.

ಸೆಪ್ಟೆಂಬರ್ 28 ಶನಿವಾರ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಆಡಲಿದೆ. ಇದು ಈ ಟೂರ್ನಿಯಲ್ಲಿ ಎರಡೂ ತಂಡಗಳ 3ನೇ ಮುಖಾಮುಖಿಯಾಗಿದೆ. ಮೊದಲೆರಡು ಮುಖಾಮುಖಿಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿ ಜಯ ಸಾಧಿಸಿತ್ತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs SL: ಶ್ರೀಲಂಕಾ ವಿರುದ್ಧ ಸೂಪರ್​ ಓವರ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ! ಸತತ 3ನೇ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್​ ಪ್ರವೇಶ