Last Updated:
ಬಿ.ಸಿ.ರೋಡ್ ಸಂಚಯಗಿರಿ ನಿವಾಸಿ ದಾಮೋದರ ಯಾನೆ ದಾಮಜ್ಜ 80ರ ಮುಪ್ಪಿನಲ್ಲೂ ಸ್ವಚ್ಛತೆಯ ಹರಿಕಾರವಾಗಿ ವಾರ್ಡ್‌ನ್ನು ಪ್ಲಾಸ್ಟಿಕ್ ಮುಕ್ತವಾಗಿ ಪರಿವರ್ತಿಸಿದ್ದಾರೆ, ಸಮುದಾಯದ ಸಹೋದರ ಎಂದೇ ಪ್ರಸಿದ್ಧ.
ಮಂಗಳೂರು: ಸ್ವಚ್ಛತೆಯ (Cleaning) ಬಗ್ಗೆ ಯಾರು ಎಷ್ಟೇ ಮಾತನಾಡಿದರೂ, ಸ್ವತಃ ತಾವೇ ಸ್ವಚ್ಛತಾ ಕಾರ್ಯಕ್ಕೆ ಇಳಿಯುವವರ ಸಂಖ್ಯೆ ವಿರಳವೇ ಬಿಡಿ. ಇದಕ್ಕೆ ತದ್ವಿರುದ್ಧವಾದವರು ಬಂಟ್ವಾಳ (Bantwal) ತಾಲೂಕಿನ ಬಿ.ಸಿ.ರೋಡ್ ಸಂಚಯಗಿರಿ ನಿವಾಸಿ (Resident) ದಾಮೋದರ. ಅವಿವಾಹಿತರಾದ (Unmarried) ಇವರಿಗೆ ಪರಿಸರವೇ ಕುಟುಂಬ. ಪರಿಸರವನ್ನು ಸ್ವಚ್ಛವಾಗಿಡುವುದೇ ಇವರ ಕಾಯಕ, ಅಚ್ಚುಮೆಚ್ಚಿನ ಹವ್ಯಾಸ. ತಮ್ಮ ಬಡಾವಣೆಯನ್ನೇ ಸ್ವಚ್ಛಮಾಡುವ ಸ್ವಚ್ಛತೆಯ ಹರಿಕಾರ ಎಂದೇ ಕರೆಸಿಕೊಳ್ಳುತ್ತಾರೆ.
ನ್ಯಾಯಾಲಯದಲ್ಲಿ ಅಮೀನರಾಗಿದ್ದ ದಾಮೋದರ 2004ರಲ್ಲಿ ನಿವೃತ್ತಿ ಹೊಂದಿದ್ದರು. ಆ ಬಳಿಕ ಪರಿಸರ ಸೇವೆಗೆ ತೊಡಗಿಸಿಕೊಂಡಿದ್ದಾರೆ. 80 ವರ್ಷದ ಮುಪ್ಪಿನಲ್ಲೂ ಬಡಾವಣೆ ಸ್ವಚ್ಛತಾ ಕಾರ್ಯದಿಂದ ವಿಮುಖರಾಗಿಲ್ಲ. ಇವರು ತಮ್ಮ ಬಡಾವಣೆಯನ್ನು ಸ್ವಚ್ಛ ವಾರ್ಡ್‌ನ್ನಾಗಿ ಅಗ್ರಸ್ಥಾನಕ್ಕೆ ತಂದಿದ್ದಾರೆ. ಇದು ಅವರ ನಿಸ್ವಾರ್ಥ ಸೇವೆಯ ಫಲ.
ಅವರ ಪರಿಶ್ರಮದಿಂದ ವಾರ್ಡ್‌ನಲ್ಲಿ ಕಸಕಡ್ಡಿ, ತ್ಯಾಜ್ಯ, ಪ್ಲಾಸ್ಟಿಕ್‌ಗಳು ಎಲ್ಲೂ ಕಾಣಿಸುವುದಿಲ್ಲ. ರಸ್ತೆಗಳು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿವೆ. ಚರಂಡಿಗಳು ಸ್ವಚ್ಛವಾಗಿವೆ. ಇದು ಎಲ್ಲರ ಸಹಕಾರದ ಫಲವೆಂದು ಅವರು ಹೇಳುತ್ತಾರೆ.
