IPL 2025: ಅವರ ವೈಫಲ್ಯ ನಮ್ಮ ಸೋಲಿಗೆ ಕಾರಣ! ಆರ್​ಸಿಬಿ ಬ್ಯಾಟಿಂಗ್ ಮಾಡುವ ಮೊದಲೇ ನಾವು ಅರ್ಧ ಪಂದ್ಯ ಸೋತಿದ್ದೆವು! ರಹಾನೆ ಅಚ್ಚರಿ ಹೇಳಿಕೆ | Ajinkya Rahane Points to Middle Overs Wickets as Game-Changer in KKR vs RCB match

IPL 2025: ಅವರ ವೈಫಲ್ಯ ನಮ್ಮ ಸೋಲಿಗೆ ಕಾರಣ! ಆರ್​ಸಿಬಿ ಬ್ಯಾಟಿಂಗ್ ಮಾಡುವ ಮೊದಲೇ ನಾವು ಅರ್ಧ ಪಂದ್ಯ ಸೋತಿದ್ದೆವು! ರಹಾನೆ ಅಚ್ಚರಿ ಹೇಳಿಕೆ | Ajinkya Rahane Points to Middle Overs Wickets as Game-Changer in KKR vs RCB match

Last Updated:

ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವು ಆರ್‌ಸಿಬಿ ವಿರುದ್ಧ ಸೋಲು ಅನುಭವಿಸಿದೆ. ಕೆಕೆಆರ್ 174 ರನ್‌ಗಳಿಗೆ ಆಲೌಟ್ ಆಗಿ, ಆರ್‌ಸಿಬಿ 22 ಎಸೆತಗಳು ಬಾಕಿ ಇರುವಾಗ ಗೆಲುವು ಸಾಧಿಸಿತು.

ಆರ್​ಸಿಬಿ vs ಕೆಕೆಆರ್ಆರ್​ಸಿಬಿ vs ಕೆಕೆಆರ್
ಆರ್​ಸಿಬಿ vs ಕೆಕೆಆರ್

ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತವರಿನ ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡವು ಆರಂಭದಲ್ಲಿ ಭರವಸೆ ಮೂಡಿಸಿದರೂ, ಮಧ್ಯದಲ್ಲಿ ಕುಸಿತ ಕಂಡು 174 ರನ್‌ಗಳಿಗೆ ಆಲೌಟ್ ಆಗಿತ್ತು. ಆರ್‌ಸಿಬಿ ತಂಡವು ಇದನ್ನು ಸುಲಭವಾಗಿ ಬೆನ್ನಟ್ಟಿ, 22 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತು.

ರಹಾನೆ ಆಟ ವ್ಯರ್ಥ

ಕೆಕೆಆರ್ ಇನ್ನಿಂಗ್ಸ್‌ನಲ್ಲಿ ಸುನಿಲ್ ನರೈನ್ (26 ಎಸೆತಗಳಲ್ಲಿ 44; 5 ಬೌಂಡರಿ, 3 ಸಿಕ್ಸರ್) ಮತ್ತು ಅಜಿಂಕ್ಯ ರಹಾನೆ (31 ಎಸೆತಗಳಲ್ಲಿ 56; 6 ಬೌಂಡರಿ, 3 ಸಿಕ್ಸರ್) ಉತ್ತಮ ಆರಂಭ ನೀಡಿದರು. ಈ ಜೋಡಿಯ ಆಕರ್ಷಕ ಬ್ಯಾಟಿಂಗ್‌ನಿಂದ 200 ರನ್‌ಗಳ ಗುರಿ ಸಾಧ್ಯವಿದೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ, 10 ಓವರ್‌ಗಳ ನಂತರ ಆರ್‌ಸಿಬಿ ಸ್ಪಿನ್ನರ್‌ಗಳು ದಾಳಿಗೆ ಇಳಿದಾಗ ಪಂದ್ಯದ ಚಿತ್ರಣ ಬದಲಾಯಿತು. ನರೈನ್ ಮತ್ತು ರಹಾನೆ ಸತತ ಮೂರು ಎಸೆತಗಳಲ್ಲಿ ಔಟಾದರು. ಇದರಿಂದ ಕೆಕೆಆರ್ ರನ್ ಗಳಿಕೆಯ ವೇಗ ಕುಂಠಿತಗೊಂಡು, ತಂಡವು ಕೇವಲ 174 ರನ್‌ಗಳಿಗೆ ಸೀಮಿತವಾಯಿತು.

