Last Updated:
ಭಾರತ ತಂಡ ವೈಭವ್ ಸೂರ್ಯವಂಶಿ ಮತ್ತು ವಿಹಾನ್ ಮಲ್ಹೋತ್ರಾ ಅವರ ಶತಕಗಳ ಸಹಾಯದಿಂದ 50 ಓವರ್ಗಳಲ್ಲಿ 363 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 45.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 308 ರನ್ಗಳಿಗೆ ಆಲೌಟ್ ಆಗುವ ಮೂಲಕ 55 ರನ್ಗಳಿಂದ ಸೋಲು ಕಂಡಿತು.
ಭಾರತ ಮತ್ತು ಇಂಗ್ಲೆಂಡ್ನ ಅಂಡರ್-19 ತಂಡಗಳ ನಡುವೆ ವೋರ್ಸೆಸ್ಟರ್ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯ ಭಾರತ ತಂಡ ಅಮೋಘ ಪ್ರದರ್ಶನ ತೋರಿ 55 ರನ್ಗಳ ಗೆಲುವು ಸಾಧಿಸಿ ಇನ್ನು 1 ಪಂದ್ಯ ಉಳಿದಿರುವಂತೆ 5 ಪಂದ್ಯಗಳ ಸರಣಿಯನ್ನ 3-1ರಲ್ಲಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ, ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತ ತಂಡ ವೈಭವ್ ಸೂರ್ಯವಂಶಿ ಮತ್ತು ವಿಹಾನ್ ಮಲ್ಹೋತ್ರಾ ಅವರ ಶತಕಗಳ ಸಹಾಯದಿಂದ 50 ಓವರ್ಗಳಲ್ಲಿ 363 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 45.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 308 ರನ್ಗಳಿಗೆ ಆಲೌಟ್ ಆಗುವ ಮೂಲಕ 55 ರನ್ಗಳಿಂದ ಸೋಲು ಕಂಡಿತು.
ಭಾರತ ನೀಡಿದ್ದ 364 ರನ್ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ಕಿರಿಯರ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್ ಜೊತೆಯಾಟದಲ್ಲಿ 104 ರನ್ಗಳನ್ನ ಸೇರಿಸಿತ್ತು. ಈ ಸಂದರ್ಭದಲ್ಲಿ 41 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ಗಳಿಸಿದ್ದ ಜೋಶೆಫ್ ಮೋರ್ಸ್ ವಿಕೆಟ್ ಪಡೆಯುವ ಮೂಲಕ ನಮನ್ ಪುಷ್ಪಕ್ ವಿಕೆಟ್ ಪಡೆದು ಬ್ರೇಕ್ ನೀಡಿದರು. ನಂತರ ಬಂದ ಬೆನ್ ಮೇಯ್ಸ್ ಕೂಡ ಪುಷ್ಪಕ್ ಬೌಲಿಂಗ್ನಲ್ಲಿ ಗೋಲ್ದನ್ ಡಕ್ ಆದರು. ನಂತರ 28 ರನ್ಗಳ ಅಂತರದಲ್ಲಿ ಮತ್ತೊಬ್ಬ ಆರಂಭಿಕ ಬೆಸ್ ಡಾಕಿನ್ಸ್ ಕೂಡ ಔಟ್ ಆದರು. 59 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 67 ರನ್ಗಳಿಸಿ ಕನಿಷ್ಕ್ ಚೌಹಾಣ್ಗೆ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟರ್ ಆ್ಯಂಡ್ರ್ಯೂ ಫ್ಲಿಂಟಾಫ್ ಮಗ ರಾಕಿ ಫ್ಲಿಂಟಾಫ್ ಹಾಗೂ ನಾಯಕ ಥಾಮಸ್ ರೆವ್ 60 ರನ್ಗಳ ಜೊತೆಯಾಟ ನಡೆಸಿದರು. ಆದರೆ ಡೇಂಜರಸ್ ರೆವ್ರನ್ನ ಯುಧಾಜಿತ್ ಗುಹಾ ಔಟ್ ಮಾಡುವ ಮೂಲಕ ಭಾರತಕ್ಕೆ ಗೆಲುವು ಖಚಿತಗೊಳಿಸಿದರು. ಫ್ಲಿಂಟಾಫ್ ಕೊನೆಯವರೆಗೂ ಹೋರಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ರಾಕಿ ಫ್ಲಿಂಟಾಫ್ 91 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ಗಳೊಂದಿಗೆ 107 ರನ್ಗಳಿಸಿ 9ನೇಯವರಾಗಿ ಔಟ್ ಆದರು.
ಜೇಮ್ಸ್ ಇಸೆಬೆಲ್ (2),ರಾಲ್ಫಿ ಆಲ್ಬರ್ಟ್ (3), ಸಬಾಸ್ಟಿಯನ್ ಮಾರ್ಗನ್ (8), ಜಾಕ್ ಹೋಮ್ (12), ತಜೀಮ್ ಚೌಧರಿ ಅಲಿ (13) ಭಾರತ ತಂಡದ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾಗದೆ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಭಾರತದ ಪರ ನಮನ್ ಪುಷ್ಪಕ್ 63ಕ್ಕೆ3, ಆಂಬ್ರಿಸ್ ಆರ್ ಎಸ್ 55ಕ್ಕೆ 2, ಕನಿಷ್ಕ್ ಚೌಹಾಣ್ 54ಕ್ಕೆ1, ದಿಪೇಶ್ ದೇವೇಂದ್ರನ್ 65ಕ್ಕೆ1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇನ್ನು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಹಾಗೂ ವಿಹಾನ್ ಮೆಲ್ಹೋತ್ರ ಶತಕ ಸಿಡಿಸಿ ಬೃಹತ್ ಮೊತ್ತ ದಾಖಲಿಸಿದರು. ವೈಭವ್ 52 ಎಸೆತಗಳಲ್ಲಿ ಶತಕ ಸಿಡಿಸಿ, ಯೂತ್ ಏಕದಿನ ಪಂದ್ಯದಲ್ಲಿ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. ಒಟ್ಟಾರೆ 78 ಎಸೆತಗಳಲ್ಲಿ 13 ಬೌಂಡರಿ, 10 ಸಿಕ್ಸರ್ಗಳ ಸಹಿತ 143 ರನ್ಗಳಿಸಿದರೆ, ವಿಹಾನ್ ಮೆಲ್ಹೋತ್ರ 121 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ಗಳ ಸಹಿತ 129 ರನ್ಗಳಿಸಿದರು. ಅಭಿಗ್ಯಾನ್ ಕುಂಡು (22) , ಯುಧಾಜಿತ್ ಗುಹಾ(15) ಹೊರೆತುಪಡಿಸಿ, ಆದರೆ ಉಳಿದ 7 ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ಪರ ಜ್ಯಾಕ್ ಹೋಮ್ 4 ವಿಕೆಟ್ ಮತ್ತು ಸೆಬಾಸ್ಟಿಯನ್ ಮಾರ್ಗನ್ 3 ವಿಕೆಟ್ ಪಡೆದರೆ, ಜೇಮ್ಸ್ ಮಿಂಟೊ ಮತ್ತು ಬೆನ್ ಮೇಸ್ ತಲಾ ಒಂದು ವಿಕೆಟ್ ಪಡೆದರು.
July 05, 2025 11:30 PM IST