INDW vs AUSW: ಭಾರತದ ವಿರುದ್ಧ ವೇಗದ ಶತಕ ಸಿಡಿಸಿ ಆಸೀಸ್ ಬ್ಯಾಟರ್! ಆಸ್ಟ್ರೇಲಿಯಾದಿಂದ ವಿಶ್ವದಾಖಲೆ ಮೊತ್ತ! | ಕ್ರೀಡೆ

INDW vs AUSW: ಭಾರತದ ವಿರುದ್ಧ ವೇಗದ ಶತಕ ಸಿಡಿಸಿ ಆಸೀಸ್ ಬ್ಯಾಟರ್! ಆಸ್ಟ್ರೇಲಿಯಾದಿಂದ ವಿಶ್ವದಾಖಲೆ ಮೊತ್ತ! | ಕ್ರೀಡೆ
ಆಸ್ಟ್ರೇಲಿಯಾ ಸ್ಫೋಟಕ ಆರಂಭ

ಆಸ್ಟ್ರೇಲಿಯಾ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ವಿಕೆಟ್​ಗೆ 4.2 ಓವರ್​ಗಳಲ್ಲಿ ಆಸ್ಟ್ರೇಲಿಯಾ 43 ರನ್ ಕಲೆಯಾಕಿತು. ನಾಯಕಿ ಅಲಿಸಾ ಹೀಲಿ 18 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 30ರನ್​ಗಳಿಸಿ ಸ್ಫೋಟಕ ಆರಂಭಕ್ಕೆ ಕಾರಣರಾದರು. ಹೀಲಿ ವಿಕೆಟ್ ಬಳಿಕ ಬಂದ ಎಲಿಸ್ ಪೆರ್ರಿ 2ನೇ ವಿಕೆಟ್ ಜೊತೆಯಾಟದಲ್ಲಿ ಯುವ ಆರಂಭಕ ಆಟಗಾರ್ತಿ ಜಾರ್ಜಿಯಾ ವೋಲ್ ಜೊತೆಗೂಡಿ 101 ಎಸೆತಗಳಲ್ಲಿ 107 ರನ್​ಗಳ ಜೊತೆಯಾಟ ನೀಡಿದರು. ವೋಲ್ 68 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 81 ರನ್​ಗಳಿಸಿ ಸ್ನೇಹ್ ರಾಣಾ ಬೌಲಿಂಗ್​​ನಲ್ಲಿ ಔಟ್ ಆದರು.

ಬೆತ್ ಮೂನಿ ವಿಧ್ವಂಸ

ನಂತರ 4ನೇ ಕ್ರಮಾಂಕದಲ್ಲಿ ಬಂದ ಬೆತ್ ಮೂನಿ ವಿಧ್ವಂಸ ಸೃಷ್ಟಿಸಿದರು. ಪ್ರತೀ ಓವರ್​ನಲ್ಲಿ ಬೌಂಡರಿ ಕಲೆಯಾಕಿದ ಮೂನಿ ಕೇವಲ ಕೇವಲ 57 ಎಸೆತಗಳಲ್ಲಿ ತಮ್ಮ 4ನೇ ODI ಶತಕವನ್ನು ಪೂರೈಸಿದರು. ಒಟ್ಟಾರೆ 75 ಎಸೆತಗಳಲ್ಲಿ 23 ಬೌಂಡರಿ, 1 ಸಿಕ್ಸರ್ ಸಹಿತ 138 ರನ್ ಗಳಿಸಿದ ಮೂನಿ, ಭಾರತದ ಬೌಲರ್‌ಗಳನ್ನು ಧೂಳಿಪಟ ಮಾಡಿದರು. ಈ ಶತಕವು ಮಹಿಳಾ ODI ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕವಾಗಿದೆ. ವೇಗದ ಶತಕದ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಲ್ಯಾನಿಂಗ್ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ 45 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಮೂನಿ 45ನೇ ಓವರ್​ನಲ್ಲಿ ರನ್​ ಔಟ್ ಆದರು. ಅವರು ಔಟ್ ಆಗುವ ಮುನ್ನ ಪೆರ್ರಿ ಜೊತೆಗೆ 72 ಎಸೆತಗಳಲ್ಲಿ 106 ರನ್, ಆಶ್ಲೀ ಗಾರ್ಡ್ನರ್​ ಜೊತೆಗೆ 46 ಎಸೆತಗಳಲ್ಲಿ 82, ತಹಿಲಾ ಮೆಕ್​ಗ್ರಾತ್ ಜೊತೆಗೆ 24 ಎಸೆತಗಳಲ್ಲಿ 40 ರನ್​ಗಳ ಜೊತೆಯಾಟ ನಡೆಸಿ ತಂಡ ಬೃಹತ್ ಮೊತ್ತಕ್ಕೆ ಕಾರಣರಾದರು.

ಅನುಭವಿ ಆಲ್​ರೌಂಡರ್​ ಎಲಿಸ್ ಪೆರ್ರಿ 72 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ಗಳ ಸಹಿತ 68 ರನ್, ಆಶ್ಲೀ ಗಾರ್ಡ್ನರ್ 24 ಎಸೆತಗಳಲ್ಲಿ 39, ತಹಿಲಾ ಮೆಕ್​ಗ್ರಾತ್ 14, ಜಾರ್ಜಿಯಾ ವೇರಮ್ 16, ಅಲನಾ ಕಿಂಗ್ 12 ರನ್ಗಳಿಸಿ ತಂಡ 400ರ ಗಡಿ ದಾಟಲು ನೆರವಾದರು.

ಭಾರತದ ಪರ ಅರುಂದತಿ ರೆಡ್ಡಿ 86 ರನ್​ ನೀಡಿ ದುಬಾರಿಯಾದರೂ 3 ವಿಕೆಟ್ ಪಡೆದರು, ರೇಣುಕಾ ಠಾಕೂರ್ 79ಕ್ಕೆ2, ಕ್ರಾಂತಿ ಗೌಡ್ 56ಕ್ಕೆ 1, ಸ್ನೇಹ್ ರಾಣಾ 68ಕ್ಕೆ1, ದೀಪ್ತಿ ಶರ್ಮಾ 75ಕ್ಕೆ2 ವಿಕೆಟ್ ಪಡೆದರು.

ಮಹಿಳಾ ODIಯಲ್ಲಿ ಅತಿ ವೇಗದ ಶತಕಗಳು

ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ) : 45 ಎಸೆತಗಳು, ನ್ಯೂಜಿಲೆಂಡ್ ವಿರುದ್ಧ, 2012

ಬೆತ್ ಮೂನಿ (ಆಸ್ಟ್ರೇಲಿಯಾ) : 57 ಎಸೆತಗಳು, ಭಾರತ ವಿರುದ್ಧ, 2025

ಕರೆನ್ ರೋಲ್ಟನ್ (ಆಸ್ಟ್ರೇಲಿಯಾ) : 57 ಎಸೆತಗಳು, ದಕ್ಷಿಣ ಆಫ್ರಿಕಾ ವಿರುದ್ಧ, 2000

ಸೋಫಿ ಡಿವೈನ್ (ನ್ಯೂಜಿಲೆಂಡ್) : 59 ಎಸೆತಗಳು, ಐರ್ಲೆಂಡ್ ವಿರುದ್ಧ, 2018

ಸ್ಮೃತಿ ಮಂಧಾನಾ (ಭಾರತ) : 70 ಎಸೆತಗಳು, ಐರ್ಲೆಂಡ್ ವಿರುದ್ಧ, 2025