IPL 2025: ಕ್ಲಾಸೆನ್​ ಸಿಡಿಲಬ್ಬರದ ಶತಕ, ಹೆಡ್ ಫಿಫ್ಟಿ! ಕೆಕೆಆರ್​ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಹೈದರಾಬಾದ್ | Heinrich Klaasen s Century Powers SRH Sets Massive Target to kkr

IPL 2025: ಕ್ಲಾಸೆನ್​ ಸಿಡಿಲಬ್ಬರದ ಶತಕ, ಹೆಡ್ ಫಿಫ್ಟಿ! ಕೆಕೆಆರ್​ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಹೈದರಾಬಾದ್ | Heinrich Klaasen s Century Powers SRH Sets Massive Target to kkr

Last Updated:

ಹೆನ್ರಿಚ್ ಕ್ಲಾಸೆನ್ (105) ಸಿಡಿಲಬ್ಬರದ ಶತಕದಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್​ಗೆ 279 ರನ್​ಗಳ ಬೃಹತ್ ಗುರಿ ನೀಡಿದೆ.

ಎಸ್​ಆರ್​ಹೆಚ್​ಎಸ್​ಆರ್​ಹೆಚ್​
ಎಸ್​ಆರ್​ಹೆಚ್​

2025ರ ಆವೃತ್ತಿಯ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ​ ಹೆನ್ರಿಚ್ ಕ್ಲಾಸೆನ್ ಸಿಡಿಸಿದ ಸಿಡಿಲಬ್ಬರದ ಶತಕ ಹಾಗೂ ಟ್ರಾವಿಸ್ ಹೆಡ್ ಸಿಡಿಸಿದ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ 278 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. ಈಗಾಗಲೆ ಎರಡೂ ತಂಡಗಳು ಪ್ಲೇ ಆಫ್​ ಪ್ರವೇಶಿಸಲು ವಿಫಲವಾಗಿವೆ. ಆದರೆ ಈ ಪಂದ್ಯವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಲು ಹೈದರಾಬಾದ್ ತಂಡ ತಮ್ಮ ನೈಜ ಆಟ ಪ್ರದರ್ಶಿಸಿತು. ಆರಂಭದಿಂದ ಅಂತ್ಯದವರೆಗೆ ಸ್ಫೋಟಕ ಬ್ಯಾಟಿಂಗ್ ಮಾಡಿ ಕೆಕೆಆರ್​ಗೆ 279ರನ್​ಗಳ ಗುರಿ ನೀಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹೈದರಾಬಾದ್​ ಪವರ್​ ಪ್ಲೇನಲ್ಲೇ 79 ರನ್​ ಸೇರಿಸಿತು. ಒಟ್ಟಾರೆ ಮೊದಲ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನೀಡಿದರು. ಅಭಿಷೇಕ್ ಶರ್ಮಾ ಕೇವಲ 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 32 ರನ್​ಗಳಿಸಿ ನರೈನ್ ಬೌಲಿಂಗ್​​ನಲ್ಲಿ ಔಟ್ ಆದರು. ಆದರೆ 2ನೇ ವಿಕೆಟ್​ಗೆ ಒಂದಾದ ಹೆಡ್​ ಹಾಗೂ ಕ್ಲಾಸೆನ್ ಕೆಕೆಆರ್ ಬೌಲರ್​ಗಳನ್ನ ಚೆಂಡಾಡಿದರು. ಈ ಜೋಡಿ 2ನೇ ವಿಕೆಟ್​ ಜೊತೆಯಾಟದಲ್ಲಿ ಕೇವಲ 35 ಎಸೆತಗಳಲ್ಲಿ 83 ರನ್​ಗಳ ಬೃಹತ್ ಜೊತೆಯಾಟ ನಡೆಸಿದರು.

ಟ್ರಾವಿಸ್ ಹೆಡ್​ 40 ಎಸೆತಗಳಲ್ಲಿ  6 ಬೌಂಡರಿ, 6 ಸಿಕ್ಸರ್​ಗಳ ನೆರವಿನಿಂದ 76 ರನ್​ಗಳಿಸಿ ನರೈನ್​ಗೆ 2ನೇ ಬಲಿಯಾದರು. ಹೆಡ್​ ವಿಕೆಟ್ ನಂತರವೂ ತಮ್ಮ ಅಬ್ಬರದ ಆಟ ಮುಂದುವರಿಸಿದ ಕ್ಲಾಸೆನ್​ 37 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ಇಶಾನ್ ಕಿಶನ್ ಜೊತೆಗೆ 3ನೇ ವಿಕೆಟ್​ಗೆ 36 ಎಸೆತಗಳಲ್ಲಿ 83 ರನ್​ ಸೇರಿಸಿದರು.  ಕಿಶನ್ 20 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 29 ರನ್​ಗಳಿಸಿ ವೈಭವ್ ಅರೋರ ಬೌಲಿಂಗ್​ನಲ್ಲಿ ನೋಕಿಯಾಗೆ ಕ್ಯಾಚ್ ನೀಡಿ ಔಟ್ ಆದರು.

ಕೊನೆಯವರೆಗು ಔಟಾಗದೇ ಉಳಿದ ಹೆನ್ರಿಚ್ ಕ್ಲಾಸೆನ್ 39 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್​ಗಳ ಸಹಿತ 105 ರನ್​ಗಳಿಸಿದರು. ಇದು ಅವರ ಐಪಿಎಲ್ ವೃತ್ತಿ ಜೀವನದ 2ನೇ ಶತಕವಾಗಿದೆ.  ಅಲ್ಲದೆ ಹೈದರಾಬಾದ್​ ಪರ ವೇಗದ ಶತಕವಾಗಿದೆ. ಒಟ್ಟಾರೆ ಐಪಿಎಲ್​​ನಲ್ಲಿ 3ನೇ ವೇಗದ ಶತಕವಾಗಿದೆ.  ಕ್ರಿಸ್ ಗೇಲ್ 30 ಎಸೆತಗಳಲ್ಲಿ, ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಸಿಡಿಸಿ ಟಾಪ್ 2ನಲ್ಲಿದ್ದಾರೆ. ಯೂಸುಫ್ ಪಠಾಣ್  ಕೂಡ 37 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಇನ್ನು ಕೆಕೆಆರ್ ಪರ ಸುನಿಲ್ ನರೈನ್ 42ಕ್ಕೆ2 ವಿಕೆಟ್ ಪಡೆದರೆ, ವೈಭವ್ ಅರೋರ 39ಕ್ಕೆ1 ವಿಕೆಟ್ ಪಡೆದರು. ಎನ್ರಿಚ್ ನೋಕಿಯಾ 60 ರನ್​ ನೀಡಿ ದುಬಾರಿಯಾದರು.  ಹರ್ಷಿತ್ ರಾಣಾ 3 ಓವರ್​ಗಳಲ್ಲಿ 40 ರನ್, ವರುಣ್ ಚಕ್ರವರ್ತಿ 3 ಓವರ್​ಗಳಲ್ಲಿ 54 ರನ್​, ಆ್ಯಂಡ್ರೆ ರಸೆಲ್ 2 ಓವರ್​ಗಳಲ್ಲಿ 34 ರನ್​ ನೀಡಿ ದುಬಾರಿಯಾದರು.