Last Updated:
ಇಂಗ್ಲೆಂಡ್ ವಿರುದ್ಧ ಎಡ್ಜ್ ಬಾಸ್ಟನ್ ಪಂದ್ಯವನ್ನು 336 ರನ್ಗಳಿಂದ ಗೆಲ್ಲುವ ಮೂಲಕ ಟೀಮ್ ಇಂಡಿಯಾ 58 ವರ್ಷಗಳ ಕಾಯುವಿಕೆಯನ್ನ ಅಂತ್ಯಗೊಳಿಸಿದೆ. 1967ರಿಂದ ಇಲ್ಲಿಯವರೆಗೆ ಈ ಮೈದಾನದಲ್ಲಿ ಭಾರತ ಗೆಲುವನ್ನೇ ಕಂಡಿರಲಿಲ್ಲ. ಇದೀಗ ಶುಭ್ಮನ್ ಗಿಲ್ ನೇತೃತ್ವದ ಯುವ ಪಡೆದ ಆಂಗ್ಲರ ಭದ್ರಕೋಟೆಯನ್ನ ಛಿದ್ರ ಮಾಡಿದೆ.
ಭಾರತ ತಂಡ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ 336 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೆಸ್ಟ್ ಸರಣಿಯನ್ನ 1-1ರಲ್ಲಿ ಸಮಬಲ ಸಾಧಿಸಿದೆ. ಈ ಮೂಲಕ ಎಡ್ಜ್ಬಾಸ್ಟನ್ನಲ್ಲಿ 58 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನ ಗೆದ್ದಿದೆ. ಮನ್ಸೂರ್ ಅಲಿ ಖಾನ್ ಪಟೌಡಿ, ಕಪಿಲ್ ದೇವ್, ವೆಂಕಟರಾಘವನ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ, ಕೊಹ್ಲಿ ನಾಯಕತ್ವದಲ್ಲಿ ಸಾಧ್ಯವಾಗದ ದಾಖಲೆಯನ್ನ 25 ವರ್ಷದ ಶುಭ್ಮನ್ ಗಿಲ್ ಸಾಧಿಸಿದ್ದಾರೆ. ಇಲ್ಲಿಯವರೆಗೆ ಕಪಿಲ್ ದೇವ್ ಮಾತ್ರ ಭಾರತ ತಂಡವನ್ನ ಸೋಲಿನಿಂದ ಪಾರು ಮಾಡಿ ಡ್ರಾ ಸಾಧಿಸುವಂತೆ ಮಾಡಿದ್ದರು. ಆದರೆ ಉಳಿದ 7 ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು. ಇದೀಗ ಎಡ್ಜ್ಬಾಸ್ಟನ್ ಇಂಗ್ಲೆಂಡ್ ಭದ್ರಕೋಟೆಯನ್ನ ಯುವಪಡೆ ಛಿದ್ರ ಮಾಡಿದೆ. ಈ ಮೂಲಕ ಗಿಲ್ ನಾಯಕತ್ವದಲ್ಲಿ ಹೊಸ ಯುಗ ಆರಂಭಿಸಿದ್ದಾರೆ.
ಭಾರತ ನೀಡಿದ್ದ 608 ರನ್ಗಳ ಗುರಿಯನ್ನ ಬೆನ್ನಟ್ಟಿದ ಅತಿಥೇಯ ಇಂಗ್ಲೆಂಡ್ ತಂಡ 4ನೇ ದಿನವೇ 72ಕ್ಕೆ ಮೂರು ವಿಕೆಟ್ ಕಳೆದುಕೊಂಡಿತ್ತು. ಜಾಕ್ ಕ್ರಾಲೆ (0), ಬೆನ್ ಡಕೆಟ್ (25) ಜೋ ರೂಟ್ (6) ವಿಕೆಟ್ ಕಳೆದಿಕೊಂಡು ಸೋಲಿನತ್ತಾ ಮುಖ ಮಾಡಿತ್ತು. ರೋಚಕವಾಗಿದ್ದ 5ನೇ ದಿನ ಮೊದಲ ಒಂದೂವರೆ ಗಂಟೆ ಮಳೆ ಬಿದ್ದಿದ್ದರಿಂದ ಇಂಗ್ಲೆಂಡ್ ಆಟಗಾರರ ಮುಖದಲ್ಲಿ ಸಮಾಧಾನ ತರಿಸಿತ್ತು. ಆದರೆ ಮಳೆ ನಿಂತ ಮೇಲೆ 5ನೇ ದಿನ ಆರಂಭವಾಗಿ 11 ರನ್ಗಳಿಸುವ ಹೊತ್ತಿಗೆ 24 ಒಲ್ಲಿ ಪೋಪ್ ಹಾಗೂ 23 ರನ್ಗಳಿಸಿದ್ದ ಹ್ಯಾರಿ ಬ್ರೂಕ್ ವಿಕೆಟ್ ಕಳೆದುಕೊಂಡಿತು. ಈ ಇಬ್ಬರನ್ನು ಆಕಾಶ್ ದೀಪ್ ಪೆವಿಲಿಯನ್ಗಟ್ಟಿದರು.