ಪವರ್​​ ಪ್ಲೇನಲ್ಲಿ ಪಂದ್ಯ ವಶ

ಆರ್‌ಸಿಬಿ ಪರವಾಗಿ ಫಿಲ್ ಸಾಲ್ಟ್ (31 ಎಸೆತಗಳಲ್ಲಿ 56; 9 ಬೌಂಡರಿ, 2 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (36 ಎಸೆತಗಳಲ್ಲಿ ಔಟಾಗದೆ 59; 4 ಬೌಂಡರಿ, 3 ಸಿಕ್ಸರ್) ಪವರ್‌ಪ್ಲೇನಲ್ಲಿ 80 ರನ್‌ಗಳ ಜೊತೆಯಾಟವಾಡಿ ಅದ್ಭುತ ಆರಂಭ ನೀಡಿದರು. ರಜತ್ ಪಾಟಿದಾರ್ (16 ಎಸೆತಗಳಲ್ಲಿ 34; 5 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿಗೆ ಸುಲಭ ಗೆಲುವು ತಂದುಕೊಟ್ಟರು. ಬೌಲಿಂಗ್‌ನಲ್ಲಿ ಕೃನಾಲ್ ಪಾಂಡ್ಯ (4-0-29-3) ಮತ್ತು ಜೋಶ್ ಹ್ಯಾಜಲ್‌ವುಡ್ (4-0-22-2) ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ, ಕೆಕೆಆರ್ ಬೌಲರ್‌ಗಳಾದ ಸುಯಾಶ್ ಶರ್ಮಾ ಮತ್ತು ರಸಿಕ್ ಸಲಾಂ ರನ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ:  ಧೋನಿ ನಿವೃತ್ತಿ ಯಾವಾಗ? ಮಹತ್ವದ ಮಾಹಿತಿ ಹಂಚಿಕೊಂಡ ಸಿಎಸ್​ಕೆ ನಾಯಕ ಗಾಯಕ್ವಾಡ್.

ಮಧ್ಯಮ ಕ್ರಮಾಂಕದ ವೈಫಲ್ಯ ಕಾರಣ

ಸೋಲಿನ ನಂತರ ಕೆಕೆಆರ್ ನಾಯಕ ರಹಾನೆ ಮಾತನಾಡಿ, ” ನಾವು ಉತ್ತಮ ಪವರ್​ ಪ್ಲೇ ಪಡೆದಿದ್ದೆವು, 13 ಓವರ್‌ಗಳವರೆಗೂ ಉತ್ತಮ ಸ್ಕೋರ್ ಗಳಿಸುವ ಭರವಸೆ ಇತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸತತ ವಿಕೆಟ್‌ಗಳು ಬಿದ್ದಾಗ ಎಲ್ಲವೂ ಬದಲಾಯಿತು. ವೆಂಕಟೇಶ್ ಅಯ್ಯರ್ ಜೊತೆಗೆ 200-210 ರನ್ ಗುರಿ ಇಡುವ ಚರ್ಚೆ ಮಾಡಿದ್ದೆವು. ಆದರೆ ನಮ್ಮ ಪ್ಲಾನ್​ ವಿಫಲವಾಯಿತು” ಎಂದು ಹೇಳುವ ಮೂಲಕ ಸೋಲಿಗೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ಆರ್​ಸಿಬಿಗೆ ಸಂಪೂರ್ಣ ಕ್ರೆಡಿಟ್

ಇನ್ನು ಚೇಸಿಂಗ್ ವೇಳೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಪವರ್‌ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡಿ ಪಂದ್ಯವನ್ನು ಕೈವಶ ಮಾಡಿಕೊಂಡರು. ಒಂದು ವೇಳೆ 200ಕ್ಕಿಂತ ಹೆಚ್ಚು ರನ್ ಗಳಿಸಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತು. ಆರ್‌ಸಿಬಿಗೆ ಈ ಗೆಲುವಿನ ಪೂರ್ಣ ಕ್ರೆಡಿಟ್ ಸಲ್ಲುತ್ತದೆ. ಪವರ್ ಪ್ಲೇನಲ್ಲಿ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು, ಏಕೆಂದರೆ ಅವರು ನಿರ್ಣಾಯಕ ಹಂತಗಳಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದರು. ನಾನು ಈ ಪಂದ್ಯದ ಬಗ್ಗೆ ಇನ್ನೂ ಚರ್ಚಿಸಲು ಬಯಸುವುದಿಲ್ಲ. ಕೆಲವು ಅಂಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು ” ಎಂದು ಹೇಳಿದರು.

ಇದನ್ನೂ ಓದಿ: 18 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡ RCB! ಉದ್ಘಾಟನಾ ಪಂದ್ಯದಲ್ಲಿ ಇದು ಎಷ್ಟನೇ ಗೆಲುವು ಗೊತ್ತಾ?

ಕೆಕೆಆರ್‌ನ ಬೌಲಿಂಗ್ ದೌರ್ಬಲ್ಯ ಈ ಪಂದ್ಯದಲ್ಲಿ ಸ್ಪಷ್ಟವಾಗಿ ಕಂಡುಬಂದಿತು. ಅನುಭವಿ ವೇಗಿಗಳ ಕೊರತೆ ತಂಡಕ್ಕೆ ತೊಂದರೆಯಾಗಿದೆ. ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಾರ್ಚ್ 26ರಂದು ಗುವಾಹಟಿಯಲ್ಲಿ ಕೆಕೆಆರ್ ಸೆಣಸಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2025: ಅವರ ವೈಫಲ್ಯ ನಮ್ಮ ಸೋಲಿಗೆ ಕಾರಣ! ಆರ್​ಸಿಬಿ ಬ್ಯಾಟಿಂಗ್ ಮಾಡುವ ಮೊದಲೇ ನಾವು ಅರ್ಧ ಪಂದ್ಯ ಸೋತಿದ್ದೆವು! ರಹಾನೆ ಅಚ್ಚರಿ ಹೇಳಿಕೆ