Last Updated:
ಸಚಿನ್-ಆಂಡರ್ಸನ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಪ್ರಮುಖ ಮೂರು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ.
ಸಚಿನ್-ಆಂಡರ್ಸನ್ (Sachin – Anderson Trophy) ಟ್ರೋಫಿಯ 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಇದರಲ್ಲಿ ಆತಿಥೇಯ ಇಂಗ್ಲೆಂಡ್ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇಂದಿನಿಂದ (ಜುಲೈ 23) ನಾಲ್ಕನೇ ಹಾಗೂ ಭಾರತದ ಪಾಲಿನ ಅತೀ ಮುಖ್ಯವಾದ ಪಂದ್ಯ ಆರಂಭವಾಗಿದ್ದು, ಈ ಪಂದ್ಯದಲ್ಲೂ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ನಾಯಕನಾಗಿ ಶುಭ್‌ಮನ್ ಗಿಲ್ (Shubhman Gill) ಸತತ ನಾಲ್ಕನೇ ಪಂದ್ಯದಲ್ಲೂ ಟಾಸ್ ಸೋತಿದ್ದಾರೆ. ಮಾತ್ರವಲ್ಲ, ಟೀಂ ಇಂಡಿಯಾದಲ್ಲಿ (Team India) ಮೂರು ಪ್ರಮುಖ ಬದಲಾವಣೆಗಳನ್ನು ಕೂಡ ಮಾಡಲಾಗಿದೆ.
ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಕರುಣ್ ನಾಯರ್, ಗಾಯಾಳುಗಳಾದ ಆಕಾಶ್‌ದೀಪ್ ಹಾಗೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯವರು ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದು, ಇವರ ಸ್ಥಾನಕ್ಕೆ ಸಾಯಿ ಸುದರ್ಶನ್, ಅನ್ಶುಲ್ ಕಾಂಬೋಜ್ ಹಾಗೂ ಶಾರ್ದೂಲ್ ಠಾಕೂರ್ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ರಣಜಿ ಸೀಸನ್‌ನಲ್ಲಿ ಹಾಗೂ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಮಿಂಚಿದ್ದ 24 ವರ್ಷದ ಯುವ ವೇಗಿ ಅನ್ಶುಲ್ ಕಾಂಬೋಜ್ ಟೀಂ ಇಂಡಿಯಾದ ಪರ ಪದಾರ್ಪಣೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಕೂಡ ಒಂದು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಬಶೀರ್ ಬದಲಿಗೆ ಡಾಸನ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಲಾಗಿದೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಇಂಗ್ಲೆಂಡ್ ಮುಂದುವರೆಸಿದೆ. ಈ ನಡುವೆ ಶುಭ್‌ಮನ್ ಗಿಲ್ ಅವರು ಸತತ ನಾಲ್ಕು ಪಂದ್ಯಗಳಲ್ಲಿ ಒಮ್ಮೆ ಕೂಡ ಟಾಸ್ ಗೆಲ್ಲುವಲ್ಲಿ ಸಫಲರಾಗಿಲ್ಲ.
ಉಭಯ ತಂಡಗಳ ಪ್ಲೇಯಿಂಗ್-11
ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ವಿಕೀ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಅನ್ಶುಲ್ ಕಾಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ
ಇಂಗ್ಲೆಂಡ್ (ಪ್ಲೇಯಿಂಗ್ XI): ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೇಮೀ ಸ್ಮಿತ್(ವಿಕೀ), ಲಿಯಾಮ್ ಡಾಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
July 23, 2025 3:12 PM IST