ಆದರೆ ನಾಯಕ ಬೆನ್ ಸ್ಟೋಕ್ಸ್ ಹಾಗೂ ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 184 ರನ್ಗಳಿಸಿದ್ದ ಜೇಮಿ ಸ್ಮಿತ್ ಭಾರತದ ಗೆಲುವನ್ನ ಸ್ವಲ್ಪ ಸಮಯ ತಡೆದರು. ಈ ಇಬ್ಬರು 19.1 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿ 70 ರನ್ ಸೇರಿಸಿದರು. ಈ ಹಂತದಲ್ಲಿ ದಾಳಿಗೆ ಇಳಿದ ವಾಷಿಂಗ್ಟನ್ ಸುಂದರ್ ತಮ್ಮ 2ನೇ ಓವರ್ನಲ್ಲಿ ಬೆನ್ ಸ್ಟೋಕ್ಸ್ರನ್ನ ಎಲ್ಬಿ ಬಲೆಗೆ ಬೀಳಿಸಿದರು. ಈ ವಿಕೆಟ್ ಬೀಳುತ್ತಿದ್ದಂತೆ ಭಾರತಕ್ಕೆ ಗೆಲುವು ಖಚಿತವಾಯಿತು.
ನಂತರ ಬಂದ ಕ್ರಿಸ್ ವೋಕ್ಸ್, ಸ್ಮಿತ್ ಜೊತೆಗೂಡಿ 46 ರನ್ ಸೇರಿಸಿದರು. ಆದರೆ ಇಬ್ಬರು ಕೆಲವೇ ರನ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. 32 ಎಸೆತಗಳಲ್ಲಿ 7 ರನ್ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ಗೆ ಕ್ಯಾಚ್ ನೀಡಿದರು. 99 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ಗಳ ಸಹಿತ 88 ರನ್ಗಳಿಸಿದ್ದ ಜೇಮಿ ಸ್ಮಿತ್ ರನ್ನ ಆಕಾಶ್ ದೀಪ್ ತಮ್ಮ 5ನೇ ವಿಕೆಟ್ ಮೂಲಕ ಪೆವಿಲಿಯನ್ಗಟ್ಟಿದ್ದರು. 2 ರನ್ಗಳಿಸಿದ್ದ ಜೋಶ್ ಟಂಗ್ರನ್ನ ಜಡೇಜಾ ಔಟ್ ಮಾಡಿದರೆ, 48 ಎಸೆತಗಳಲ್ಲಿ 38 ರನ್ಗಳಿಸಿ ಭಾರತದ ಗೆಲುವುನ್ನ ಕೊಂಚ ಸಮಯ ತಡೆಹಿಡಿದಿದ್ದ ಬ್ರೈಡೆನ್ ಕಾರ್ಸ್ ಆಕಾಶ್ ದೀಪ್ ಬೌಲಿಂಗ್ನಲ್ಲಿ ನಾಯಕ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿ ಔಟ್ ಆದರು. ಈ ವಿಕೆಟ್ ಮೂಲಕ ಭಾರತ ತಂಡ ಎಡ್ಜ್ಬಾಸ್ಟನ್ ಮೈದಾನದಲ್ಲಿ 58 ವರ್ಷಗಳ ಬಳಿಕ ಮೊದಲ ಜಯ ಸಾಧಿಸಿತು. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಇಲ್ಲಿ ಆಡಿದ್ದ 8 ಪಂದ್ಯಗಳಲ್ಲಿ ಒಂದನ್ನ ಡ್ರಾ ಸಾಧಿಸಿದ್ದು, ಬಿಟ್ಟರೆ, ಉಳಿದ 7 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿತ್ತು.
July 06, 2025 9:42 PM IST