India vs Bangladesh: ಕುಲ್ದೀಪ್ ದಾಳಿಗೆ ಮಕಾಡೆ ಮಲಗಿದ ಬಾಂಗ್ಲಾದೇಶ! ಏಷ್ಯಾಕಪ್​​ನಲ್ಲಿ ಫೈನಲ್ ಪ್ರವೇಶಿಸಿದ ಭಾರತ | Kuldeep Yadav and Bumrah Shine as India Beat Bangladesh, Confirm Final Spot in Asia Cup | ಕ್ರೀಡೆ

India vs Bangladesh: ಕುಲ್ದೀಪ್ ದಾಳಿಗೆ ಮಕಾಡೆ ಮಲಗಿದ ಬಾಂಗ್ಲಾದೇಶ! ಏಷ್ಯಾಕಪ್​​ನಲ್ಲಿ ಫೈನಲ್ ಪ್ರವೇಶಿಸಿದ ಭಾರತ | Kuldeep Yadav and Bumrah Shine as India Beat Bangladesh, Confirm Final Spot in Asia Cup | ಕ್ರೀಡೆ

Last Updated:

ಮೊದಲ ಫೈನಲಿಸ್ಟ್ ಸ್ಥಾನವನ್ನ ಖಚಿತಪಡಿಸುವ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 168 ರನ್​ಗಳಿಸಿತ್ತು. 169 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೈಫ್​ ಹಸನ್​ (69) ಅರ್ಧಶತಕದ ಹೊರತಾಗಿಯೂ 19.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 127ಕ್ಕೆ ಸೀಮಿತವಾಯಿತು

ಕುಲ್ದೀಪ್ ಮಾರಕ ದಾಳಿಕುಲ್ದೀಪ್ ಮಾರಕ ದಾಳಿ
ಕುಲ್ದೀಪ್ ಮಾರಕ ದಾಳಿ

ಟೀಮ್ ಇಂಡಿಯಾ ಏಷ್ಯಾಕಪ್​ನಲ್ಲಿ ತನ್ನ ಅಮೋಘ ಪ್ರದರ್ಶನವನ್ನ ಮುಂದುವರಿಸಿದೆ. ಬುಧವಾರ ನಡೆದ ತನ್ನ 2ನೇ ಸೂಪರ್ 4 ಪಂದ್ಯದಲ್ಲಿ ಭರ್ಜರಿ ಆಲ್​ರೌಂಡರ್ ಪ್ರದರ್ಶನ ತೋರಿ ಬಾಂಗ್ಲಾದೇಶದ ವಿರುದ್ಧ 41 ರನ್​ಗಳ ಜಯ ಸಾಧಿಸಿ ಫೈನಲ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಬಾಂಗ್ಲಾದೇಶ ತಂಡ ಭಾರತ ನೀಡಿದ್ದ 169 ರನ್​ಗಳಿಗೆ ಉತ್ತರವಾಗಿ 127ಕ್ಕೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಗುರುವಾರ ನಡೆಯುವ ಬಾಂಗ್ಲಾದೇಶ-ಪಾಕಿಸ್ತಾನ ನಡುವಿನ ಪಂದ್ಯ ನಾಕೌಟ್ ಪಂದ್ಯವಾಗಲಿದೆ. ಆದರೆ ಭಾರತ-ಶ್ರೀಲಂಕಾ ನಡುವಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದರೂ, ಸೋತರೂ ತನ್ನ ಫೈನಲ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.

ಮೊದಲ ಫೈನಲಿಸ್ಟ್ ಸ್ಥಾನವನ್ನ ಖಚಿತಪಡಿಸುವ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 168 ರನ್​ಗಳಿಸಿತ್ತು. 169 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೈಫ್​ ಹಸನ್​ (69) ಅರ್ಧಶತಕದ ಹೊರತಾಗಿಯೂ 19.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 127ಕ್ಕೆ ಸೀಮಿತವಾಯಿತು.

169 ರನ್​ಗಳ ಗುರಿಯನ್ನ ಬೆನ್ನಟ್ಟಿ ಬಾಂಗ್ಲಾದೇಶ 2ನೇ ಓವರ್​ನಲ್ಲೇ ಆರಂಭಿಕ ಬ್ಯಾಟರ್ ತಾಂಜಿದ್ ಹಸನ್ (1) ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್​ನಲ್ಲಿ ಹಸನ್ ದುಬೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್​ಗೆ ಪರ್ವೇಜ್ ಹೊಸೈನ್ ಹಾಗೂ ಸೈಫ್ ಹಸನ್ 45 ರನ್​ಗಳಿಸಿ ಚೇತರಿಕೆ ನೀಡಿದರು. 19 ಎಸೆತಗಲ್ಲಿ 21 ರನ್​ಗಳಿಸಿ ಪರ್ವೇಜ್ ಕುಲ್ದೀಪ್ ಯಾದವ್ ಬೌಲಿಂಗ್​​ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಕಳೆದ ಪಂದ್ಯದ ಹೀರೋ ತೌಹಿದ್ ಹೃದೋಯ್ ಕೇವಲ 6 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಪೆವೆಲಿಯನ್ ಸೇರಿಕೊಂಡರು.

