Last Updated:
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಪರ ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ದಾಖಲೆಯ ಜೊತೆಯಾಟವಾಡಿದರು.
ಐಸಿಸಿ(ICC) 2025 ರ ಮಹಿಳಾ ವಿಶ್ವಕಪ್(World Cup)ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ(India vs Australia) ನಡುವಿನ ಸೆಮಿಫೈನಲ್ ಪಂದ್ಯ ಭಾರೀ ಕುತೂಹಲ ಮೂಡಿಸಿತ್ತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ(Team India)ವು ಮಹಿಳಾ ಏಕದಿನ ಇತಿಹಾಸದಲ್ಲಿ ಅತಿದೊಡ್ಡ ರನ್ ಚೇಸ್ ಸಾಧಿಸುವ ಮೂಲಕ ಆಸ್ಟ್ರೇಲಿಯಾದ ಸೊಕ್ಕನ್ನು ಮುರಿದು ಹಾಕಿತು. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಹರ್ಮನ್‌ಪ್ರೀತ್ ಕೌರ್(Harmanpreet Kaur) ಪಡೆ 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಫೈನಲ್ ತಲುಪಿತು. ಸೆಮಿಫೈನಲ್‌ನಲ್ಲಿ ಕಾಂಗರೂ ಪಡೆಯನ್ನು ಮಣಿಸುವ ಮೂಲಕ ಭಾರತವು ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿತು. ಇದರೊಂದಿಗೆ ವಿಶ್ವಕಪ್ ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದ್ದ ಆಸ್ಟ್ರೇಲಿಯಾದ ಗೆಲುವಿನ ಸರಣಿಯು ಕೊನೆಗೊಂಡಿದೆ.
ಫೋಬೆ ಲಿಚ್‌ಫೀಲ್ಡ್ ಅವರ ಶತಕ ಮತ್ತು ಎಲಿಸ್ ಪೆರ್ರಿ ಮತ್ತು ಆಶ್ಲೀ ಗಾರ್ಡ್ನರ್ ಅವರ ಅರ್ಧಶತಕಗಳ ಸಹಾಯದಿಂದ ಆಸ್ಟ್ರೇಲಿಯಾ ತಂಡ ಭಾರತಕ್ಕೆ 339 ರನ್‌ಗಳ ಗುರಿಯನ್ನು ನೀಡಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕಾಂಗೂರು ಪಡೆ 49.5 ಓವರ್‌ಗಳಲ್ಲಿ 338 ರನ್‌ಗಳಿಗೆ ಆಲೌಟಾಯಿತು.
ಸೆಮಿಫೈನಲ್‌ನಲ್ಲಿ ಮಹಿಳಾ ಏಕದಿನ ಇತಿಹಾಸದಲ್ಲಿ ಅತಿದೊಡ್ಡ ರನ್ ಚೇಸಿಂಗ್ ಶುರು ಮಾಡಿದ ಭಾರತ ಆರಂಭದಲ್ಲಿಯೇ ಎಡವಿತು. ಶಫಾಲಿ ವರ್ಮಾ 10 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ನಂತರ ಸ್ಮೃತಿ ಮಂಧಾನ 24 ರನ್‌ಗಳಿಗೆ ಔಟದರು. ಆದಾಗ್ಯೂ, ಜೆಮಿಮಾ ರೊಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಗೆಲುವಿನ ಜವಾಬ್ದಾರಿಯನ್ನು ವಹಿಸಿಕೊಂಡರು. ಆಸ್ಟ್ರೇಲಿಯಾ ಬೌಲರ್ಸ್ ಲೆಕ್ಕಚಾರ ಉಲ್ಟಾ ಮಾಡಿದ ಈ ಜೋಡಿ ಭಾರತ ತಂಡಕ್ಕೆ ಗೆಲುವಿನ ಅಡಿಪಾಯ ಹಾಕಿದರು.
ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹರ್ಮನ್‌ಪ್ರೀತ್ ಮತ್ತು ಜೆಮಿಮಾ ಜೋಡಿ ಶತಕದ ಜೊತೆಯಾಟವಾಡಿದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದರು. ಹರ್ಮನ್‌ಪ್ರೀತ್ ಮತ್ತು ಜೆಮಿಮಾ ಅವರ ಜೊತೆಯಾಟವು ಮಹಿಳಾ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಇಲ್ಲಿವರಗೆ ಅತ್ಯಧಿಕವಾಗಿದೆ.
ಮಹಿಳಾ ವಿಶ್ವಕಪ್ 2017 ರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹರ್ಮನ್‌ಪ್ರೀತ್ ಮತ್ತು ದೀಪ್ತಿ ಶರ್ಮಾ 137 ರನ್‌ಗಳ ದಾಖಲೆ ಜೊತೆಯಾಟವಾಡಿದ್ದರು. ಈ ಜೊತೆಯಾಟದ ದಾಖಲೆಯನ್ನು ಹರ್ಮನ್‌ಪ್ರೀತ್ ಮತ್ತು ಜೆಮಿಮಾ ಜೋಡಿ ಮುರಿದಿದ್ದಾರೆ. ಟೀಮ್ ಇಂಡಿಯಾ ಪರ ಈ ಜೋಡಿ ಮೂರನೇ ವಿಕೆಟ್‌ಗೆ 167 ರನ್‌ಗಳ ಜೊತೆಯಾಟವಾಡಿದರು.
ಜೆಮಿಮಾ ರೊಡ್ರಿಗಸ್ 14 ಬೌಂಡರಿಗಳೊಂದಿಗೆ ಅಜೇಯ 127 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಹರ್ಮನ್‌ಪ್ರೀತ್ ಕೌರ್ ಕೂಡ 88 ಎಸೆತಗಳಲ್ಲಿ 89 ರನ್ ಗಳಿಸಿ ಪಂದ್ಯಕ್ಕೆ ಜೀವ ತುಂಬಿದರು. ನವೆಂಬರ್ 2 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
October 30, 2025 11:30 PM IST