IND vs WI: ಭಾರತದ ಗೆಲುವಿಗೆ ಬೇಕು 58 ರನ್! 1997ರ ಬಾರ್ಬಡೋಸ್‌ ಟೆಸ್ಟ್ ಪಂದ್ಯದ ಘಟನೆ ಮರುಕಳಿಸುತ್ತಾ? / Will the result of the 1997 Barbados Test match be found in the second Test between India and West Indies | ಕ್ರೀಡೆ

IND vs WI: ಭಾರತದ ಗೆಲುವಿಗೆ ಬೇಕು 58 ರನ್! 1997ರ ಬಾರ್ಬಡೋಸ್‌ ಟೆಸ್ಟ್ ಪಂದ್ಯದ ಘಟನೆ ಮರುಕಳಿಸುತ್ತಾ? / Will the result of the 1997 Barbados Test match be found in the second Test between India and West Indies | ಕ್ರೀಡೆ

Last Updated:

1997 ರ ಬಾರ್ಬಡೋಸ್ ಟೆಸ್ಟ್ ಪಂದ್ಯದ ಫಲಿತಾಂಶವು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಂಡುಬರುತ್ತದೆಯೇ? ಎಂಬ ಪ್ರಶ್ನೆ ಎದುರಾಗಿದೆ.

1997 Barbados Test 1997 Barbados Test
1997 Barbados Test

ದೆಹಲಿ (Delhi)ಯ ಅರುಣ್ ಜೇಟ್ಲಿ (Arun Jaitley) ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (India and West Indies)​ ತಂಡಗಳ ನಡುವೆ ಎರಡು ಪಂದ್ಯಗಳ ಸರಣಿಯ ಕೊನೆಯ ಟೆಸ್ಟ್ (Test) ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡ (Team India) ಎರಡನೇ ಬಾರಿಗೆ ಬ್ಯಾಟಿಂಗ್ (Batting) ಮಾಡುತ್ತದೆ ಎಂದು ಹಲವರು ಭಾವಿಸಿರಲಿಲ್ಲ. ಆದರೆ ವೆಸ್ಟ್ ಇಂಡೀಸ್‌ನ ಅದ್ಭುತ ಹೋರಾಟ ಭಾರತ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವಂತೆ ಮಾಡಿತು. ಶಾಯ್ ಹೋಪ್ (Shai Hope) ಮತ್ತು ಜಾನ್ ಕ್ಯಾಂಪ್‌ಬೆಲ್ (John Campbell) ಅವರ ಶತಕಗಳ ನೆರವಿನಿಂದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಜೀವಂತವಾಗಿರಿಸಿತು.

ಟೀಮ್ ಇಂಡಿಯಾ 518/5 ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ನಂತರ, ವೆಸ್ಟ್ ಇಂಡೀಸ್ 248 ರನ್‌ಗಳಿಗೆ ಆಲೌಟ್ ಆಯಿತು. ಮತ್ತೊಂದು ಪತನದ ನಿರೀಕ್ಷೆಯಲ್ಲಿ ಭಾರತ ಫಾಲೋ-ಆನ್ ಅನ್ನು ಜಾರಿಗೊಳಿಸಿತು. ಆದರೆ ಹೋಪ್ ಮತ್ತು ಕ್ಯಾಂಪ್‌ಬೆಲ್ ವಿಂಡೀಸ್​ ತಂಡಕ್ಕೆ ನೆರವಾದರು. ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್​​ನಲ್ಲಿ 390 ರನ್ ಆಲೌಟಾಗಿ ಟೀಮ್ ಇಂಡಿಯಾಕ್ಕೆ 121 ರನ್‌ಗಳ ಅಲ್ಪ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 63 ರನ್ ಕಲೆ ಹಾಕಿದೆ. ಯಶಸ್ವಿ ಜೈಸಾಲ್ ಕೇವಲ 8 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ (30) ಮತ್ತು ಕೆಎಲ್ ರಾಹುಲ್ (25) ಅಜೇಯರಾಗುಳಿದಿದ್ದು, ಐದನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ 1997ರ ಬಾರ್ಬಡೋಸ್‌ ಟೆಸ್ಟ್ ಪಂದ್ಯದ ಘಟನೆ ಮರುಕಳಿಸುತ್ತಾ? ಎಂಬ ಚರ್ಚೆ ಶುರುವಾಗಿದೆ.

ಏನಿದು ಬಾರ್ಬಡೋಸ್‌ ಟೆಸ್ಟ್ ಘಟನೆ?

