Last Updated:
ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ಭಾರತೀಯ ತಂಡವು ಮೂರು ಯೂತ್ ODI ಮತ್ತು ಎರಡು ಯೂತ್ ಟೆಸ್ಟ್‌ಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಮೊದಲ ಪಂದ್ಯದಲ್ಲೇ ಗೆಲುವಿನ ಸಿಹಿ ಅನುಭವಿಸಿದೆ.
ಭಾರತೀಯ ಅಂಡರ್-19 ಕ್ರಿಕೆಟ್ ತಂಡವು (AUS U19 Vs IND U19) ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಆಸೀಸ್ ಯುವ ತಂಡದ ವಿರುದ್ಧದ ಮೊದಲ ಯೂತ್ ಏಕದಿನ ಪಂದ್ಯವನ್ನ ಭಾರತ ಕಿರಿಯರ ತಂಡ ಏಳು ವಿಕೆಟ್‌ಗಳಿಂದ ಯಾವುದೇ ಆಯಾಸವಿಲ್ಲದೆ ಸುಲಭವಾಗಿ ಗೆದ್ದುಕೊಂಡಿದೆ. ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ಭಾರತೀಯ ತಂಡವು ಮೂರು ಯೂತ್ ODI ಮತ್ತು ಎರಡು ಯೂತ್ ಟೆಸ್ಟ್‌ಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಮೊದಲ ಪಂದ್ಯದಲ್ಲೇ ಗೆಲುವಿನ ಸಿಹಿ ಅನುಭವಿಸಿದೆ.
ಭಾನುವಾರ ಬ್ರಿಸ್ಬೇನ್‌ನಲ್ಲಿ ಉಭಯ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಿತು. ಇಯಾನ್ ಹೀಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಅಂಡರ್-19 ತಂಡ ಮೊದಲು ಬ್ಯಾಟಿಂಗ್ ಮಾಡಿತು. ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿದ ಆಸೀಸ್ ತಮ್ಮ ಖಾತೆಯನ್ನು ತೆರೆಯುವ ಮೊದಲೇ, ಆರಂಭಿಕ ಆಟಗಾರರಾದ ಅಲೆಕ್ಸ್ ಟರ್ನರ್ (0) ಮತ್ತು ಸೈಮನ್ ಬಡ್ಜ್ (0) ವಿಕೆಟ್‌ಗಳನ್ನು ಕಳೆದುಕೊಂಡರು. ಕಿಶನ್ ಕುಮಾರ್ ಅವರಿಬ್ಬರನ್ನೂ ಔಟ್ ಮಾಡಿದರು.
ಉಳಿದ ಆಸೀಸ್ ಆಟಗಾರರಲ್ಲಿ, ಸ್ಟೀವನ್ ಹೋಗನ್ 39 (82 ಎಸೆತ) ಮತ್ತು ಟಾಮ್ ಹೋಗನ್ 41 (81 ಎಸೆತ) ರನ್ ಗಳಿಸಿದರೆ, ಜಾನ್ ಜೇಮ್ಸ್ 68 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 77 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂವರ ಇನ್ನಿಂಗ್ಸ್‌ನಿಂದಾಗಿ ಆಸೀಸ್ ಉತ್ತಮ 200ರ ಗಡಿ ದಾಟಿತು. ಆಸ್ಟ್ರೇಲಿಯಾ ಕಿರಿಯರ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 225 ರನ್ ಗಳಿಸಿದರು.
ಭಾರತದ ಯುವ ಬೌಲರ್‌ಗಳಲ್ಲಿ, ಕಿಶನ್ ಕುಮಾರ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು. ಹೆನಿಲ್ ಪಟೇಲ್ ಮೂರು ವಿಕೆಟ್ ಪಡೆದರು ಹಾಗೂ ಆರ್.ಎಸ್. ಅಂಬರೀಶ್ ಒಂದು ವಿಕೆಟ್ ಪಡೆದರು.
ಆಸೀಸ್ ತಂಡವು ನಿಗದಿಪಡಿಸಿದ 226 ಗುರಿಯನ್ನು ಬೆನ್ನಟ್ಟುವ ವೇಳೆ ಎಂದಿನಂತೆ ವೈಭವ್ ಸೂರ್ಯವಂಶ ಟಿ20ಯಂತೆ ಬ್ಯಾಟ್ ಬೀಸಿದರು. ಸೂರ್ಯವಂಶಿ ಕೇವಲ 22 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸೇರಿದಂತೆ 38 ರನ್ಗಳಿಸಿದರು. ಹೊಡಿ ಬಡಿ ಆಟಕ್ಕೆ ಮುಂದಾಗಿ ವೈಭವ್ 5ನೇ ಓವರ್ನ ಕೊನೆಯ ಎಸೆತದಲ್ಲಿ ತಂಡದ ಮೊತ್ತವನ್ನ 50ಕ್ಕೇರಿಸಿ ವಿಕೆಟ್ ಒಪ್ಪಿಸಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಆಸೀಸ್ ವೇಗಿ ಚಾರ್ಲ್ಸ್ ಲಚ್ಮಂಡ್ ನಾಯಕ ಆಯುಷ್ ಮಾಥ್ರೆ (6) ಮತ್ತು ಒನ್-ಡೌನ್ ಬ್ಯಾಟ್ಸ್‌ಮನ್ ವಿಹಾನ್ ಮಲ್ಹೋತ್ರಾ (9) ಅವರನ್ನು ಒಂದಂಕಿ ಮೊತ್ತಕ್ಕೆ ಸೀಮಿತಗೊಳಿಸಿದರು.
ಅರ್ಧಶತಕ ಸಿಡಿಸಿ ಪಂದ್ಯ ಫಿನಿಶ್ ಮಾಡಿದ ವೇದಾಂತ್, ಅಭಿಗ್ಯಾನ್
ತಂಡದ ಮೊತ್ತ 75ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ವೇದಾಂತ್ ತ್ರಿವೇದಿ ಹಾಗೂ ಅಭಿಗ್ಯಾನ್ ಕುಂಡು 4ನೇ ವಿಕೆಟ್ಗೆ ಮುರಿಯದ 152 ರನ್ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ತ್ರಿವೇದಿ 69 ಎಸೆತಗಳಲ್ಲಿ 8 ಬೌಂಡರಿಗಳ ಸಹಿತಅಜೇಯ 61 ರನ್ಗಳಿಸಿದರೆ, ಅಭಿಗ್ಯಾನ್ ಕುಂಡು 74 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 87 ರನ್ ಗಳಿಸಿ ಅಜೇಯರಾಗಿ ಉಳಿದರು.
ಇವರಿಬ್ಬರ ಅಬ್ಬರಕ್ಕೆ ಭಾರತ ಕಿರಿಯರ ತಂಡ 226 ರನ್ಗಳ ಗುರಿಯನ್ನ 30.3 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ತಲುಪಿತು. ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಿದ ಅಭಿಗ್ಯಾನ್ ಕುಂಡು ಅವರನ್ನು ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಮುಂದಿನ ಪಂದ್ಯ ಸೆಪ್ಟೆಂಬರ್ 24ರಂದು ನಡೆಯಲಿದೆ.
September 21, 2025 5:52 PM IST