Last Updated:
ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಏಷ್ಯಾಕಪ್ನ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾಗೆ 203 ರನ್ಗಳ ಬೃಹತ್ ಗುರಿ ನೀಡಿದೆ.
ಏಷ್ಯಾಕಪ್ನ ಕೊನೆಯ ಸೂಪರ್ 4 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಶ್ರೀಲಂಕಾ ವಿರುದ್ದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ಗಳ ಬೃಹತ್ ಮೊತ್ತ ಕಲೆಯಾಕಿತು. ಟೂರ್ನಿಯಲ್ಲಿ ಅಮೋಘ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದರೆ, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಕೊನೆಯ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು. ಇದು ಈ ಆವೃತ್ತಿಯಲ್ಲಿ ದಾಖಲಾದ ಮೊದಲ 200 ಸ್ಕೋರ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ಓವರ್ನಲ್ಲೇ ಶುಭ್ಮನ್ ಗಿಲ್ (4) ವಿಕೆಟ್ ಕಳೆದುಕೊಂಡಿತು. ಮಹೀಶ್ ತೀಕ್ಷಣ ಬೌಲಿಂಗ್ನಲ್ಲಿ ಕಾಟ್ ಅಂಡ್ ಬೌಲ್ಡ್ ಆದರು. ನಂತರ 2ನೇ ವಿಕೆಟ್ಗೆ ಒಂದಾದ ಅಭಿಷೇಕ್ ಹಾಗೂ ನಾಯಕ ಸೂರ್ಯಕುಮಾರ್ 33 ಎಸೆತಗಳಲ್ಲಿ 59 ರನ್ಗಳ ಜೊತೆಯಾಟ ನೀಡಿದರು. ಇದರಲ್ಲಿ ನಾಯಕ ಸೂರ್ಯಕುಮಾರ್ ಪಾತ್ರ ಕೇವಲ 12 ರನ್. ಇಂದೂ ಕೂಡ ಸೂರ್ಯ ವಿಫಲರಾದರು. ಹಸರಂಗ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಸೂರ್ಯ ಬೆನ್ನಲ್ಲೆ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 61 ರನ್ಗಳಿಸಿದ್ದ ಅಭಿಷೇಕ್ ಶರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು.
ಶ್ರೀಲಂಕಾ ಪರ ಮಹೀಶ್ ತೀಕ್ಷಣ 36ಕ್ಕೆ1, ದುಷ್ಮಂತ ಚಮೀರಾ 40ಕ್ಕೆ1, ವನಿಂದು ಹಸರಂಗ 37ಕ್ಕೆ1, ದಾಸುನ್ ಶನಕ 23ಕ್ಕೆ1 ಹಾಗೂ ಚರಿತ್ ಅಸಲಂಕಾ 18ಕ್ಕೆ1 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅಭಿಷೇಕ್ ಶರ್ಮಾ ಏಷ್ಯಾಕಪ್ ಟಿ20 ಇತಿಹಾಸದಲ್ಲಿ ಒಂದೇ ಸೀಸನ್ನಲ್ಲಿ ಗರಿಷ್ಠ ರನ್ ದಾಖಲಿಸಿದ ಬ್ಯಾಟರ್ ಎಂಬ ವಿಶ್ವದಾಖಲೆ ನಿರ್ಮಿಸಿದರು. 6 ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ 309 ರನ್ಗಳಿಸಿದ್ದಾರೆ. ಈ ಮೂಲಕ 2022ರಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಸಿಡಿಸಿದ್ದ 282 ರನ್ಗಳ ದಾಖಲೆಯನ್ನ ಬ್ರೇಕ್ ಮಾಡಿದರು. ಅಲ್ಲದೆ ಮೊದಲ ಬಾರಿ ಬ್ಯಾಟರ್ ಒಬ್ಬ 300 ರ ಗಡಿ ದಾಟಿದ ನಿದರ್ಶನ ಇದಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಇದುವರೆಗೂ 31 ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಶ್ರೀಲಂಕಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ XI: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ (ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ಜನಿತ್ ಲಿಯಾನಗೆ, ಮಹೇಶ್ ತೀಕ್ಷಣ, ನುವಾನ್ ತುಷಾರ, ದುಷ್ಮಂತ ಚಮೀರಾ
ಭಾರತ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೀ), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್
September 26, 2025 10:06 PM IST