ಇದನ್ನೂ ಓದಿ: Abhishek Sharma: ಬಾಂಗ್ಲಾ ವಿರುದ್ಧವೂ ಅಭಿಷೇಕ್ ಶರ್ಮಾ ವಿಧ್ವಂಸಕ ಬ್ಯಾಟಿಂಗ್! ಏಷ್ಯಾಕಪ್​​ನಲ್ಲಿ ಆಲ್​ಟೈಮ್ ಸಿಕ್ಸರ್​ ದಾಖಲೆ ಬ್ರೇಕ್

5ನೇ ಕ್ರಮಾಂಕದಲ್ಲು ಬಂದ ಶಮೀಮ್ ಹೊಸೈನ್ ಶೂನ್ಯಕ್ಕೆ ವರುಣ್ ಚಕ್ರವರ್ತಿ ಬೌಲಿಂಗ್​​ನಲ್ಲಿ ಡಕ್ ಔಟ್ ಆದರೆ, ನಾಯಕ ಜಾಕರ್ ಅಲಿ 4 ರನ್​ಗಳಿಸಿ ರನ್​ ಔಟ್ ಆದರು. ಮೊಹಮ್ಮದ್ ಸೈಫುದ್ದೀನ್ 4,  ರಶೀದ್ ಹೊಸೈನ್ 2, ತಾಂಜಿದ್ ಹಸನ್ ಸಕಿಬ್ 0, ಮುಸ್ತಫಿಜುರ್ 6 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸೈಫ್ ಹಸನ್ 51 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್​ಗಳ ಸಹಿತ 69 ರನ್​ಗಳಿಸಿ 9ನೇ ಆಟಗಾರನಾಗಿ ವಿಕೆಟ್ ಒಪ್ಪಿಸಿದರು. ಹಸನ್​ಗೆ ಭಾರತ ನೀಡಿದ 4 ಕ್ಯಾಚ್ ಡ್ರಾಫ್ ಅವಕಾಶ ಕೇವಲ ಅರ್ಧಶತಕ ಪೂರ್ಣಗೊಳಿಸಲು ಮಾತ್ರ ಸಾಧ್ಯವಾಯಿತು.

ಕುಲದೀಪ್ ಮಾರಕ ದಾಳಿ

ಭಾರತದ ಪರ ಮಿಂಚಿದ ಕುಲ್ದೀಪ್ ಯಾದವ್ 4 ಓವರ್​ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಇದು 5 ಪಂದ್ಯಗಳಲ್ಲಿ ಅವರ 3ನೇ 3 ವಿಕೆಟ್ ಸಾಧನೆಯಾಗಿದೆ., ವರುಣ್ ಚಕ್ರವರ್ತಿ 28ಕ್ಕೆ2, ಜಸ್ಪ್ರೀತ್ ಬುಮ್ರಾ 18ಕ್ಕೆ2, ಅಕ್ಷರ್ ಪಟೇಲ್ 37ಕ್ಕೆ1, ತಿಲಕ್ ವರ್ಮಾ 1ಕ್ಕೆ1 ವಿಕೆಟ್ ಪಡೆದರು.

ಭಾರತಕ್ಕೆ ಆಸರೆಯಾದ ಅಭಿಷೇಕ್ ಶರ್ಮಾ

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ 75 ರನ್​ಗಳ ನೆರವಿನಿಂದ 168 ರನ್​ಗಳಿಸಿತ್ತು. ಪವರ್​ ಪ್ಲೇನಲ್ಲಿ 72 , 10 ಓವರ್ಗಳಲ್ಲಿ 98 ರನ್​ಗಳಿಸಿದ್ದ ಭಾರತ ಅಭಿಷೇ್ಕ ಶರ್ಮಾ ವಿಕೆಟ್ ಕಳೆದುಕೊಂಡ ಬಳಿಕ ದಿಢೀರ್ ಕುಸಿತಕಂಡು 200 ರನ್​ಗಳಿಸುವ ಅವಕಾಶ ತಪ್ಪಿಸಿಕೊಂಡಿತು.

ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್​ಗಳ ನೆರವಿನಿಂದ 75 ರನ್​ಗಳಿಸಿದರೆ, ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ 38, ಶುಭ್​ಮನ್ ಗಿಲ್ 19 ಎಸೆತಗಳಲ್ಲಿ 29 ರನ್​ಗಳಿಸಿದರು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ 10 ರನ್​ಗಳಿಸಿ ನಿರಾಶೆ ಮೂಡಿಸಿದರೆ, ದುಬೆ (2), ಸೂರ್ಯಕುಮಾರ್ ಯಾದವ್ (5) ಹಾಗೂ ತಿಲಕ್ ವರ್ಮಾ (5) ಒಂದಂಕಿ ಮೊತ್ತಕ್ಕೆ ಸೀಮಿತವಾಗಿ ಬೇಸರ ಮೂಡಿಸಿದರು.

ಭಾರತ ಫೈನಲ್ ಪ್ರವೇಶ

ಟೀಮ್ ಇಂಡಿಯಾ ಈ ಗೆಲುವಿನೊಂದಿಗೆ ಫೈನಲ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಕೊನೆಯ ಪಂದ್ಯವನ್ನ ಶ್ರೀಲಂಕಾ ವಿರುದ್ದ ಸೋತರೂ ಟೀಮ್ ಇಂಡಿಯಾ ಫೈನಲ್ ಸ್ಥಾನ ಅಬಾಧಿತವಾಗಿದೆ. ನಾಳೆ ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯ ಸೆಮಿಫೈನಲ್​ನಂತಾಗಿರಲಿದ್ದು, ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.