Last Updated:
ಬೆಳ್ತಂಗಡಿ ಮೂಲದ ರಮ್ಲಾನ್, ಇಸ್ಲಾಂನಲ್ಲಿ ಹುಟ್ಟಿ ದುರ್ಗಾಕಾಳಿಕಾಂಬೆ ದೇವಿಯ ಭಕ್ತಿಗೀತೆಗಳನ್ನು ಹಾಡಿ, ಧರ್ಮದ ಅಂತರವಿಲ್ಲ ಎಂಬುದನ್ನು ತಮ್ಮ ಸಂಗೀತದಿಂದ ಸಾಬೀತುಪಡಿಸಿದ್ದಾರೆ.
ಮಂಗಳೂರು: ದಿನವೂ ಗಂಗೆಯನ್ನು (Ganga) ನೆನೆಯುತ್ತಾ ಕಾಶಿ ವಿಶ್ವನಾಥನಿಗಾಗಿ ಶಹನಾಯಿ ನುಡಿಸಿದ ಉಸ್ತಾದ್ ಬಿಸ್ಮಿಲ್ಲ ಖಾನ್, ನಮ್ಮ ನಾಡಿನ ತತ್ವಜ್ಞಾನ ಶಿರೋಮಣಿ ಗೋವಿಂದ ಭಟ್ಟರ ಪಟ್ಟ ಶಿಷ್ಯ ಸಂತ ಶಿಶುನಾಳ ಷರೀಫ ಇವರೆಲ್ಲಾ ಸಾಮಗಾನದ ದೇವಿ (Goddess) ಶಾರದೆಯನ್ನು ಒಲಿಸಿಕೊಂಡು ಅಮರರಾದವರು. ಆ ನಿಟ್ಟಿನಲ್ಲಿ ಇಲ್ಲೊಬ್ಬ ಮನುಷ್ಯ ತಾನು ಇವರೆಲ್ಲರಂತೆ ಇಸ್ಲಾಂನಲ್ಲಿ (Islam) ಹುಟ್ಟಿದರೂ ಕಾಳಿಕಾ ದೇವಿಯ ಪರಮ ಭಕ್ತನಾಗಿ (Devotee) ಹಾಡುತ್ತಿದ್ದಾನೆ.
ಸಂಗೀತಕ್ಕೆ ಜಾತಿ ಧರ್ಮದ ಅಂತರವಿಲ್ಲ. ಸಿರಿ ಸಂಪತ್ತಿನ ಬೇಲಿ ಇಲ್ಲ ಅನ್ನೋದನ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಸ್ಲಿಂ ಯುವಕನೋರ್ವ ನಿರೂಪಿಸಿದ್ದಾನೆ. ಮನೆಯ ಹತ್ತಿರದ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಹಾಕುತ್ತಿದ್ದ ಭಕ್ತಿಗೀತೆಗಳನ್ನೇ ಕೇಳಿ ಬೆಳೆದ ರಮ್ಲಾನ್ ಎಂಬ ಮುಸ್ಲಿಂ ಯುವಕ, ಹಿಂದೂ ದೇವರ ಭಕ್ತಿಗೀತೆಗಳನ್ನು ಹಾಡಿ ಸಂಗೀತಕ್ಕೆ ಧರ್ಮದ ಅಂತರವಿಲ್ಲ ಎಂಬುದನ್ನು ಸಾಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನ ಕಾಳಿಕಾಬೆಟ್ಟದಲ್ಲಿದ್ದು, ಬೆಟ್ಟದ ಕೆಳಗೆ ರಮ್ಲಾನ್ ಅವರ ಮನೆಯಿದೆ. ಎಳವೆಯಿಂದಲೇ ದೇವಸ್ಥಾನದ ಎಲ್ಲಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ರಮ್ಲಾನ್ ಅವರಿಗೆ ವಿದ್ಯಾಭೂಷಣ್ ಅವರು ಹಾಡುವ ಭಕ್ತಿಗೀತೆಗಳು ಅಂದ್ರೆ ಅಚ್ಚುಮೆಚ್ಚು. ಮನೆಯವರೆಗೆ ಕೇಳುತ್ತಿದ್ದ ಹಾಡುಗಳನ್ನು ಇಷ್ಟಪಟ್ಟು ಆಲಿಸುತ್ತಿದ್ದ ರಮ್ಲಾನ್, ಹಾಡನ್ನು ಕೇಳಿಯೇ ಅಭ್ಯಾಸ ಮಾಡಿಕೊಂಡಿದ್ದಾರೆ.
ಭಕ್ತಿಗೀತೆಗಳನ್ನು ಕೇಳಿ ಕೇಳಿಯೇ ಹಾಡುತ್ತಾ ಬೆಳೆದ ರಮ್ಲಾನ್ ಇಂದು ಸುಶ್ರಾವ್ಯವಾಗಿ ಹಾಡುತ್ತಾರೆ. ಕಡು ಬಡತನದ ನಡುವೆಯೇ ದ್ವಿತೀಯ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿ ಸದ್ಯ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ದುರ್ಗಾಕಾಳಿಕಾಂಬ ದೇವಸ್ಥಾನ ಮತ್ತು ಪರಿಸರ ಹಿಂದೂ ಬಾಂಧವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ರಮ್ಲಾನ್ ಮೂರು ವರ್ಷಗಳ ಹಿಂದೆ ದುರ್ಗಾ ಕಾಳಿಕಾಂಬೆಯನ್ನು ಸ್ತುತಿಸುವ ಹಾಡನ್ನು ಬರೆದು, ತಮ್ಮದೇ ಕಂಠದಲ್ಲಿ ಹಾಡಿ, ದೇವಿಗೆ ಅರ್ಪಣೆ ಮಾಡಿದ್ದರು.
ಇನ್ನೂ ಹೆಚ್ಚಿನ ಪ್ರೋತ್ಸಾಹ ಬೇಕೆಂದು ಜನರ ಬೇಡಿಕೆ
Dakshina Kannada,Karnataka