IPL 2025: ಟೂರ್ನಿಯಿಂದಲೇ ಹೊರಬಿದ್ದ ಬಲಿಷ್ಠ SRH! ಹೀನಾಯ ಪ್ರದರ್ಶನಕ್ಕೆ 4 ಪ್ರಮುಖ ಕಾರಣ ಕೊಟ್ಟ ಹೆಡ್​ ಕೋಚ್ | SRH s Disappointing Season Daniel Vettori Cites Tricky Surfaces Inconsistent Performance

IPL 2025: ಟೂರ್ನಿಯಿಂದಲೇ ಹೊರಬಿದ್ದ ಬಲಿಷ್ಠ SRH! ಹೀನಾಯ ಪ್ರದರ್ಶನಕ್ಕೆ 4 ಪ್ರಮುಖ ಕಾರಣ ಕೊಟ್ಟ ಹೆಡ್​ ಕೋಚ್ | SRH s Disappointing Season Daniel Vettori Cites Tricky Surfaces Inconsistent Performance

Last Updated:

ಐಪಿಎಲ್ 2025ರಲ್ಲಿ SRH ತಂಡದ ಪಯಣ ದುರಂತದಿಂದ ಕೊನೆಗೊಂಡಿದೆ. ಡೆಲ್ಲಿ ವಿರುದ್ಧದ ಪಂದ್ಯವು ಮಳೆಯಿಂದ ರದ್ದಾದ ಕಾರಣ SRH ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. 11 ಪಂದ್ಯಗಳಲ್ಲಿ ಕೇವಲ 3 ಗೆಲುವುಗಳಿವೆ.

ಡೇನಿಯಲ್ ವಿಟೋರಿಡೇನಿಯಲ್ ವಿಟೋರಿ
ಡೇನಿಯಲ್ ವಿಟೋರಿ

ಐಪಿಎಲ್ 2025ರ (IPL 2025) ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪಯಣ ದುರಂತದಿಂದ ಕೊನೆಗೊಂಡಿದೆ. ಸೋಮವಾರ ಉಪ್ಪಲ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ನಡೆಯಬೇಕಿದ್ದ ನಿರ್ಣಾಯಕ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 133 ರನ್ ಗಳಿಸಿತು. ಆದರೆ, ಎಸ್‌ಆರ್‌ಎಚ್‌ಗೆ ಬ್ಯಾಟಿಂಗ್ ಮಾಡಲು ಅವಕಾಶವೇ ಸಿಗಲಿಲ್ಲ, ಏಕೆಂದರೆ ಮಳೆಯಿಂದಾಗಿ ಎರಡನೇ ಇನಿಂಗ್ಸ್ ಆರಂಭವಾಗಲೇ ಇಲ್ಲ. ಈ ರದ್ದಾದ ಪಂದ್ಯದಿಂದ ಎರಡೂ ತಂಡಗಳಿಗೆ ತಲಾ ಒಂದು ಅಂಕ ದೊರೆತರೂ, ಎಸ್‌ಆರ್‌ಎಚ್‌ಗೆ ಇದು ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವಂತೆ ಮಾಡಿತು. 11 ಪಂದ್ಯಗಳಲ್ಲಿ ಕೇವಲ 3 ಗೆಲುವುಗಳೊಂದಿಗೆ, ಆರೆಂಜ್ ಆರ್ಮಿ ಇನ್ನು 3 ಪಂದಗಳಿರುವಂತೆಯೇ ಟೂರ್ನಿಯಿಂದ ಹೊರಬಿದ್ದಿದೆ.

ಪಿಚ್​ ನಮಗೆ ಅನುಕೂಲವಾಗಲಿಲ್ಲ

ಪಂದ್ಯದ ನಂತರ ಎಸ್‌ಆರ್‌ಎಚ್‌ನ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಮಾಧ್ಯಮಗಳೊಂದಿಗೆ ಮಾತನಾಡಿ, ತಂಡದ ವೈಫಲ್ಯಕ್ಕೆ ಹಲವು ಕಾರಣಗಳನ್ನು ತೆರೆದಿಟ್ಟರು. ಈ ಋತುವಿನಲ್ಲಿ ತಂಡವು ಸಾಮೂಹಿಕವಾಗಿ ಶ್ರೇಷ್ಠ ಪ್ರದರ್ಶನ ನೀಡಲು ವಿಫಲವಾಯಿತು ಎಂದು ಅವರು ಒಪ್ಪಿಕೊಂಡರು. ಅದರಲ್ಲೂ ಉಪ್ಪಲ್‌ನ ಪಿಚ್‌ಗಳು ಈ ಬಾರಿ ಅನಿರೀಕ್ಷಿತವಾಗಿ ವರ್ತಿಸಿದವು. ಕಳೆದ ಋತುವಿನಲ್ಲಿ ಇಲ್ಲಿ ದೊಡ್ಡ ಮೊತ್ತಗಳು ದಾಖಲಾಗಿದ್ದವು, ಆದರೆ ಈ ವರ್ಷ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಿದ್ದವು. ಇದು ಎಸ್‌ಆರ್‌ಎಚ್‌ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ತೊಡಕಾಯಿತು. “ನಾವು ಪಿಚ್‌ಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಲಿಲ್ಲ. ಯಾವ ದಿನ ಯಾವ ರೀತಿಯ ಆಟ ಬೇಕು ಎಂಬುದನ್ನು ಅರಿತು ಆಡಲು ಸಾಧ್ಯವಾಗಲಿಲ್ಲ,” ಎಂದು ವೆಟ್ಟೋರಿ ಪಿಚ್​ ತಮ್ಮ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂದರು.

