ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಪುರುಷರ ಕ್ರಿಕೆಟ್ ತಂಡ ‘ಐವರು’ ಎಡಗೈ ಬ್ಯಾಟ್ಸ್‌ಮನ್‌ಗಳೊಂದಿಗೆ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಜುಲೈ 23 ಬುಧವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಭಾರತದ ಪ್ಲೇಯಿಂಗ್-11 ಭಾಗವಾಗಿದ್ದಾರೆ.
ಇದಕ್ಕೂ ಮೊದಲು ಟೀಂ ಇಂಡಿಯಾ ಅನೇಕ ಸಂದರ್ಭಗಳಲ್ಲಿ ನಾಲ್ವರು ಎಡಗೈ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಆದ್ರೆ, ಪಂದ್ಯವೊಂದರಲ್ಲಿ ಐವರು ಎಡಗೈ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿರುವುದು ಇದೇ ಮೊದಲು. ಅಂದಹಾಗೆ, ಟೀಂ ಇಂಡಿಯಾ ತನ್ನ 592 ಪಂದ್ಯಗಳ ನಂತರ ಐವರು ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಪಂದ್ಯದಲ್ಲಿ ಆಡಲು ಅವಕಾಶ ನೀಡಿದೆ.
ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಕರುಣ್ ನಾಯರ್, ಗಾಯಾಳುಗಳಾದ ಆಕಾಶ್‌ದೀಪ್ ಹಾಗೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯವರು ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದು, ಇವರ ಸ್ಥಾನಕ್ಕೆ ಸಾಯಿ ಸುದರ್ಶನ್, ಅನ್ಶುಲ್ ಕಾಂಬೋಜ್ ಹಾಗೂ ಶಾರ್ದೂಲ್ ಠಾಕೂರ್ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ರಣಜಿ ಸೀಸನ್‌ನಲ್ಲಿ ಹಾಗೂ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಮಿಂಚಿದ್ದ 24 ವರ್ಷದ ಯುವ ವೇಗಿ ಅನ್ಶುಲ್ ಕಾಂಬೋಜ್ ಟೀಂ ಇಂಡಿಯಾದ ಪರ ಪದಾರ್ಪಣೆ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಒಂದು ಬದಲಾವಣೆ
ಇಂಗ್ಲೆಂಡ್ ತಂಡದಲ್ಲಿ ಕೂಡ ಒಂದು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಬಶೀರ್ ಬದಲಿಗೆ ಡಾಸನ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಲಾಗಿದೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಇಂಗ್ಲೆಂಡ್ ಮುಂದುವರೆಸಿದೆ. ಈ ನಡುವೆ ಶುಭ್‌ಮನ್ ಗಿಲ್ ಅವರು ಸತತ ನಾಲ್ಕು ಪಂದ್ಯಗಳಲ್ಲಿ ಒಮ್ಮೆ ಕೂಡ ಟಾಸ್ ಗೆಲ್ಲುವಲ್ಲಿ ಸಫಲರಾಗಿಲ್ಲ.
ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ವಿಕೀ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಅನ್ಶುಲ್ ಕಾಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ
ಇಂಗ್ಲೆಂಡ್ (ಪ್ಲೇಯಿಂಗ್ XI): ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೇಮೀ ಸ್ಮಿತ್(ವಿಕೀ), ಲಿಯಾಮ್ ಡಾಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.