Last Updated:
ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್ನ 26ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದೆ. ನಿಕೋಲಸ್ ಪೂರನ್ ಮತ್ತು ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿದರು.
ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಪಿಎಲ್ನ 26ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ವಿಕೆಟ್ಗಳ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಗುಜರಾತ್ ತಂಡ ಲಕ್ನೋ ತಂಡಕ್ಕೆ 181 ರನ್ಗಳ ಗುರಿಯನ್ನು ನೀಡಿತ್ತು. ಈ ಮೊತ್ತವನ್ನ ಲಖನೌ ಸೂಪರ್ ಜೈಂಟ್ಸ್ 19.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಐಡೆನ್ ಮಾರ್ಕ್ರಮ್ ಹಾಗೂ ರಿಷಭ್ ಪಂತ್ ಮೊದಲ ವಿಕೆಟ್ಗೆ 65 ರನ್ಗಳ ಭರ್ಜರಿ ಜೊತೆಯಾಟ ನೀಡಿತು. 9 ವರ್ಷಗಳ ಬಳಿಕ ಆರಂಭಿಕನಾಗಿ ಕಣಕ್ಕಿಳಿದ ನಾಯಕ ರಿಷಭ್ ಪಂತ್, 18 ಎಸೆತಗಳಲ್ಲಿ 4 ಬೌಂಡರಿ ಸಹಿತ 28ರನ್ಗಳಿಸಿ ಔಟ್ ಆದರು. ಆದರೆ 2ನೇ ವಿಕೆಟ್ಗೆ ಮಾರ್ಕ್ರಮ್-ಪೂರನ್ 58 ರನ್ಗಳ ಜೊತೆಯಾಟ ನೀಡಿ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದರು. ಮಾರ್ಕ್ರಮ್ 31 ಎಸೆತಗಳಲ್ಲಿ 9 ಬೌಂಡರಿ,1 ಸಿಕ್ಸರ್ ಸಹಿತ 58 ರನ್ಗಳಿಸಿದರು. ಪೂರನ್ 34 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು.
ಕೊನೆಯಲ್ಲಿ ಬದೋನಿ 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 28 ರನ್ಗಳಿಸಿದರು. ಮಿಲ್ಲರ್ 11 ಎಸೆತಗಳಲ್ಲಿ 7 ರನ್ಗಳಿಸಿದರು. ಅಬ್ದುಲ್ ಸಮದ್ ಅಜೇ 2 ರನ್ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಪ್ರಸಿಧ್ ಕೃಷ್ಣ 26ಕ್ಕೆ2, ವಾಷಿಂಗ್ಟನ್ ಸುಂದರ್, ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.
ಆರಂಭಿಕರಿಬ್ಬರು ಅರ್ಧಶತಕ
ಟಾಸ್ ಸೋತು ಬ್ಯಾಟಿಂಗ್ ಇಳಿದ ಗುಜರಾತ್ ಟೈಟನ್ಸ್ ಅದ್ಭುತ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ಗೆ ನಾಯಕ ಗಿಲ್ ಹಾಗೂ ಸುದರ್ಶನ್ 121 ರನ್ಗಳ ಜೊತೆಯಾಟ ನೀಡಿದರು. ಶುಭ್ಮನ್ ಗಿಲ್ 38 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 60 ರನ್ಗಳಿಸಿ ಅವೇಶ್ ಖಾನ್ ಬೌಲಿಂಗ್ನಲ್ಲಿ ಮಾರ್ಕ್ರಮ್ಗೆ ಕ್ಯಾಚ್ ನೀಡಿ ಔಟ್ ಆದರು. ಇವರ ಬೆನ್ನಲ್ಲೇ 2 ರನ್ಗಳ ಅಂತರದಲ್ಲಿ ಸಾಯಿ ಸುದರ್ಶನ್ ಕೂಡ ಔಟ್ ಆದರು. ಸುದರ್ಶನ್ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 56 ರನ್ಗಳಿಸಿ ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಅನುಭವಿ ಜೋಸ್ ಬಟ್ಲರ್ (16), ವಾಷಿಂಗ್ಟನ್ ಸುಂದರ್ (2) ಬಂದಷ್ಟೇ ವೇಗವಾಗಿ ಔಟ್ ಆದರು. ನಂತರ ಬಂದ ಶೆರ್ಫಾನ್ ರುದರ್ಫೋರ್ಡ್ ರನ್ಗಳಿಸಲು ತಿಣುಕಾಡಿದ 19 ಎಸೆತಗಳಲ್ಲಿ 22 ರನ್ಗಳಿಸಿ ಔಟ್ ಆದರೆ, ಶಾರುಕ್ ಖಾನ್ 6 ಎಸೆತಗಳಲ್ಲಿ ಅಜೇಯ 11 ರನ್ಗಳಿಸಿದರು. ತೆವಾಟಿಯಾ ಸೊನ್ನೆ ಸುತ್ತಿದರೆ, ರಶೀದ್ ಖಾನ್ ಅಜೇಯ 4 ರನ್ಗಳಿಸಿದರು.
ಲಖನೌ ಸೂಪರ್ ಜೈಂಟ್ಸ್ ಪರ ಶಾರ್ದೂಲ್ ಠಾಕೂರ್ 34ಕ್ಕೆ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ 36ಕ್ಕೆ2, ದಿಗ್ವೇಶ್ ಸಿಂಗ್ ರಾಠಿ 24ಕ್ಕೆ 1 ವಿಕೆಟ್ ಪಡೆದರೆ, ಅವೇಶ್ ಖಾನ್ 1 ವಿಕೆಟ್ ಪಡೆದರು.
April 12, 2025 7:33 PM IST