ಸ್ಥಿರತೆಯ ಕೊರತೆ

ತಂಡದ ಸ್ಥಿರತೆಯ ಕೊರತೆಯೂ ಮತ್ತೊಂದು ಪ್ರಮುಖ ಸಮಸ್ಯೆಯಾಗಿತ್ತು. ಕಳೆದ ಋತುವಿನಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ, ಈ ಬಾರಿ ಇವರಿಬ್ಬರೂ ಸ್ಥಿರವಾಗಿ ಆಡಲು ವಿಫಲರಾದರು. ಅಭಿಷೇಕ್ ಶರ್ಮಾ 10 ಪಂದ್ಯಗಳಲ್ಲಿ 5 ಬಾರಿ ಒಂದಂಕಿಯ ರನ್‌ಗೆ ಔಟಾದರು, ಇದು ತಂಡದ ಆರಂಭಕ್ಕೆ ದೊಡ್ಡ ಹೊಡೆತವಾಯಿತು.

ಸ್ಪಿನ್ನರ್​ಗಳ ವೈಫಲ್ಯ

ತಂಡದ ಸ್ಪಿನ್ ಬೌಲಿಂಗ್ ವಿಭಾಗವೂ ನಿರಾಸೆ ಮೂಡಿಸಿತು, ಯಾವುದೇ ಪಂದ್ಯದಲ್ಲಿ ಸ್ಪಿನ್ ಬೌಲರ್​ಗಳು ಗಮನಾರ್ಹ ಪ್ರದರ್ಶನ ನೀಡಲಿಲ್ಲ. ವೇಗದ ಬೌಲರ್‌ಗಳು ಕೆಲವು ಪಂದ್ಯಗಳಲ್ಲಿ ಉತ್ತಮವಾಗಿ ಕಾಣಿಸಿದರೂ, ಸ್ಥಿರತೆಯನ್ನು ಕಾಯ್ದುಕೊಳ್ಳಲಿಲ್ಲ. ಫೀಲ್ಡಿಂಗ್‌ನಲ್ಲಿಯೂ ತಂಡ ಕೆಲವು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿತು, ಇದು ಗೆಲುವಿನ ಅವಕಾಶಗಳನ್ನು ಕಸಿದುಕೊಂಡಿತು ಎಂದು ತಿಳಿಸಿದ್ದಾರೆ.

ಶಮಿ ವೈಫಲ್ಯ ದೊಡ್ಡ ಪೆಟ್ಟು

ಮೊಹಮ್ಮದ್ ಶಮಿಯ ಕಳಪೆ ಫಾರ್ಮ್ ತಂಡಕ್ಕೆ ಮತ್ತೊಂದು ಆಘಾತವಾಗಿತ್ತು. 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದ ಶಮಿ, 11.23 ರ ಎಕಾನಮಿಯೊಂದಿಗೆ ದುಬಾರಿಯಾಗಿ ಕಾಣಿಸಿದರು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅವರನ್ನು ತಂಡದಿಂದ ಕೈಬಿಡಲಾಯಿತು, ಮತ್ತು ನಾಯಕ ಪ್ಯಾಟ್ ಕಮಿನ್ಸ್ ಆರಂಭಿಕ ಓವರ್‌ಗಳಲ್ಲಿ 3 ವಿಕೆಟ್‌ಗಳೊಂದಿಗೆ ಅದ್ಭುತವಾಗಿ ಬೌಲಿಂಗ್ ಮಾಡಿದರು. “ಶಮಿ ಈ ಋತುವಿನಲ್ಲಿ ಕಷ್ಟಪಟ್ಟಿದ್ದಾರೆ, ಆದರೆ ಅವರಿಗೆ ಯಶ ಸಿಗಲಿಲ್ಲ,” ಎಂದು ವೆಟ್ಟೋರಿ ಶಮಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಡೆಲ್ಲಿ ವಿರುದ್ಧದ ಪಂದ್ಯವು ಎಸ್‌ಆರ್‌ಎಚ್‌ಗೆ ಗೆಲ್ಲಲೇಬೇಕಾದ್ದಾಗಿತ್ತು. ಕಮಿನ್ಸ್‌ನ ನಾಯಕತ್ವದಲ್ಲಿ ಬೌಲರ್‌ಗಳು ಡೆಲ್ಲಿಯನ್ನು 133 ರನ್‌ಗೆ ಸೀಮಿತಗೊಳಿಸಿದ್ದರು, ಆದರೆ ಮಳೆ ತಂಡದ ಭರವಸೆಯನ್ನು ಧೂಳೀಪಟಗೊಳಿಸಿತು. ” ಇದು ನಮ್ಮ ಸಂಪೂರ್ಣ ಪ್ರದರ್ಶನದ ಆರಂಭವಾಗಿತ್ತು, ಆದರೆ ಮಳೆಯಿಂದಾಗಿ ಅದನ್ನು ಪೂರ್ಣಗೊಳಿಸಲಾಗಲಿಲ್ಲ,” ಎಂದು ವೆಟ್ಟೋರಿ ವಿಷಾದಿಸಿದರು. ಈಗ ಎಸ್‌ಆರ್‌ಎಚ್ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಗೌರವಕ್ಕಾಗಿ ಆಡಲಿದೆ, ಆದರೆ ಈ ಋತುವಿನ ವೈಫಲ್ಯಗಳಿಂದ ಪಾಠ ಕಲಿತು ಮುಂದಿನ ವರ್ಷಕ್ಕೆ ಸಿದ್ಧತೆ ನಡೆಸಬೇಕಿದೆ.