Last Updated:
ಮಂಗಳೂರು ಖಾಸಗಿ ಶಾಲೆಯ ಶಿಕ್ಷಕಿಯರಾದ ಲಕ್ಷ್ಮೀ, ಆಶಾ ಪ್ರಿಯಾ, ಹವ್ಯಾ, ಸುಜಾತಾ, ಸೌಮ್ಯಾ “ಶಿಕ್ಷಣ ಸಾಥಿ” ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಠ, ಆಟ, ಕಲಿಕಾ ಸಾಮಗ್ರಿ ನೀಡುತ್ತಿದ್ದಾರೆ.
ಮಂಗಳೂರು: ಸರ್ಕಾರಿ ಶಾಲೆಗಳಲ್ಲಿ (Government School) ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಬಹಳಷ್ಟು ಸಮಸ್ಯೆಗಳು ತಲೆದೋರಿವೆ. ವಿದ್ಯಾರ್ಥಿಗಳ (Student) ಕಲಿಕಾ ಸಾಮರ್ಥ್ಯ ಚೆನ್ನಾಗಿದ್ದರೂ ಪ್ರಾಯೋಗಿಕ ಶಿಕ್ಷಣ ಹೇಳಿಕೊಳ್ಳುವಷ್ಟು ಚೆನ್ನಾಗಿರುವುದಿಲ್ಲ ಎಂಬ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರಿನ (Mangaluru) ಖಾಸಗಿ ಶಾಲೆಯ ಶಿಕ್ಷಕಿಯರ ತಂಡವೊಂದು ಸರ್ಕಾರಿ ಶಾಲೆಯ ಮಕ್ಕಳ (Children) ಕಲಿಕಾ ಮಟ್ಟ ಸುಧಾರಿಸುವ ಪಣ ತೊಟ್ಟಿದ್ದಾರೆ!
ಮಂಗಳೂರಿನ ಖಾಸಗಿ ಶಾಲೆಯ ಶಿಕ್ಷಕಿಯರಾದ ಲಕ್ಷ್ಮೀ, ಆಶಾ ಪ್ರಿಯಾ, ಹವ್ಯಾ, ಸುಜಾತಾ ಹಾಗೂ ಶಾಲೆಯ ಕಚೇರಿ ಸಿಬ್ಬಂದಿ ಸೌಮ್ಯಾ ಎಂಬವರು “ಶಿಕ್ಷಣ ಸಾಥಿ” ತಂಡ ಕಟ್ಟಿದ್ದಾರೆ. ಈ ಮೂಲಕ ಇವರು ಸರ್ಕಾರಿ ಶಾಲೆಯ ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಧಾಪುಗಾಲಿಟ್ಟಿದ್ದಾರೆ. ತಾವು ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ತಿಂಗಳ ನಾಲ್ಕನೇ ಶನಿವಾರದ ರಜೆಯ ದಿನ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಪಾಠ ಮಾಡುತ್ತಾರೆ. ಆಟೋಟ, ಸೃಜನಾತ್ಮಕ ಕಲಿಕಾ ಚಟುವಟಿಕೆಗಳನ್ನು ನಡೆಸಿಕೊಡುತ್ತಾರೆ. ಜೊತೆಗೆ ಅಗತ್ಯವಿರುವ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉತ್ತೇಜನ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಇವರು ಬಂಟ್ವಾಳ ತಾಲೂಕಿನ ಕದ್ದಳಿಕೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಳ್ತಂಗಡಿ ತಾಲೂಕಿನ ಪೆರಿಯಡ್ಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಟ-ಪಾಠ-ಚಟುವಟಿಕೆ ಆರಂಭಿಸಿದ್ದಾರೆ. ಇವರ ಈ ಕಾರ್ಯ ಗಮನಿಸಿ ಇನ್ನಷ್ಟು ಶಾಲೆಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಬೇಡಿಕೆ ಇದೆಯಂತೆ.
ಎಲ್ಲಕ್ಕಿಂತ ದೊಡ್ಡದ್ದು “ವಿದ್ಯಾದಾನ” ಎಂದು ಸಾಧಿಸಿದ ಉದಾರ ಮನಸ್ಕರಿವರು!
Mangalore,Dakshina Kannada,Karnataka
September 14, 2025 11:28 AM IST