ಭಾರತ ತಂಡವು 1997 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಉಭಯ ತಂಡಗಳ ಬಾರ್ಬಡೋಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಅಚ್ಚರಿ ಫಲಿತಾಂಶವನ್ನು ಕಂಡಿತ್ತು. ಶಿವನಾರಾಯಣ್ ಚಂದ್ರಪಾಲ್ ಅವರ ಅದ್ಭುತ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ 289 ರನ್ ಗಳಿಸಿತು. ವೆಂಕಟೇಶ್ ಪ್ರಸಾದ್ ಐದು ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕೆ ಉತ್ತರವಾಗಿ, ಭಾರತ ಪರ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಕ್ರಮವಾಗಿ 92 ಮತ್ತು 78 ರನ್ ಗಳಿಸಿದರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 319 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಅಲ್ಪ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 140 ರನ್‌ಗಳಿಗೆ ಆಲೌಟ್ ಆಗಿ, ಭಾರತಕ್ಕೆ 119 ರನ್‌ಗಳ ಗುರಿಯನ್ನು ನೀಡಿತು.

ಇದನ್ನೂ ಓದಿ: IND vs WI: ಎರಡನೇ ಇನ್ನಿಂಗ್ಸ್​​ನಲ್ಲಿ ವಿಂಡೀಸ್ 390ಕ್ಕೆ ಆಲೌಟ್! ಸರಣಿ ಕ್ಲೀನ್​ ಸ್ವೀಪ್ ಮಾಡಲು ಭಾರತಕ್ಕೆ ಬೇಕು 121 ರನ್​!

ವಿಂಡೀಸ್ ನೀಡಿದ 119 ರನ್​ಗಳ ಗುರಿಯನ್ನು ಭಾರತ ಸುಲಭವಾಗಿ ಬೆನ್ನಟ್ಟಿ ಗೆಲುವು ಸಾಧಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ವಿಂಡೀಸ್​ ಬೌಲರ್ಸ್ ಉರಿ ಬೌಲಿಂಗ್ ದಾಳಿಗೆ ಭಾರತ ತತ್ತರಿಸಿತ್ತು. ವಿಂಡೀಸ್ ವೇಗಿಗಳಾದ ಇಯಾನ್ ಬಿಷಪ್, ಕರ್ಟ್ಲಿ ಅಬ್ರೋಸ್ ಮತ್ತು ಫ್ರಾಂಕ್ಲಿನ್ ರೋಸ್ ಅದ್ಭುತ ಬೌಲಿಂಗ್ ದಾಳಿ ಮಾಡಿ ಭಾರತ ತಂಡವನ್ನು ಕಟ್ಟಿ ಹಾಕಿದ್ದರು. ಭಾರತ ಆರಂಭದಲ್ಲಿ 45 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಬಳಿಕ 80 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲನ್ನು ಅನುಭವಿಸಿತ್ತು.

ಗೆಲುವು ಯಾರಿಗೆ?

ದೆಹಲಿಯಲ್ಲಿ ಭಾರತಕ್ಕೆ ಸೋಲಿನ ಭೀತಿ ಇಲ್ಲ. ಭಾರತ ಗೆಲುವಿಗೆ ಕೇವಲ 58 ರನ್‌ಗಳ ದೂರದಲ್ಲಿದೆ. ಅಲ್ಲದೆ, ಭಾರತ ತನ್ನ ಬಳಿ ಒಂಬತ್ತು ವಿಕೆಟ್‌ಗಳನ್ನು ಇಟ್ಟುಕೊಂಡಿದೆ. ಇತ್ತ ವಿಂಡೀಸ್​ ತಂಡದಲ್ಲಿ ಹೇಳಿಕೊಳ್ಳುವಂತಹ ಟಾಪ್ ಬೌಲರ್ಸ್ ಇಲ್ಲ. ಇದು ವಿಂಡೀಸ್ ತಂಡಕ್ಕೆ ಹಿನ್ನಡೆಯಾಗಿದೆ. ಭಾರತ ಈ ಪಂದ್ಯವನ್ನು ಸೋಲಬೇಕಾದರೆ ಕೆಟ್ಟ ಕ್ರಿಕೆಟ್ ಆಡಬೇಕಾಗುತ್ತದೆ. ಇದು ಭಾರತ ತಂಡದಿಂದ ಅಸಾಧ್ಯವಾಗಿದೆ.