ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) ಈಗಾಗಲೇ 1-2ರಿಂದ ಹಿನ್ನಡೆ ಅನುಭವಿಸುತ್ತಿದೆ. ಈ ನಡುವೆ 4ನೇ ಪಂದ್ಯವನ್ನು ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ (Jasprit Bumrah) ಅವರು ಆಡ್ತಾರಾ ಇಲ್ವಾ ಎಂಬ ಗೊಂದಲ ಕಾಡಲಾರಂಭಿಸಿದೆ. ಆದ್ರೆ, ಅನೇಕ ಕ್ರಿಕೆಟ್ ಪಂಡಿತರ ಅಭಿಪ್ರಾಯದ ಪ್ರಕಾರ ಬುಮ್ರಾ ಮುಂದಿನ ಪಂದ್ಯದಲ್ಲಿ ಆಡಲೇಬೇಕು ಎಂದಿದ್ದಾರೆ. ಅದಕ್ಕೆ ಕಾರಣ ಮೂರು ಪಂದ್ಯಗಳಲ್ಲಿ ಈಗಾಗಲೇ ಹಿನ್ನಡೆ ಅನುಭವಿಸುತ್ತಿರುವುದು.
2024-25ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬುಮ್ರಾ ಬೆನ್ನು ನೋವಿಗೆ ಒಳಗಾದ ನಂ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಅವರಿಗೆ ಹೆಚ್ಚಿನ ಒತ್ತಡ ನೀಡಬಾರದು ಎಂದು ನಿರ್ಧರಿಸಿದೆ. ಅದರ ಭಾಗವಾಗಿಯೇ ಬುಮ್ರಾ ಅವರು, 2ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಮಾತ್ರವಲ್ಲ, ಅವರು ಟೂರ್ನಿ ಆರಂಭದಲ್ಲೇ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ ಎಂದು ಮಾಹಿತಿ ತಿಳಿಸಿದ್ದರು.
ಸದ್ಯ, ವಿಶ್ವದ ಅಗ್ರಕ್ರಮಾಂಕದ ಬೌಲರ್ ಆಗಿರುವ ಬುಮ್ರಾ ಅವರು ಬ್ಯಾಟರ್ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಮಾತ್ರವಲ್ಲ ಭಾರತಕ್ಕೆ ಓವಲ್‌ಗಿಂತ ಓಲ್ಡ್ ಟ್ರಾಫರ್ಡ್‌ನಲ್ಲಿ ಅವರ ಸೇವೆ ಹೆಚ್ಚು ಅಗತ್ಯವಿದೆ. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸರಣಿಯನ್ನು ಜೀವಂತವಾಗಿರಿಸಬೇಕೆಂದರೆ ನಾಲ್ಕನೇ ಪಂದ್ಯದ ಗೆಲುವು ಅನಿವಾರ್ಯ ಎನ್ನಲಾಗಿದೆ. ಹಾಗಾಗಿ ಬುಮ್ರಾ ಮುಂದಿನ ಪಂದ್ಯ ಆಡುವುದು ಮುಖ್ಯವಾಗಿದೆ. ಹಾಗಿದ್ರೆ, ಅವರು ಮುಂದಿನ ಪಂದ್ಯವನ್ನು ಯಾವ ಕಾರಣಕ್ಕೆ ಆಡಬೇಕು ಎಂಬುದನ್ನು ಒಂದೊಂದಾಗಿ ನೋಡೋಣ ಬನ್ನಿ.
ಗೆಲ್ಲಲೇಬೇಕಾದ ಒತ್ತಡ
ಹೌದು, ಟೀಂ ಇಂಡಿಯಾ ಸರಣಿಯಲ್ಲಿ 1-2ರಿಂದ ಹಿನ್ನಡೆಯ ಅನುಭವಿಸುತ್ತಿರುವುದರಿಂದ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದುವೇಳೆ ಪಂದ್ಯ ಸೋತರೆ ಸರಣಿಯನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಬುಮ್ರಾ ಅವರ ಪ್ರಭಾವ
ಸದ್ಯ, ಬುಮ್ರಾ ಅವರು ವಿಶ್ವದ ಅಗ್ರಮಾನ್ಯ ಬೌಲರ್ ಆಗಿದ್ದಾರೆ. ಅವರನ್ನು ಕಂಡರೆ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ಗಳು ಕೂಡ ಭಯಪಡುವಂತಹ ಸ್ಥಿತಿ ಇದೆ. ಮಾತ್ರವಲ್ಲ, ಇವರು ಭಾರತ ಸೇರಿದಂತೆ ವಿದೇಶಿ ಪಿಚ್ಗಳಲ್ಲಿ ಕೂಡ ತಮ್ಮನ್ನು ತಾವು ಪರಿವರ್ತನೆ ಮಾಡಿಕೊಂಡು ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಸರಣಿಯಲ್ಲಿ ಅವರು ಆಡಿರುವ 2 ಪಂದ್ಯಗಳಲ್ಲೇ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೂರು ಟೆಸ್ಟ್‌ಗಳಿಂದ 13 ವಿಕೆಟ್‌ಗಳನ್ನು ಪಡೆದಿರುವ ಮೊಹಮ್ಮದ್ ಸಿರಾಜ್ ನಂತರದ ಸ್ಥಾನಲ್ಲಿದ್ದಾರೆ.
ಸಾಕಷ್ಟು ವಿಶ್ರಾಂತಿ?
ಬುಮ್ರಾ ಅವರು, ಎರಡನೇ ಪಂದ್ಯದ ವಿಶ್ರಾಂತಿಯ ಬಳಿಕ ಮೂರನೇ ಪಂದ್ಯ ಆಡಿದ್ದರು. ಆದ್ರೇ ಇಲ್ಲೂ ಅವರಿಗೆ ಬರೋಬ್ಬರಿ 8 ದಿನಗಳ ಲಾಂಗ್ ಗ್ಯಾಪ್ ಇರುವುದರಿಂದ ಅವರು ಸಾಕಷ್ಟು ವಿಶ್ರಾಂತಿ ಪಡೆಯಬಹುದು. ಇದು ಬುಮ್ರಾ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಒಂದು ವೇಳೆ ಬುಮ್ರಾ 4ನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದು ಭಾರತ ಸೋತರೆ, ಸರಣಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಬುಮ್ರಾ ಅವರನ್ನು ಅಂತಿಮ ಪಂದ್ಯದಲ್ಲಿ ಆಡಿಸುವ ಏಕೈಕ ಉದ್ದೇಶವೆಂದರೆ ತಂಡದ ಗೆಲುವು ಆಗಿದೆ. ಅಷ್ಟೇ ಅಲ್ಲ, WTCಯಲ್ಲಿ ಕೆಲವು ಅಂಕಗಳನ್ನು ಸಂಪಾದಿಸಬಹುದು. ಬುಮ್ರಾ ಇಲ್ಲದೆ ತಂಡ ಗೆಲ್ಲಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ, ಆದರೆ ಅವರ ಉಪಸ್ಥಿತಿಯು ಖಂಡಿತವಾಗಿಯೂ ತಂಡಕ್ಕೆ ಅನಿವಾರ್ಯವಾಗಿದೆ.
July 17, 2025 4:01 PM IST