ವೆಸ್ಟ್ ಇಂಡೀಸ್ ಜೊತೆಗಿನ ಸರಣಿ ಅಕ್ಟೋಬರ್ 2 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಅಕ್ಟೋಬರ್ 2-6 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ 10-14 ರಿಂದ ದೆಹಲಿಯಲ್ಲಿ ನಡೆಯಲಿದೆ. ಈ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಈಗಾಗಲೇ ಘೋಷಿಸಲಾಗಿದೆ.
ವೆಸ್ಟ್ ಇಂಡೀಸ್ ಜೊತೆಗಿನ ಸರಣಿಗೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾ-ಎ ಜೊತೆ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ-ಎ ಆಟಗಾರರಿಗೆ ಈ ಸರಣಿಯಲ್ಲಿ ಹೆಚ್ಚಿನ ಸ್ಥಾನ ನೀಡುವ ಸಾಧ್ಯತೆಯಿದೆ. ಧ್ರುವ್ ಜುರೆಲ್, ದೇವದತ್ ಪಡಿಕ್ಕಲ್ ಮತ್ತು ಎನ್ ಜಗದೀಶನ್ ಈಗಾಗಲೇ ಮುಕ್ತಾಯಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
ಇವುಗಳ ಜೊತೆಗೆ, ಇತ್ತೀಚೆಗೆ ಮುಕ್ತಾಯಗೊಂಡ ದುಲೀಪ್ ಟ್ರೋಫಿ ಮತ್ತು ಹಿಂದಿನ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಹೆಸರುಗಳನ್ನು ಸಹ ಪರಿಗಣಿಸುವ ಸಾಧ್ಯತೆಯಿದೆ.
ತಂಡದ ಹಿರಿಯ ಬೌಲರ್ ಬುಮ್ರಾ ಅವರನ್ನು ಈ ಸರಣಿಗೆ ಪರಿಗಣಿಸಲಾಗುವುದಿಲ್ಲ. ಅವರ ಕೆಲಸದ ಹೊರೆಯಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಇನ್ನು ಇಂಗ್ಲೆಂಡ್ ಸರಣಿಯ ವೇಳೆ ಗಾಯಗೊಂಡಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ತವರಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಜಗದೀಶನ್ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗುವ ಸಾಧ್ಯತೆ ಇದೆ.
ಭಾರತದಲ್ಲಿ ಸರಣಿ ನಡೆಯುತ್ತಿರುವುದರಿಂದ ತಂಡದಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚು ಮಾನ್ಯತೆ ನೀಡಲಾಗುತ್ತದೆ. ಇಂಗ್ಲೆಂಡ್ ಸರಣಿಯಿಂದ ವಂಚಿತನಾಗಿದ್ದ ಅಕ್ಷರ್ ಪಟೇಲ್ ಈ ಸರಣಿಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ಇದೆ. ಜಡೇಜಾ ತಂಡದಲ್ಲಿರಲಿದ್ದಾರೆ. ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ಕೂಡ 13 ಸದಸ್ಯರ ತಂಡದ ಭಾಗವಾಗುವ ಸಾಧ್ಯತೆ ಇದೆ.
ಇಂಗ್ಲೆಂಡ್ ಪ್ರವಾಸದಲ್ಲಿ ವಿಫಲರಾದ ಕರುಣ್ ನಾಯರ್ ಅವರನ್ನು ಸಹ ಕೈಬಿಡಲಾಗುವುದು ಎಂದು ವರದಿಯಾಗಿದೆ. ಆಸ್ಟ್ರೇಲಿಯಾ-ಎ ಜೊತೆಗಿನ ಸರಣಿಗೆ ಭಾರತ-ಎ ತಂಡದ ನಾಯಕನಾಗಿ ಆಯ್ಕೆಯಾದ ಶ್ರೇಯಸ್ ಅಯ್ಯರ್ ಅವರನ್ನು ಸಹ ಪರಿಗಣಿಸಬಹುದು ಎನ್ನಲಾಗುತ್ತಿದೆ. ಆದರೆ ಶ್ರೇಯಸ್ ಇತ್ತೀಚೆಗೆ ಆಡಿದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಶುಭ್ಮನ್ ಗಿಲ್ ನಾಯಕನಾಗಿ ಮುಂದುವರಿಯಲಿದ್ದಾರೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್ ಮುಂದುವರಿಯಲಿದ್ದಾರೆ.
ಗಾಯದ ಕಾರಣ ಇಂಗ್ಲೆಂಡ್ ಪ್ರವಾಸ ತಪ್ಪಿಸಿಕೊಂಡಿದ್ದ ನಿತೀಶ್ ಕುಮಾರ್ ರೆಡ್ಡಿ ಕಮ್ಬ್ಯಾಮ್ ಮಾಡುವ ಸಾಧ್ಯತೆ ಇದೆ. ನಿತೀಶ್ ರೆಡ್ಡಿ ತಂಡ ಸೇರಿದರೆ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಲಿದ್ದಾರೆ.
ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೀ), ದೇವದತ್ ಪಡಿಕ್ಕಲ್, ಶ್ರೇಯಸ್ ಅಯ್ಯರ್, ಸಾಯಿ ಸುದರ್ಶನ್, ನಾರಾಯಣ್ ಜಗದೀಸನ್ (ವಿಕೀ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿದ್ರಾಜ್
September 23, 2025 3:58 PM IST