4ನೇ ದಿನದಂತ್ಯಕ್ಕೆ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಸಿದ್ದ ಇಂಗ್ಲೆಂಡ್ ತಂಡ ಇಂದು 90 ಒವರ್ಗಳಲ್ಲಿ 350 ರನ್ಗಳಿಸಬೇಕಿತ್ತು. 5ನೇ ದಿನ ಬ್ಯಾಟಿಂಗ್ ಆರಂಭಿಸಿದ ಬೆನ್ ಡಕೆಟ್ ಹಾಗೂ ಕ್ರಾಲೆ ಮೊದಲ ವಿಕೆಟ್ ಜೊತೆಯಾಟದಲ್ಲಿ ವಿಶ್ವದಾಖಲೆಯ 188 ರನ್ಗಳಿಸಿದರು. ಬೆನ್ ಡಕೆಟ್ 170 ಎಸೆತಗಳಲ್ಲಿ 21 ಬೌಂಡರಿ, 1 ಸಿಕ್ಸರ್ ಜೊತೆಗೆ 149 ರನ್ಗಳಿಸಿದರೆ, ಕ್ರಾಲೆ 126 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 65 ರನ್ಗಳಿಸಿದರು. ಪ್ರಸಿಧ್ ಕೃಷ್ಣ ಕ್ರಾಲೆ ವಿಕೆಟ್ ಪಡೆದು ಭಾರತಕ್ಕೆ ಮೊದಲ ಬ್ರೇಕ್ ನೀಡಿದರು.
ಕ್ರಾಲೆ ವಿಕೆಟ್ ನಂತರ ಬಂದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಒಲಿ ಪೋಪ್ ಕೇವಲ 8 ರನ್ಗಳಿಸಿ ಕೃಷ್ಣ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ರೂ ಹಾಗೂ ಡಕೆಟ್ 3ನೇ ವಿಕೆಟ್ ಜೊತೆಯಾಟದಲ್ಲಿ 47 ರನ್ಗಳ ಜೊತೆಯಾಟ ನಡೆಸಿದರು. ಅಪಾಯಕಾರಿಯಾಗಿದ್ದ ಬೆನ್ ಡಕೆಟ್ ಜೊತೆಗೆ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್(0) ರನ್ನ ಶಾರ್ದೂಲ್ ಸತತ 2 ಎಸೆತಗಳಲ್ಲಿ ಪೆವಿಲಿಯನ್ಗಟ್ಟಿ ಮತ್ತೊಂದು ಬ್ರೇಕ್ ತಂದುಕೊಟ್ಟಿದ್ದರು.
ಆದರೆ ಜೋ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ದಿಢೀರ್ ಕುಸಿತವನ್ನ ತಡೆದರು. ಇವರಿಬ್ಬರು 49 ರನ್ಗಳ ಜೊತೆಯಾಟ ನಡೆಸುವ ಮೂಲಕ ತಂಡವನ್ನು ಗೆಲುವಿನ ಸನಿಹ ತಂದರು. ಬೆನ್ ಸ್ಟೋಕ್ಸ್ 51 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 33 ರನ್ಗಳಿಸಿ ಜಡೇಜಾ ಬೌಲಿಂಗ್ನಲ್ಲಿ ಗಿಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಸ್ಟೋಕ್ಸ್ ವಿಕೆಟ್ ಕಳೆದುಕೊಂಡಾಗ ಇಂಗ್ಲೆಂಡ್ ಗೆಲುವಿಗೆ 69 ರನ್ಗಳ ಅಗತ್ಯವಿತ್ತು. ಈ ಮೊತ್ತವನ್ನು ಜೋ ರೂಟ್ ಹಾಗೂ ಜೇಮೀ ಸ್ಮಿತ್ ಇಬ್ಬರು ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿ ಯಶಸ್ವಿಯಾಗಿ ಚೇಸ್ ಪೂರ್ಣಗೊಳಿಸಿ ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಟ್ಟರು. ರೂಟ್ 84 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಅಜೇಯ 53 ರನ್ಗಳಿಸಿದರೆ, ಜೇಮೀ ಸ್ಮಿತ್ 55 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಜೊತೆಗೆ ಅಜೇಯ 44 ರನ್ಗಳಿಸಿದರು.
