Last Updated:
ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ 251/4 ರನ್ ಗಳಿಸಿದೆ. ಜೋ ರೂಟ್ 99 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.
ಗುರುವಾರ ಜುಲೈ 10ರಿಂದ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ (Lords) ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೂರನೇ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಆದ್ರೆ, ಆರಂಭದಲ್ಲೇ ನಾಯಕನ ನಿರೀಕ್ಷೆ ಉಲ್ಟಾಪಲ್ಟ ಆಯಿತು. ಮೊದಲ ಸೆಶನ್‌ನಲ್ಲಿ ಆರಂಭಿಕ ಬ್ಯಾಟರ್‌ಗಳಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ ಕ್ರಮವಾಗಿ 23 ಹಾಗೂ 18 ರನ್ ಗಳಿಸಿ ನಿತಿಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಆದ್ರೆ, ಜೋ ರೂಟ್ (Joe Root) ಅವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ದಿನದಾಂತ್ಯಕ್ಕೆ 251/4 ವಿಕೆಟ್ ಕಳೆದುಕೊಂಡಿದೆ.
ಮೊದಲ ಸೆಷನ್‌ನಲ್ಲಿ ಆರಂಭಿಕ ಆಟಗಾರರ ವೈಫಲ್ಯದಿಂದಾಗಿ ಹಿನ್ನಡೆ ಅನುಭವಿಸಿತು. ಆದ್ರೆ, ಎರಡೂ ಹಾಗೂ ಮೂರನೇ ಸೆಷನ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿತು. ಅದರಲ್ಲೂ ಓಲಿ ಪೋಪ್ ಹಾಗೂ ರೂಟ್ ಶತಕದ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಂತೆ ನೋಡಿಕೊಂಡರು. ಈ ಜೋಡಿ ಮೂರನೇ ವಿಕೆಟ್‌ಗೆ ಬರೋಬ್ಬರಿ 109 ರನ್‌ಗಳ ಜೊತೆಯಾಟ ಆಡಿದರು. ಬಳಿಕ 44 ರನ್ ಗಳಿಸಿದ್ದ ಓಲಿ ಪೋಪ್ ಜಡೇಜಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು.
ಆದ್ರೆ, ನಂತರ ಬಂದ ವಿಶ್ವದ ನಂ 1 ಬ್ಯಾಟರ್ ಹ್ಯಾರಿ ಬ್ರೂಕ್ ಕೇವಲ 11 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದ್ರೆ, ನಂತರ ಬಂದ ನಾಯಕ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ಮತ್ತೊಂದು ಅದ್ಭುತ ಜೊತೆಯಾಟ ಆಡಿದರು. ಆ ಮೂಲಕ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 251 ರನ್ ಗಳಿಸಲು ನೆರವಾದರು. ಸದ್ಯ 99 ರನ್ ಗಳಿಸಿರುವ ಜೋ ರೂಟ್ ಹಾಗೂ 39 ರನ್ ಗಳಿಸಿರುವ ಬೆನ್ ಸ್ಟೋಕ್ಸ್ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತದ ಪರ ನಿತಿಶ್ ರೆಡ್ಡ 2 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್ಪ್ರಿತ್ ಬುಮ್ರಾ ಹಾಗೂ ರವೀಂದ್ರ ಜಡೇಹಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಮೊದಲ ಸೆಶನ್‌ನಲ್ಲಿ 83ಕ್ಕೆ 2, ಎರಡನೇ ಸೆಶನ್ 70 ರನ್, ಮೂರನೇ ಸೆಶನ್ 98ಕ್ಕೆ 2 ವಿಕೆಟ್ ಕಳೆದುಕೊಂಡಿದೆ. ಎರಡನೇ ದಿನ ಎಷ್ಟು ರನ್ ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಈ ಪಂದ್ಯದಲ್ಲಿ ಪ್ರಮುಖ ವಿಶೇಷವೆಂದರೆ ಇಂಗ್ಲೆಂಡ್ ಅಂದ್ರೆ ನೆನಪಾಗುವುದು ಬಾಜ್‌ಬಾಲ್. ಆದ್ರೆ, ಇಂದಿನ ಪಂದ್ಯದಲ್ಲಿ ಭಾರತದ ಬೌಲರ್ ವಿರುದ್ಧ ಯಾವುದೇ ಇಂಗ್ಲೀಷ್ ಬ್ಯಾಟರ್ ಕೂಡ ಬಿಗ್ ಶಾಟ್ ಮಾಡಲು ಪ್ರಯತ್ನಿಸಲಿಲ್ಲ. ಬದಲಾಗಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಓಲಿ ಪೋಪ್, ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಸೇರಿ ಪ್ರತಿಯೊಬ್ಬರು ಬಾಜ್‌ಬಾಲ್ ಮರೆತು ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು.
July 10, 2025 11:19 PM IST