Last Updated:
ಜೋ ರೂಟ್ ಎರಡನೇ ದಿನದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಶತಕ ಸಿಡಿಸಿ ಮಿಂಚಿದರು. ಮಾತ್ರವಲ್ಲ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ತಮ್ಮ 37 ನೇ ಶತಕವನ್ನು ಕೂಡ ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಿದರು.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ 99 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ್ (Joe Root) ಎರಡನೇ ದಿನದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಶತಕ ಸಿಡಿಸಿ ಮಿಂಚಿದರು. ಮಾತ್ರವಲ್ಲ ಟೆಸ್ಟ್ ಕ್ರಿಕೆಟ್ (Test Cricket) ವೃತ್ತಿಜೀವನದಲ್ಲಿ ತಮ್ಮ 37 ನೇ ಶತಕವನ್ನು ಕೂಡ ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಿದರು. ಆ ಮೂಲಕ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ಇದು ಭಾರತದ ವಿರುದ್ಧ ರೂಟ್ ಅವರ 11ನೇ ಶತಕ ಮತ್ತು ತವರಿನಲ್ಲಿ ಭಾರತದ ವಿರುದ್ಧ ದಾಖಲಾದ 8ನೇ ಶತಕವಾಗಿದೆ. ಆ ಮೂಲಕ ರೂಟ್ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ಭಾರತದ ವಿರುದ್ಧ ತವರಿನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. 34 ವರ್ಷದ ಅವರು ಈ ಹಿಂದೆ 2014 ರ ಸರಣಿಯಲ್ಲಿ ಭಾರತದ ವಿರುದ್ಧ 2 ಶತಕ, 2018 ರಲ್ಲಿ 1 ಶತಕ ಸಿಡಿಸಿದ್ದರು. 2021-22 ರ ಭಾರತ ಪ್ರವಾಸದಲ್ಲಿ 4 ಶತಕ ಸಿಡಿಸಿದ್ದರು. ಈ ಸರಣಿಯಲ್ಲೂ ಇಂದು ಶತಕ ಸಿಡಿಸುವ ಮೂಲಕ ದಾಖಲೆ ಬರೆದರು.
ಒಟ್ಟಾರೆಯಾಗಿ, ರೂಟ್ ಟೆಸ್ಟ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 8 ಶತಕಗಳನ್ನು ಗಳಿಸಿದ ಎರಡನೇ ಆಟಗಾರನಾಗಿ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಬ್ರೇಕ್ ಮಾಡಿದರು. ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದಲ್ಲಿ 8 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಪಾಂಟಿಂಗ್ ಮತ್ತು ಸ್ಮಿತ್ ತವರಿನಲ್ಲಿ ಆಸ್ಟ್ರೇಲಿಯಾ ಪರ ಭಾರತದ ವಿರುದ್ಧ 7 ಶತಕಗಳನ್ನು ದಾಖಲಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆಯಾಗಿ, ಇದು ಭಾರತದ ವಿರುದ್ಧ ರೂಟ್ ಅವರ 11 ನೇ ಟೆಸ್ಟ್ ಶತಕವಾಗಿದ್ದು, ಏಷ್ಯನ್ ಜೈಂಟ್ಸ್ ವಿರುದ್ಧ ಆಟಗಾರನೊಬ್ಬ ಗಳಿಸಿದ ಜಂಟಿ ಗರಿಷ್ಠ ಶತಕವಾಗಿದೆ. ರೂಟ್ ತವರಿನಲ್ಲಿ ಸಿಡಿಸಿದ 22 ನೇ ಟೆಸ್ಟ್ ಶತಕ ಇದಾಗಿದೆ. ಇದು ಭಾರತದ ಸಚಿನ್ ತೆಂಡುಲ್ಕರ್ ಮತ್ತು ಶ್ರೀಲಂಕಾದ ಕುಮಾರ್ ಸಂಗಕ್ಕಾರ ಜೊತೆಗೆ ತವರಿನಲ್ಲಿ ಆಟಗಾರನೊಬ್ಬ ಸಿಡಿಸಿದ ಜಂಟಿ 2ನೇ ಸ್ಥಾನವಾಗಿದೆ. ಆದ್ರೆ, ಮಹೇಲಾ ಜಯವರ್ಧನೆ (ಶ್ರೀಲಂಕಾ), ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) ಮತ್ತು ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) ಇವರುಗಳು ತಲಾ 23 ಶತಕ ಸಿಡಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಲಾರ್ಡ್ಸ್‌ನಲ್ಲಿ ಶತಕ ಸಿಡಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು, ಅಂತ ಕ್ರಿಕೆಟ್ ಕಾಶಿಯಲ್ಲಿ ಜೋ ರೂಟ್ ಅವರು 8 ಶತಕಗಳನ್ನು ಸಿಡಿಸುವ ಮೂಲಕ ಐತಿಹಾಸಿಕ ಸ್ಥಳದಲ್ಲಿ ಅತೀ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಮತ್ತಷ್ಟು ಬಿಗಿಗೊಳಿಸಿದರು. ಇದಕ್ಕೂ ಮೊದಲು ಲಾರ್ಡ್ಸ್‌ನಲ್ಲಿ ಗ್ರಹಾಂ ಗೂಚ್ (6 ಶತಕ) ಸಿಡಿಸಿದ್ದಾರೆ.
ಇನ್ನೂ ರೂಟ್ ಲಾರ್ಡ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಶತಕಗಳ ಸಂಖ್ಯೆಯನ್ನು ಮೀರಿಸಿದ್ದಾರೆ. ರಾಹುಲ್ ದ್ರಾವಿಡ್ ಹಾಗೂ ಸ್ಟೀವ್ ಸ್ಮಿತ್ ತಲಾ 36 ಶತಕ ಸಿಡಿಸಿದ್ದಾರೆ. ಆದ್ರೆ, ಇಂದಿನ ಶತಕದ ಮೂಲಕ ಜೋ ರೂಟ್ ಟೆಸ್ಟ್‌ನಲ್ಲಿ 37 ಶತಕ ಸಿಡಿಸಿದ ಸಾಧನೆ ಮಾಡಿದರು.
July 11, 2025 5:08 PM IST