ಸ್ಕೋರ್ ವಿವರ
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 113 ಓವರ್ಗಳಲ್ಲಿ 471 ರನ್ಗಳಿಸಿತ್ತು. ಯಶಸ್ವಿ ಜೈಸ್ವಾಲ್(101), ನಾಯಕ ಶುಭ್ಮನ್ ಗಿಲ್(147), ರಿಷಭ್ ಪಂತ್ (134) ಶತಕ ಸಿಡಿಸಿದರೆ, ಕೆಎಲ್ ರಾಹುಲ್ 42 ರನ್ಗಳಿಸಿದ್ದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 66ಕ್ಕೆ4, ಜೋಶ್ ಟಂಗ್ 86ಕ್ಕೆ4 ವಿಕೆಟ್ ಪಡೆದು ಮಿಂಚಿದ್ದರು.
ನಂತರ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 100.4 ಓವರ್ಗಳಲ್ಲಿ 465 ರನ್ಗಳಿಸಿತ್ತು. ಒಲಿ ಪೋಪ್ (106) ಶತಕ, ಹ್ಯಾರಿ ಬ್ರೂಕ್ (66) ಹಾಗೂ ಬೆನ್ ಡಕೆಟ್(62) ಅರ್ಧಶತಕ ಸಿಡಿಸಿದ್ದರು. ಜೇಮಿ ಸ್ಮಿತ್ 40, ಕ್ರಿಸ್ ವೋಕ್ಸ್ 38, ರೂಟ್ 28 ಉಪಯುಕ್ತ ಕೊಡುಗೆ ನೀಡಿದ್ದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 83ಕ್ಕೆ5, ಮೊಹಮ್ಮದ್ ಸಿರಾಜ್ 122ಕ್ಕೆ2, ಪ್ರಸಿಧ್ ಕೃಷ್ಣ 128ಕ್ಕೆ 3 ವಿಕೆಟ್ ಪಡೆದಿದ್ದರು.
ನಂತರ 6 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಸಿಡಿಸಿದ ಶತಕದ ನೆರವಿನಿಂದ 96 ಓವರ್ಗಳಲ್ಲಿ 364 ರನ್ಗಳಿಸಿ ಇಂಗ್ಲೆಂಡ್ಗೆ 371 ರನ್ಗಳ ಗುರಿ ನೀಡಿತ್ತು. ಇಂಗ್ಲೆಂಡ್ ಬೌಲರ್ಗಳ ಪೈಕಿ ಬ್ರೈಡನ್ ಕಾರ್ಸ್ 80ಕ್ಕೆ3, ಜೋಶ್ ಟಂಗ್ 72ಕ್ಕೆ3, ಶೋಯಭ್ ಬಶೀರ್ 90ಕ್ಕೆ2, ಬೆನ್ ಸ್ಟೋಕ್ಸ್ 47ಕ್ಕೆ1 ವಿಕೆಟ್ ಪಡೆದಿದ್ದರು.
371ರನ್ಗಳ ಗುರಿಯನ್ನ ಇಂಗ್ಲೆಂಡ್ ತಂಡ ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು. ಬೆನ್ ಡಕೆಟ್ (149) ಶತಕ ಸಿಡಿಸಿದರೆ, ಜಾಕ್ ಕ್ರಾಲೆ 65 ರನ್ ಹಾಗೂ ಜೋ ರೂಟ್ ಅಜೇಯ 53, ಜೇಮಿ ಸ್ಮಿತ್ ಅಜೇಯ 44 ರನ್ಗಳಿಸಿ ಗೆಲುವಿನ ರೂವಾರಿಯಾದರು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 24, 2025 10:58 PM IST