Last Updated:
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2025ರ ಆರಂಭಿಕ ಪಂದ್ಯದಲ್ಲಿ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಗಾಯಕ್ವಾಡ್, ರಚಿನ್ ಬ್ಯಾಟಿಂಗ್ನಲ್ಲಿ ಮಿಂಚಿದರೆ, ನೂರ್ ಅಹ್ಮದ್ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದರು.
ಐಪಿಎಲ್ 2025ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಜಯದಲ್ಲಿ ಅಫ್ಘಾನಿಸ್ತಾನದ ಮಿಸ್ಟರಿ ಸ್ಪಿನ್ನರ್ ನೂರ್ ಅಹ್ಮದ್ (Noor Ahmed) ಅದ್ಭುತ ಬೌಲಿಂಗ್ (4-0-18-4) ಮತ್ತು ನಾಯಕ ರುತುರಾಜ್ ಗಾಯಕ್ವಾಡ್ (53 ರನ್) ಹಾಗೂ ರಾಚಿನ್ ರವೀಂದ್ರ (ಔಟಾಗದೆ 65) ಅವರ ಅರ್ಧಶತಕಗಳು ಪ್ರಮುಖ ಪಾತ್ರ ವಹಿಸಿದವು. ಈ ಗೆಲುವಿನೊಂದಿಗೆ ಸಿಎಸ್‌ಕೆ ತಂಡವು ಋತುವನ್ನು ಭರ್ಜರಿಯಾಗಿ ಆರಂಭಿಸಿದ್ದು, ನಾಯಕ ರುತುರಾಜ್ ಗಾಯಕ್ವಾಡ್ ತಂಡದ ಪ್ರದರ್ಶನಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಕುಸಿದ ಮುಂಬೈ ಇಂಡಿಯನ್ಸ್
ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್ ಗಳಿಸಿತು. ಮುಂಬೈ ಪರ ತಿಲಕ್ ವರ್ಮಾ 31, ನಾಯಕ ಸೂರ್ಯಕುಮಾರ್ ಯಾದವ್ 29 ಹಾಗೂ ದೀಪಕ್ ಚಾಹರ್ ಅಜೇಯ 28 ರನ್ಗಳಿಸಿದರು. ಚೆನ್ನೈ ತಂಡವು 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್ ಗಳಿಸಿ ಗುರಿ ತಲುಪಿತು. ಸಿಎಸ್‌ಕೆ ಪರ ನೂರ್ ಅಹ್ಮದ್ 18ಕ್ಕೆ4 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ 29ಕ್ಕೆ3 ವಿಕೆಟ್ ಪಡೆದು ಮಿಂಚಿದರು.
ನೂರ್ ತಂಡದ ಎಕ್ಸ್ ಫ್ಯಾಕ್ಟರ್
ಗೆಲುವಿನ ನಂತರ ಮಾತನಾಡಿದ ರುತುರಾಜ್ ಗಾಯಕ್ವಾಡ್ “ನಮ್ಮ ಸ್ಪಿನ್ನರ್‌ಗಳು ಆರಂಭದಿಂದಲೂ ಉತ್ತಮವಾಗಿ ಬೌಲಿಂಗ್ ಮಾಡಿದರು. ಖಲೀಲ್ ಕಳೆದ ಎರಡು-ಮೂರು ವರ್ಷಗಳಿಂದ ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನೂರ್ ನಮ್ಮ ತಂಡದ ‘ಎಕ್ಸ್-ಫ್ಯಾಕ್ಟರ್’. ಅವರ ಚೊಚ್ಚಲ ಪಂದ್ಯದಲ್ಲಿ 18 ರನ್‌ಗೆ 4 ವಿಕೆಟ್ ಪಡೆದಿದ್ದು ದೊಡ್ಡ ಸಾಧನೆ ಎಂದು ಅಫ್ಘಾನ್ ಬೌಲರ್ಗೆ ಗೆಲುವಿನ ಕ್ರೆಡಿಟ್ ನೀಡಿದರು.
ತ್ರಿಪಾಠಿ ಪರ ನಿಂತ ನಾಯಕ
” ನಾನು ಔಟಾದ ನಂತರ ಪಂದ್ಯದಲ್ಲಿ ಹಿನ್ನಡೆ ಅನುಭವಿಸಬಹುದು ಎಂದು ನಿರೀಕ್ಷಿಸಿ ಆದರೆ ರಚಿನ್ ಉತ್ತಮ ಆಟವಾಡಿದರು. ನಾಣು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ತಂಡಕ್ಕೆ ಸಮತೋಲನ ತಂದಿದೆ. ರಾಹುಲ್ ತ್ರಿಪಾಠಿ ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಬಲ್ಲರು, ಹಾಗಾಗಿ ಅವರು ಆರಂಭಿಕರಾಗಿ ಆಡಲಿದ್ದಾರೆ” ಎಂದು ತಿಳಿಸಿದರು. ಈ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಕೇವಲ 2ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಸಿಎಸ್‌ಕೆ ಪರ ಆಡುವುದೇ ವಿಶೇಷ
ನೂರ್ ಅಹ್ಮದ್ ಕೈಡ ಐಪಿಎಲ್ನಲ್ಲಿ ಸಿಎಸ್‌ಕೆ ಪರ ಮೊದಲ ಪಂದ್ಯದ ತಮ್ಮ ಅನುಭವವನ್ನು ಹಂಚಿಕೊಂಡರು. “ಪ್ರಪಂಚದಾದ್ಯಂತ ಆಡುವುದು ಒಳ್ಳೆಯದಾದರೂ, ಸಿಎಸ್‌ಕೆ ಪರ ಆಡುವುದು ವಿಶೇಷ. ಈ ಪಂದ್ಯದಲ್ಲಿ ನನ್ನ ನೆಚ್ಚಿನ ವಿಕೆಟ್ ಸೂರ್ಯಕುಮಾರ್ ಯಾದವ್‌ರದ್ದು. ಧೋನಿ ಭಾಯ್‌ರ ಸ್ಟಂಪಿಂಗ್ ಅದ್ಭುತವಾಗಿತ್ತು. ಸ್ಟಂಪ್‌ಗಳ ಹಿಂದೆ ಅವರಿದ್ದಾಗ ಬೌಲಿಂಗ್ ಮಾಡುವುದು ತುಂಬಾ ಸುಲಭ ಎನಿಸುತ್ತದೆ” ಎಂದು ಹೇಳಿದರು.
March 24, 2025 11:32 AM IST