India vs England: ಸಚಿನ್-ಆಂಡರ್ಸನ್ ಟ್ರೋಫಿಯ 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಇದರಲ್ಲಿ ಆತಿಥೇಯ ಇಂಗ್ಲೆಂಡ್ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ನಡುವೆ 4ನೇ ಟೆಸ್ಟ್ ಜುಲೈ 23ರಿಂದ ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ನಡೆಯಲಿದೆ. ಈ ಪಂದ್ಯದಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಬಿಗ್ ಸ್ಕೋರ್ ಕಲೆಹಾಕಲು ವಿಫಲವಾಗಿರುವ ಕನ್ನಡಿಗ ಕರುಣ್ ನಾಯರ್ (Karun Nair) ಆಡ್ತಾರಾ? ಇಲ್ವಾ? ಎಂಬ ಪ್ರಶ್ನೆಗೆ ಸ್ವತಃ ಗಿಲ್ (Shubhman Gill) ಅವರೇ ಉತ್ತರ ನೀಡಿದ್ದಾರೆ.
24 ವರ್ಷದ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಅವರನ್ನು ಸೋಮವಾರ (ಜುಲೈ 21) ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ 2 ಪಂದ್ಯಗಳಿಗೆ ಭಾರತದ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಯುವ ಆಟಗಾರ ಬುಧವಾರ (ಜುಲೈ 23) ತಮ್ಮ ಮೊದಲ ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತದ ಟೆಸ್ಟ್ ನಾಯಕ ಶುಭಮನ್ ಗಿಲ್ ಪ್ರಕಾರ, ಇಲ್ಲಿಯವರೆಗೆ ಆಡಿರುವ 24 ಪ್ರಥಮ ದರ್ಜೆ ಪಂದ್ಯಗಳಲ್ಲಿ 79 ವಿಕೆಟ್‌ಗಳನ್ನು ಹೊಂದಿರುವ ಕಾಂಬೋಜ್, ಮ್ಯಾಂಚೆಸ್ಟರ್‌ನಲ್ಲಿ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಶುಭ್ಮನ್ ಗಿಲ್ ಮಾತನಾಡಿ, “ನಾವು ಕಾಂಬೋಜ್ ಅವರ ಕೌಶಲ್ಯವನ್ನು ನೋಡಿದ್ದೇವೆ, ಅವರು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ನಂಬಿಕೆ ನಮಗಿದೆ. ಕಾಂಬೋಜ್ ಜುಲೈ 23ರಂದು ಪಾದಾರ್ಪಣೆ ಮಾಡುವ ಸನಿಹದಲ್ಲಿದ್ದಾರೆ. ಕಾಂಬೋಜ್ ಹಾಗೂ ಪ್ರಸಿದ್ಧ್ ಕೃಷ್ಣ ಕೂಡ ರೇಸ್ನಲ್ಲಿದ್ದು, ಯಾರು ಪ್ಲೇಯಿಂಗ್ XI ನಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ” ಎಂದು ಅವರು ತಿಳಿಸಿದರು.
ಕಳೆದ ವರ್ಷ ರೋಹ್ಟಕ್‌ನಲ್ಲಿ ಕೇರಳ ವಿರುದ್ಧ ಹರಿಯಾಣ ಪರ ರಣಜಿ ಟ್ರೋಫಿ ಪಂದ್ಯದ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸುದ್ದಿಯಾಗಿದ್ದ ಕಾಂಬೋಜ್, ಕೊನೆಯ ಬಾರಿಗೆ ಜೂನ್ 2025 ರಲ್ಲಿ ಇಂಗ್ಲೆಂಡ್ ಎ ವಿರುದ್ಧ ಭಾರತ ಎ ಪರ ರೆಡ್-ಬಾಲ್ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ, ಕರ್ನಾಲ್ ಮೂಲದ ವೇಗಿ ನಾರ್ಥಾಂಪ್ಟನ್‌ನಲ್ಲಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು. ಬೌಲಿಂಗ್ನಲ್ಲಿ4 ವಿಕೆಟ್‌ಗಳನ್ನು ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 51 ರನ್‌ಗಳನ್ನು ಗಳಿಸಿದ್ದರು.
ಮಾತ್ರವಲ್ಲ, ಕಾಂಬೋಜ್ ಜೊತೆಗೆ, ರಿಷಭ್ ಪಂತ್ ಮ್ಯಾಂಚೆಸ್ಟರ್‌ನಲ್ಲಿ ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ ಎಂದು ಗಿಲ್ ದೃಢಪಡಿಸಿದರು. ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂದು ಗಿಲ್ ಹೇಳಿದರು.
ಸರಣಿಯಲ್ಲಿ ದೊಡ್ಡ ಸ್ಕೋರ್‌ಗಳನ್ನು ದಾಖಲಿಸಲು ಹೆಣಗಾಡುತ್ತಿದ್ದರೂ ಸಹ, ಭಾರತದ ನಾಯಕ ಕರುಣ್ ನಾಯರ್ ಅವರನ್ನು ಬೆಂಬಲಿಸಿದ್ದಾರೆ. ಅವರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆಂದು ನಾವು ಭಾವಿಸುತ್ತೇವೆ. ಮೊದಲ ಪಂದ್ಯದಲ್ಲಿ ಅವರು ತಮ್ಮ ಸ್ಥಾನದಲ್ಲಿ ಆಡಲಿಲ್ಲ. ಆದ್ರೆ, ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಮ್ಮೆ ಅವರು 50+ ರನ್ ಗಳಿಸಿ ಫಾರ್ಮ್ಗೆ ಮರಳಿದರೆ ಸಾಕು ಅವರು ತಮ್ಮ ಇನ್ನಿಂಗ್ಸ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು.
July 22, 2025 8:26 PM IST