Last Updated:
ಐಪಿಎಲ್ 2025ರಲ್ಲಿ ಆರ್‌ಸಿಬಿ 7 ಗೆಲುವುಗಳೊಂದಿಗೆ 3ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದ ಆರ್‌ಸಿಬಿ, ಮೇ 3ರಂದು ಸಿಎಸ್‌ಕೆ ವಿರುದ್ಧ ನಿರ್ಣಾಯಕ ಪಂದ್ಯ ಆಡಲಿದೆ.
ಐಪಿಎಲ್ 2025ರ (IPL 2025) ರೋಚಕ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅದ್ಭುತ ಫಾರ್ಮ್ನಲ್ಲಿದೆ. 7 ಗೆಲುವುಗಳೊಂದಿಗೆ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆರ್‌ಸಿಬಿ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 6 ವಿಕೆಟ್‌ಗಳ ಆರಾಮದಾಯಕ ಗೆಲುವು ಸಾಧಿಸಿದ ಉತ್ಸಾಹದಲ್ಲಿದೆ. ಈ ಯಶಸ್ಸಿನ ಓಟವನ್ನು ಮುಂದುವರಿಸಲು ಆರ್‌ಸಿಬಿ ತಯಾರಾಗಿದ್ದು, ಮೇ 3ರ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಈ ಪಂದ್ಯವು ಆರ್‌ಸಿಬಿಗೆ ಪ್ಲೇಆಫ್‌ಗೆ ಅರ್ಹತೆ ಖಚಿತಪಡಿಸಿಕೊಳ್ಳಲು ಮಹತ್ವದ್ದಾಗಿದ್ದರೆ, ಸಿಎಸ್‌ಕೆಗೆ ತಮ್ಮ ಕಳಪೆ ಫಾರ್ಮ್‌ನಿಂದ ಹೊರಬಂದು ಕೊನೆಯ ಸ್ಥಾನದ ಕಳಪೆ ಪಟ್ಟದಿಂದ ತಪ್ಪಿಸಿಕೊಳ್ಳಲು ನೆರವಾಗಲಿದೆ.
ಆರ್‌ಸಿಬಿ vs ಸಿಎಸ್‌ಕೆ ದಾಖಲೆ
ಆರ್‌ಸಿಬಿ ಮತ್ತು ಸಿಎಸ್‌ಕೆ ಐಪಿಎಲ್‌ನಲ್ಲಿ ಒಟ್ಟು 35 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 21 ಗೆಲುವುಗಳೊಂದಿಗೆ ಆರ್‌ಸಿಬಿ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಆರ್‌ಸಿಬಿ ಕೇವಲ 12 ಪಂದ್ಯಗಳಲ್ಲಿ ಮಾತ್ರ ಗೆಲುವು ಪಡೆದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇತ್ತೀಚಿನ ಎನ್‌ಕೌಂಟರ್‌ನಲ್ಲಿ (ಮಾರ್ಚ್ 2025) ಆರ್‌ಸಿಬಿ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ತಂಡಗಳು 11 ಬಾರಿ ಆಡಿದ್ದು, ಎರಡೂ ತಂಡಗಳು ತಲಾ 5 ಗೆಲುವುಗಳನ್ನು ದಾಖಲಿಸಿವೆ. ಕಳೆದ ವರ್ಷ (ಮೇ 2024) ಆರ್‌ಸಿಬಿ ಇಲ್ಲಿ ಸಿಎಸ್‌ಕೆ ವಿರುದ್ಧ 27 ರನ್‌ಗಳ ರೋಚಕ ಜಯ ಗಳಿಸಿ ಪ್ಲೇ ಆಫ್ ಪ್ರವೇಶಿಸಿತ್ತು.
ಚಿನ್ನಸ್ವಾಮಿಯಲ್ಲೂ ಆರ್‌ಸಿಬಿ ಕಳಪೆ ದಾಖಲೆ
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಯ ಒಟ್ಟಾರೆ 95 ಪಂದ್ಯಗಳನ್ನಾಡಿದ್ದು, 44 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 46ರಲ್ಲಿ ಸೋಲು ಕಂಡಿದೆ. 1 ಟೈ, ಮತ್ತು 4 ಪಂದ್ಯಗಳು ರದ್ಧಾಗಿವೆ.
ಪ್ರಮುಖ ಆಟಗಾರರ ಕೊಡುಗೆ
ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ದಾಖಲೆಯ 1098 ರನ್‌ಗಳನ್ನು (34 ಇನ್ನಿಂಗ್ಸ್, 36.60 ಸರಾಸರಿ, 125.34 ಸ್ಟ್ರೈಕ್ ರೇಟ್) ಗಳಿಸಿದ್ದಾರೆ. ಸಿಎಸ್‌ಕೆ ಪರ ಎಂಎಸ್ ಧೋನಿ (806 ರನ್, 40.30 ಸರಾಸರಿ) ಮತ್ತು ಸುರೇಶ್ ರೈನಾ (710 ರನ್) ಕೂಡ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಬೌಲಿಂಗ್‌ನಲ್ಲಿ ಸಿಎಸ್‌ಕೆಯ ರವೀಂದ್ರ ಜಡೇಜಾ 18 ವಿಕೆಟ್‌ಗಳೊಂದಿಗೆ (7.46 ಎಕಾನಮಿ) ಮುಂಚೂಣಿಯಲ್ಲಿದ್ದಾರೆ, ಡ್ವೇನ್ ಬ್ರಾವೋ (17 ವಿಕೆಟ್) ಮತ್ತು ಆಲ್ಬೀ ಮೊರ್ಕೆಲ್ (16 ವಿಕೆಟ್) ಉತ್ತಮ ದಾಖಲೆ ಹೊಂದಿದ್ದಾರೆ.
ಆರ್‌ಸಿಬಿಯ ಈಗಿನ ಫಾರ್ಮ್
ಆರ್‌ಸಿಬಿ ಈ ಋತುವಿನಲ್ಲಿ 7 ಗೆಲುವುಗಳೊಂದಿಗೆ (10 ಪಂದ್ಯ) ಅಂಕಪಟ್ಟಿಯ 3ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿಯ 443 ರನ್‌ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದಾರೆ. ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಆರ್‌ಸಿಬಿ ಟೂರ್ನಿಯಲ್ಲೇ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಜೋಶ್ ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್ ಹಾಗೂ ಕೃನಾಲ್ ಪಾಂಡ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.