ದಾಮೋದರ ಅವರು ಸ್ವಚ್ಛತಾ ಕಾರ್ಯವನ್ನಷ್ಟೇ ಮಾಡದೆ, ಇತರರಲ್ಲೂ ಜಾಗೃತಿ ಮೂಡಿಸುತ್ತಾರೆ. ಆದ್ದರಿಂದ ಬಡಾವಣೆಯ ಯಾರೂ ರಸ್ತೆಯಲ್ಲಿ ಕಸವನ್ನು ಎಸೆಯುವುದಿಲ್ಲ. ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಪುರಸಭೆಯವರು ನಿಯಮಿತವಾಗಿ ತೆಗೆಯುವಲ್ಲಿ ಮುತುವರ್ಜಿ ವಹಿಸುತ್ತಾರೆ. ಸಮಾರಂಭಗಳ ನಂತರ ಉತ್ಪನ್ನವಾಗುವ ಕಸವನ್ನು ಎಲ್ಲರೂ ಸೇರಿ ತಕ್ಷಣ ವಿಲೇವಾರಿ ಮಾಡುತ್ತಾರೆ.
ಇದಲ್ಲದೆ, ಇವರ ಸೇವೆ ಸ್ವಚ್ಛತೆಗಷ್ಟೇ ಸೀಮಿತವಾಗಿಲ್ಲ. ಎಲ್ಲ ಮನೆಗಳಿಂದ ಪುರಸಭೆಗೆ ಮನೆತೆರಿಗೆ ಸಂದಾಯವಾಗುವಂತೆ ನೆನಪಿಸುತ್ತಾರೆ. ಸಂಬಂಧಿತ ಫಾರ್ಮ್‌ಗಳನ್ನು ತಾವೇ ಭರ್ತಿಮಾಡಿ, ಹಣವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಿ, ರಶೀದಿಗಳನ್ನು ಮನೆಮನೆಗಳಿಗೆ ತಲುಪಿಸುತ್ತಾರೆ. ಊರಿನಲ್ಲಿ ನೀರು, ವಿದ್ಯುತ್, ಫೋನ್ ಸೇವೆಗಳಂತಹ ಸಮಸ್ಯೆಗಳು ಎದುರಾದರೆ ಜನರು ಮೊದಲು ದಾಮೋದರ ಅವರ ಬಳಿ ಮೊರೆ ಹೋಗುತ್ತಾರೆ.
ಕ್ಯಾಪ್ಟನ್ ಸಂಚಯಗಿರಿಯ ಕಥೆ ಇದು!
ಅವರು ತಕ್ಷಣ ಸ್ಪಂದಿಸಿ, ಸಂಬಂಧಿತ ಇಲಾಖೆಗಳಿಗೆ ದೂರು ನೀಡಿ, ಸಮಸ್ಯೆ ಬಗೆಹರಿಯುವವರೆಗೂ ಬೆನ್ನು ಹಿಡಿದು ಕೆಲಸ ಮಾಡಿಸುತ್ತಾರೆ. ಇದರಿಂದ ಸಂಚಯಗಿರಿಯವರಿಗೆ ದಾಮೋದರ ಅವರು ‘ಪರಿಸರ ಯೋಧ’ ಮಾತ್ರವಲ್ಲ, ‘ಸಮುದಾಯದ ಸಹೋದರ’ ಎಂದೂ ಕರೆಯಲ್ಪಡುತ್ತಾರೆ. ವಾರ್ಡ್ ಸ್ವಚ್ಛತೆಗಾಗಿ ಸ್ವತಃ ಪೊರಕೆ ಹಿಡಿದು ಗುಡಿಸುವ ಇವರ ಕಾಳಜಿ, ಎಲ್ಲರಿಗೂ ಆದರ್ಶ. 80ರ ಮುಪ್ಪಿನಲ್ಲೂ ಯುವಕರಂತೆ ಶ್ರಮಿಸುವ ಇವರು, ಪರಿಸರ ರಕ್ಷಣೆಗೆ ಮಾದರಿಯಾಗಿದ್ದಾರೆ.
Dakshina Kannada,Karnataka
October 27, 2025 12:52 PM IST